Advertisement

ಕಾಯಕ ಜಾತಿಯಾದದ್ದು ವಿಪರ್ಯಾಸ: ಡಾ|ನಾಯಕ್‌

04:34 PM Apr 17, 2018 | |

ಬೀದರ: ಜಾತಿ ವ್ಯವಸ್ಥೆಯಿಂದ ಸಮಾಜ ತಲ್ಲಣಗೊಂಡಿದ್ದು, ನಮ್ಮೆಲ್ಲರ ಕಾಯಕಗಳು ಜಾತಿಗಳಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಮಾಜಿ ಸಚಿವೆ, ಪ್ರಗತಿಪರ ಚಿಂತಕಿ ಡಾ| ಬಿ.ಟಿ ಲಲಿತಾ ನಾಯಕ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಬಸವ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ಎಂಬ ವಚನ ಅವಲೋಕಿಸಿದರೆ ಜಾತಿ ತನ್ನಿಂದ ತಾನೆ ದೂರ ಹೋಗಬಲ್ಲದು. ಬಸವಣ್ಣ ಸಂಸಾರದಲ್ಲಿದ್ದು ಪಾರಮಾರ್ಥ ಗೆದ್ದಿದ್ದು, ಸಂಸಾರ ಜಂಜಾಟದಿಂದ ಹೊರಬರಲು ಇದು ಪ್ರೇರಣೆ. ದುಷ್ಟ ಗುಣಗಳನ್ನು ಬಿಟ್ಟು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು. 

12ನೇ ಶತಮಾನದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಶರಣರು, ಕಸಗುಡಿಸುವ ಸತ್ಯಕ್ಕ ಸಹಿತ ವಚನಗಳನ್ನು ರಚಿಸಿರುವುದನ್ನು ಗಮನಿಸಿದರೆ ಅದ್ಭುತ ಕ್ರಾಂತಿಯಾಗಿರುವುದು ನಮ್ಮೆಲ್ಲರ ಗಮನಕ್ಕೆ ಬಂದೆ ಬರುತ್ತದೆ. ನಾವು ಬೇರೆಯವರನ್ನು ಅವಲೋಕಿಸುವುದಕ್ಕಿಂತ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಶರಣರ ವಚನಗಳು ಮಾರ್ಗದರ್ಶನ ನೀಡಬಲ್ಲವು ಎಂದು ಕರೆ ನೀಡಿದರು.

ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಶರಣರು ಏಕಕಾಲಕ್ಕೆ ಹಲವಾರು ಕ್ರಾಂತಿಗಳನ್ನು ಮಾಡಿ ವಿಶ್ವದಾಖಲೆ ಮಾಡಿದ್ದಾರೆ. ಬಸವ ಮಹಾಪ್ರವಾದಿ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬುದನ್ನು ಹೇಳಿದರು. ಬುದ್ದನ ದಯೆ, ಏಸುವಿನ ಅನುಕಂಪ, ಪೈಗಂಬರರ ಸಹೋದರತ್ವ, ಮಹಾವೀರರ ಅಹಿಂಸೆ ಗುಣಗಳೆಲ್ಲ ಬಸವಣ್ಣನವರಲ್ಲಿ ಕಾಣಬಹುದಾಗಿದೆ. ಬಸವಣ್ಣ ಇಂದಿನ ಎಂಟನೇ ಅದ್ಭುತವಾಗಿದ್ದಾರೆ ಎಂದರು.

ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬೀದರ ನೆಲದ ಗುಣ ಅದ್ಭುತ. ಇಲ್ಲಿ ಮಾಡಿದ ಮಹಾಕ್ರಾಂತಿ ರಾಜ್ಯಕ್ಕೆ, ದೇಶಕ್ಕೆ ಮುಟ್ಟಿದೆ. ಇಂದಿನ ರ್ಯಾಲಿ ಮತ್ತೂಂದು ಐತಿಹಾಸಿಕ ದಾಖಲೆ ಮಾಡಿದೆ ಎಂದರು. 

Advertisement

ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ದನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೆಲ್ಲರ ಭಾವನೆಗೆ ಇಂಬುನೀಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರಾಜ್ಯ ಸರ್ಕಾರ ತನ್ನ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅಭಿನಂದನಾರ್ಹ ಕಾರ್ಯ ಎಂದರು.  ಶಿವಶರಣಪ್ಪ ವಾಲಿ, ಕಾಶಪ್ಪ ಧನ್ನೂರು, ಶಂಕರೆಪ್ಪ ಹೊನ್ನ, ಗುರುನಾಥ ಕೊಳ್ಳೂರು, ಬಾಬುವಾಲಿ, ರಾಜೇಂದ್ರಕುಮಾರ ಗಂದಗೆ, ಮಾರುತಿ ಬೌದ್ದೆ, ಸೂರ್ಯಕಾಂತ ಅಲ್ಮಾಜೆ, ಶಿವರಾಜ ಪಾಟೀಲ ಅತಿವಾಳ, ಕುಶಾಲ ಪಾಟೀಲ ಖಾಜಾಪುರ, ಪ್ರಭುರಾವ್‌ ವಸ್ಮತೆ, ಡಾ| ರಜನೀಶ ವಾಲಿ, ಸೋಮಶೇಖರ ಪಾಟೀಲ, ಕರುಣಾ ಶಟಕಾರ, ಪಂಪಾಪತಿ ಪಾಟೀಲ, ಶಕುಂತಲಾ ವಾಲಿ ವೇದಿಕೆಯಲ್ಲಿದ್ದರು. ಶಿವಶಂಕರ ಟೋಕರೆ ನಿರೂಪಿಸಿದರು. ಸುರೇಶ ಚೆನ್ನಶೆಟ್ಟಿ ಸ್ವಾಗತಿಸಿದರು. ಬಸವರಾಜ ಭತಮುರ್ಗೆ ವಂದಿಸಿದರು.

ಬಸವ ಕ್ರಾಂತಿ ಪುನರುತ್ಥಾನಗೊಳ್ಳುವ ಕಾಲ ಸನ್ನಿಹಿತವಾಗಿದೆ. 2018 ಲಿಂಗಾಯತರಿಗೆ ಹರ್ಷದ ವರ್ಷ, ನಮಗೆ ಒಂದು ಜಯ ಸಿಕ್ಕಿದೆ. ಈಗ ನಮ್ಮೆಲ್ಲರ ಚಿತ್ತ ದೆಹಲಿಯತ್ತ. ನಾವೆಲ್ಲರೂ ನಮ್ಮ ನಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗುವವರೆಗೆ ದುಡಿಯಬೇಕು. 
 ಡಾ| ಬಸವಲಿಂಗ ಪಟ್ಟದ್ದೇವರು ,ಭಾಲ್ಕಿ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next