Advertisement

ಐಟಿ: ಭಾರತಕ್ಕೆ  ಟ್ರಂಪ್‌ ಶಾಕ್‌

03:45 AM Feb 01, 2017 | |

ವಾಷಿಂಗ್ಟನ್‌/ಹೊಸದಿಲ್ಲಿ: ಮುಸ್ಲಿಂ ದೇಶಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿ ಆಯಿತು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರವಾಗಿ ಭಾರತ, ಅದರಲ್ಲೂ ಬೆಂಗಳೂರಿನ ಮೇಲೆ ಆರ್ಥಿಕ ದಾಳಿ ನಡೆಸಲು ಮುಂದಾಗಿದ್ದಾರೆ.

Advertisement

ಭಾರತೀಯ ಐಟಿ ಕಂಪೆನಿಗಳ ಪ್ರಮುಖ ಅಸ್ತ್ರ “ಎಚ್‌-1ಬಿ’ ವೀಸಾ ಕುರಿತಂತೆ ಕೆಲ ನಿಯಮಗಳನ್ನು ಬದಲಾವಣೆ ಮಾಡಲು ಮುಂದಾಗಿರುವ ಅಮೆರಿಕ, ಈ ವೀಸಾದಡಿ ಅಮೆರಿಕಕ್ಕೆ ಬರುವವರ ಕನಿಷ್ಠ ವೇತನವನ್ನು 1,30,000 ಡಾಲರ್‌(87 ಲಕ್ಷ ರೂ.)ಗೆ ನಿಗದಿ ಮಾಡಲು ಮುಂದಾಗಿದೆ. ಈ ಬಗ್ಗೆ ಸೋಮವಾರ ರಾತ್ರಿ ಅಮೆರಿಕದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಒಂದು ವೇಳೆ ಈ ಮಸೂದೆ ಜಾರಿಯಾದರೆ, ಭಾರತದ ಎಂಜಿನಿಯರ್‌ಗಳ “ಅಮೆರಿಕನ್‌ ಡ್ರೀಮ್‌’ ನುಚ್ಚುನೂರಾಗಲಿದೆ.

ಹೆಚ್ಚು ಕೌಶಲವುಳ್ಳ ಹೊಣೆಗಾರಿಕೆ ಮತ್ತು ನಿಷ್ಪಕ್ಷಪಾತ ಮಸೂದೆ-2017ರ ಪ್ರಮುಖ ಉದ್ದೇಶ ಅಮೆರಿಕಕ್ಕೆ ಬರುತ್ತಿರುವ ವಿದೇಶಿ ಪ್ರತಿಭಾನ್ವಿತರನ್ನು ತಡೆಯುವುದೇ ಆಗಿದೆ. ಮಸೂದೆಯಲ್ಲಿ ಉಲ್ಲೇಖೀಸಿರುವ ಪ್ರಕಾರ 1,30,000 ಡಾಲರ್‌ ಅತ್ಯಂತ ಹೆಚ್ಚಿನ ವೇತನವಾಗಿದೆ. ಅಂದರೆ ಈಗ ಇರುವ 60 ಸಾವಿರ ಡಾಲರ್‌ (40 ಲಕ್ಷ ರೂ.)ನಿಂದ ಇದನ್ನು ದುಪ್ಪಟ್ಟು ಮಾಡಲು ಯೋಜಿಸಲಾಗಿದೆ. ಅಮೆರಿಕದ ಕಂಪೆನಿಗಳಿಗೆ ಈ ಪ್ರಮಾಣದ ವೇತನ ನೀಡಲು ಸಾಧ್ಯವಾಗದೆ, ಅಮೆರಿಕದ ಜನತೆಗೇ ಐಟಿ ಕಂಪೆನಿಗಳು ಉದ್ಯೋಗ ಕೊಡುವ ಅನಿವಾರ್ಯ ಸೃಷ್ಟಿಯಾಗಬಹುದು ಎಂಬುದು ಟ್ರಂಪ್‌ ಆಡಳಿತದ ಲೆಕ್ಕಾಚಾರ.

ಆದರೆ, ಮಸೂದೆ ಮಂಡಿಸಿದ ಕ್ಯಾಲಿಫೋರ್ನಿಯಾದ ಸದಸ್ಯ ಝೋ ಲಾಫ್ಗ್ರೆನ್‌ ಅವರು, “ವಿದೇಶದಿಂದ ಅಮೆರಿಕಕ್ಕೆ ಬರುವ ಅತ್ಯಂತ ಹೆಚ್ಚು ಪ್ರತಿಭೆಯುಳ್ಳ ಉದ್ಯೋಗಿಗಳಿಗೆ ನ್ಯಾಯ ಸಿಗಬೇಕು. ಅವರಿಗೆ ಈಗ ಬರುತ್ತಿರುವ ವೇತನ ಕಡಿಮೆ. ಒಂದು ಸಮೀಕ್ಷೆ ಪ್ರಕಾರ, ಇಲ್ಲಿನ ಕಂಪೆನಿಗಳು ಶೇ.200ರಷ್ಟು ವೇತನ ನೀಡಲು ಮುಂದಾಗಿವೆ. ಹೀಗಾಗಿ ಅವರಿಗೆ ಉತ್ತಮ ವೇತನ ಸಿಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಹೊಡೆತ?: ಅಮೆರಿಕದ ಈ ಯೋಜಿತ ಮಸೂದೆಯಿಂದ ಬೇರೆ ಎಲ್ಲ ದೇಶಗಳಿಗಿಂತ ಹೆಚ್ಚಾಗಿ ನಷ್ಟವಾಗುವುದು ಭಾರತಕ್ಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೊದಲನೆಯದಾಗಿ, ಬೆಂಗಳೂರಿನ ಇನ್ಫೋಸಿಸ್‌, ವಿಪ್ರೋ, ಟಿಸಿಎಸ್‌, ಮಹೀಂದ್ರಾ ಟೆಕ್‌ ಸಹಿತ ಭಾರತದ ಕಂಪೆನಿಗಳು ಅಮೆರಿಕದ ಸಿಲಿಕಾನ್‌ ಸಿಟಿ ಎಂದೇ ಖ್ಯಾತಿ ಪಡೆದಿರುವ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕಚೇರಿಗಳನ್ನು ಹೊಂದಿವೆ.  ಇವರೆಲ್ಲರೂ ಹೆಚ್ಚಿನ ವೇತನ ನೀಡಲಾರದೆ ಅಲ್ಲಿನವರಿಗೇ ಕೆಲಸ ಕೊಡಬೇಕು. ಎರಡನೆಯದಾಗಿ, ಇಲ್ಲಿನ ಇನ್ಫೋಸಿಸ್‌ನಂಥ ಕಂಪೆನಿಗಳು ಅಮೆರಿಕದಲ್ಲಿರುವ ತಮ್ಮ ಶಾಖೆಗಳಲ್ಲಿ  ಶೇ. 60ರಷ್ಟು ಉದ್ಯೋಗವನ್ನು ಭಾರತೀಯರಿಗೇ ನೀಡಿವೆ. ಎಚ್‌-1ಬಿ ವೀಸಾ ನಿಯಮ ಬಿಗಿಯಾದ ಮೇಲೆ ಇವರಲ್ಲಿ ಹೆಚ್ಚಿನವರನ್ನು ವಾಪಸ್‌ ದೇಶಕ್ಕೆ ಕಳುಹಿಸಬೇಕಾದ ಅನಿ ವಾರ್ಯ ಸೃಷ್ಟಿಯಾಗಲಿದೆ ಎನ್ನಲಾಗಿದೆ. ಇದಲ್ಲದೆ, ಹೆಚ್ಚಾಗಿ ಅಮೆರಿಕದ ಸಿಲಿಕಾನ್‌ ಸಿಟಿಯಲ್ಲಿರುವವರು ಬೆಂಗಳೂರಿನವರೇ. ಇವರೂ ವಾಪಸ್‌ ಬರಬೇಕಾದ ಪ್ರಸಂಗ ಎದುರಾದರೂ ಆಗಬಹುದು.

Advertisement

ಭಾರತಕ್ಕಲ್ಲ, ಅಮೆರಿಕಕ್ಕೇ ನಷ್ಟ: ಭಾರತದಲ್ಲಿರುವ ಐಟಿ ತಜ್ಞರು ಬೇರೆಯದ್ದೇ ವಾದ ಮುಂದಿಡುತ್ತಾರೆ. ಎಚ್‌-1ಬಿ ವೀಸಾ ನಿಯಮಗಳನ್ನು ಬಿಗಿ ಮಾಡಬಹುದು. ಆದರೆ ಅವರಿಗೆ ಕೆಲಸ ಮಾಡಲು ಜನ ಬೇಕಲ್ಲವೇ? ಈಗಾಗಲೇ ಅಮೆರಿಕದ ಕಂಪೆನಿಗಳು ಪ್ರತಿಭಾನ್ವಿತರ ಶೋಧದಲ್ಲಿ ಸಿಲುಕಿ ಸೋತು ಹೋಗಿವೆ. ಅನಿವಾರ್ಯವಾಗಿ ಭಾರತದಂಥ ದೇಶದತ್ತ ಮುಖ ಮಾಡಿವೆ. ಕನಿಷ್ಠ ವೇತನ ಹೆಚ್ಚು ಮಾಡುವ ಪ್ರಸ್ತಾವದಿಂದ 50 ಜನರ ಜಾಗದಲ್ಲಿ ಕೊಂಚ ಕಡಿಮೆ ಮಂದಿ ಹೋಗಬಹುದು. ಆದರೆ ಹೆಚ್ಚಿನ ಹೊಡೆತವೇನೂ ಬೀಳುವುದಿಲ್ಲ ಎಂದಿದ್ದಾರೆ.

ಎಚ್‌-1ಬಿ ವೀಸಾ: ಭಾರತವೇ ಮುಂದು
ಈಗಾಗಲೇ ಅಮೆರಿಕ ಎಚ್‌-1ಬಿ ಮತ್ತು ಎಲ್‌-1 ವೀಸಾದ ಶುಲ್ಕವನ್ನು ಬೆಟ್ಟದಷ್ಟು ಹೆಚ್ಚಿಸಿದ್ದರೂ ಈ ವೀಸಾಗಳನ್ನು ಕೇಳಿಕೊಂಡು ಅರ್ಜಿ ಹಾಕುವವರಲ್ಲಿ ಭಾರತೀಯರೇ ಹೆಚ್ಚು. ಇಡೀ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ 
ಶೇ. 70 ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆಯುತ್ತಾರೆ ಎಂದು ಅಮೆರಿಕದ ರಾಯಭಾರ ಕಚೇರಿಯ ಕಾರ್ಯದರ್ಶಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಈ ವೀಸಾಗೆ ಹೆಚ್ಚು ಅರ್ಹತೆ ಹೊಂದಿರುವವರೂ ಭಾರತೀಯರೇ ಆಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕಕ್ಕೆ ಆತಂಕದ ಮನವರಿಕೆ
ಅಮೆರಿಕದ ಕಠಿನ ವೀಸಾ ನೀತಿ ಯಿಂದಾಗಿ ಭಾರತದಲ್ಲಿ ಷೇರುಪೇಟೆ ಅಲ್ಲೋಲ ಕಲ್ಲೋಲವಾಗುತ್ತಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿದೆ. ಅಮೆರಿಕದ ಜತೆ ತಮ್ಮ ಆತಂಕ ವನ್ನು ವ್ಯಕ್ತಪಡಿಸುವುದಾಗಿ ಅದು ಹೇಳಿದೆ. ಡೊನಾಲ್ಡ್‌ ಟ್ರಂಪ್‌ ಅವರ ಸರಕಾರದೊಂದಿಗೆ ಎಲ್ಲ ರೀತಿಯ ಮಾತುಕತೆ ನಡೆಸುವು ದಾಗಿ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕಾಸ್‌ ಸ್ವರೂಪ್‌ ಅವರು ಹೇಳಿದ್ದಾರೆ.

ಏನಿದು ಎಚ್‌ 1ಬಿ ವೀಸಾ?
ಅಮೆರಿಕ ಸರಕಾರ ಕೊಡುವ ವಲಸೇತರ ವೀಸಾ. ವಿಶೇಷವಾಗಿ ಕೌಶಲ ಹೊಂದಿದ ವಿದೇಶಿ ಕೆಲಸಗಾರರಿಗೆ ಈ ವೀಸಾವನ್ನು ಕೊಡಲಾಗುತ್ತದೆ. ಉನ್ನತ ಶಿಕ್ಷಣ ಪಡೆದ, ನುರಿತ ಕೆಲಸಗಾರರಿಗೆಂದೇ ಇದನ್ನು ಕೊಡಲಾಗುತ್ತದೆ. ವಿಜ್ಞಾನಿಗಳು, ಎಂಜಿನಿಯರ್‌ಗಳು, ಕಂಪ್ಯೂಟರ್‌ ಪ್ರೋಗ್ರಾಮರ್‌ಗಳು, ವೈದ್ಯಕೀಯ ವಿಭಾಗದವರು ಈ ವೀಸಾಕ್ಕೆ ಅರ್ಹರು. ವೈಯಕ್ತಿಕವಾಗಿ ಈ ವೀಸಾವನ್ನು ನೀಡಲಾಗುವುದಿಲ್ಲ. ಬದಲಿಗೆ ಅಮೆರಿಕದಲ್ಲಿನ  ಕಂಪೆನಿಗಳ ಮೂಲಕವೇ ಈ ವೀಸಾ ವನ್ನು ನೀಡಲಾಗುತ್ತದೆ. ಎಚ್‌ 1ಬಿ ವೀಸಾ ಪಡೆದ ನೌಕರ 6 ವರ್ಷಗಳ ಕಾಲ ಅಮೆರಿಕದ ಕಂಪೆನಿಗೆ ಕೆಲಸ ಮಾಡಬಹುದಾಗಿದೆ. ಇದರೊಂದಿಗೆ 6 ವರ್ಷ ಮುಕ್ತಾಯದ ಒಳಗೆ ಅಮೆರಿಕ ನಾಗರಿಕತ್ವಕ್ಕೆ ಆತ ಅರ್ಜಿಯನ್ನೂ ಹಾಕಬಹುದು. ಒಂದು ವೇಳೆ ಹಾಕದೇ ಇದ್ದಲ್ಲಿ ಎಚ್‌ 1ಬಿ ವೀಸಾ ಅವಧಿ ಮುಕ್ತಾಯವಾದರೆ ಆತ ಒಂದು ವರ್ಷ ಕಾಲ ದೇಶದಿಂದ ಹೊರಕ್ಕಿದ್ದು ಬಳಿಕ ಮತ್ತೆ ಕಂಪೆ‌ನಿ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next