ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇತ್ತಿಚೇಗೆ ಹಮ್ಮಿಕೊಳ್ಳಲಾಗಿದ್ದ ಯುವ ಘರ್ಜನೆ ಕಾರ್ಯಕ್ರಮ ಕ್ಷೇತ್ರದ ಯುವ ಜನತೆಯ ಹಾದಿ ತಪ್ಪಿಸಿದೆ ಎಂದು ಜಿಪಂ ಮಾಜಿ ಸದಸ್ಯ ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡುವ ಆಸೆ ತೋರಿಸಿ ಅವರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಕ್ಷೇತ್ರದಾದ್ಯಂತ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಯುವ ಘರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಆಪಾದಿಸಿದರು.
ಚಿತ್ತಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಸಿಸಿ, ಓರಿಯಂಟ್ ಮತ್ತು ಶ್ರೀ ಸಿಮೆಂಟ್ ಕಂಪೆನಿಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಕೊಡಿಸಲಾಗದ ಪ್ರಿಯಾಂಕ್ ಖರ್ಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಓರಿಯಂಟ್ ಸಿಮೆಂಟ್ ಕಂಪೆನಿಗೆ ತಮ್ಮ ಭೂಮಿ ನೀಡಿದ ಬಡ ರೈತ ಕುಟುಂಬಗಳ 13 ಜನ ಯುವಕರನ್ನು ಕಂಪೆನಿಯು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಇಟಗಾ ಗ್ರಾಮದ ಹತ್ತಿರ ಅವರ ತಂದೆ-ತಾಯಂದಿರು ಅಹೋರಾತ್ರಿ ಧರಣಿ ಕುಳಿತು ಒಂದು ತಿಂಗಳು ಕಳೆದಿದೆ. ಇಲ್ಲಿಯವರೆಗೂ ಕನಿಷ್ಟ ಸೌಜನ್ಯಕ್ಕಾದರೂ ಪ್ರಿಯಾಂಕ್ ಖರ್ಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಕರ ನಿರುದ್ಯೋಗದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚಿರಾಡಿ ಮಾತನಾಡುವ ಪ್ರಿಯಾಂಕ್ ಖರ್ಗೆ ಚಿತ್ತಾಪುರದ ಸಿಮೆಂಟ್ ಕಂಪೆನಿಗಳಲ್ಲಿ ಇಲ್ಲಿಯ ವರೆಗೆ ಎಷ್ಟು ಯುವಕರಿಗೆ ಉದ್ಯೋಗ ಕೊಡಿಸಿದ್ದಿರಿ ಎನ್ನುವುದನ್ನು ಬಹಿರಂಗಪಡಿಸಿ ಎಂದು ಸವಾಲ್ ಹಾಕಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಸಾಯಬಣ್ಣ ಡಿಗ್ಗಿ, ಪುರಸಭೆ ಮಾಜಿ ಸದಸ್ಯ ಸುರೇಶ ಬೆನಕನಳ್ಳಿ, ಮುಖಂಡರಾದ ಭೀಮಣ್ಣ ಸೀಬಾ, ದುರ್ಗಣ್ಣಾ ಯಾಗಾಪೂರ, ಮೇಘರಾಜ ಗುತ್ತೇದಾರ, ರಾಜು ದೊರೆ ಇತರರು ಇದ್ದರು.
ಕೋಲಿ ಸಮಾಜ ಎಸ್ ಟಿಗೆ ಸೇರ್ಪಡೆ ಮಾಡುವ ಕುರಿತು ಬಾಬುರಾವ ಚಿಂಚನಸೂರ ವಿರುದ್ಧ ಮಾತನಾಡುವ ಶಾಸಕ ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ತಂದೆ ಡಾ|ಮಲ್ಲಿಕಾರ್ಜುನ ಖರ್ಗೆ ಏನು ಮಾಡಿದ್ದಾರೆ? ಕೋಲಿ ಸಮಾಜದ ಮತಗಳನ್ನು ಪಡೆದು ಅಧಿಕಾರ ಪಡೆದು ಸಮಾಜಕ್ಕೆ ಮೋಸ ಮಾಡಿದ್ದಿರಿ. ಬರುವ ದಿನಗಳಲ್ಲಿ ಕೋಲಿ ಸಮಾಜದವರ ಬಹುದಿನಗಳ ಎಸ್‌ಟಿ ಬೇಡಿಕೆ ಬಿಜೆಪಿ ಸರಕಾರ ಈಡೇರಿಸುವ ಭರವಸೆ ಇದೆ.
-ಸುರೇಶ ಬೆನಕನಳ್ಳಿ, ಪುರಸಭೆ ಮಾಜಿ ಸದಸ್ಯ