ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗದ ವಿಶೇಷ ನೇಮಕಾತಿ ಸಮಿತಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿರುವ ಪತ್ರವನ್ನೂ ಟ್ವೀಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿ ಹುದ್ದೆ ಗಳನ್ನು ಮತ್ತು 150 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆ ಗಳನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರವು ಉಲ್ಲೇಖಿತ ಪತ್ರದಲ್ಲಿ ಅನುಮೋದನೆ ನೀಡಿದೆ. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಜಿಲ್ಲಾ ಧಿಕಾರಿ ಅಧ್ಯಕ್ಷತೆಯಲ್ಲಿ ಅಲ್ಪಾವಧಿ ಟೆಂಡರ್ ಅನ್ನು ನಿಯಮಾನುಸಾರ ಕರೆಯುವ ಮೂಲಕ ಹೊರಗುತ್ತಿಗೆ ಆಧಾರ ದರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹುದ್ದೆ ಹಾಗೂ ವಿದ್ಯಾರ್ಹತೆ
ಫಾರ್ಮಸಿ ಅಧಿಕಾರಿ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಇನ್ ಫಾರ್ಮಸಿ ಹೊಂದಿರಬೇಕು, ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.
ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು, ಪ್ರಯೋಗಶಾಲಾ ತಂತ್ರ ಜತೆಯಲ್ಲಿ 2 ವರ್ಷದ ಕರ್ನಾಟಕ ವೊಕೇಷನಲ್ ಶೈಕ್ಷಣಿಕ ಬೋರ್ಡ್‌ನಿಂದ ಡಿಪ್ಲೊಮಾ ಓದಿರಬೇಕು ಅಥವಾ ಪಿಯುಸಿ (ವಿಜ್ಞಾನ) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷದ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿರಬೇಕು ಅಥವಾ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯು ನಡೆಸುವ 3 ವರ್ಷದ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಡಿಪ್ಲೊಮಾ ಹೊಂದಿರಬೇಕು.