Advertisement

ವಿದೇಶಿ ಹೂಡಿಕೆ ಮೇಲೆ ಐಟಿ ಕಣ್ಣು

06:35 AM Aug 04, 2017 | Harsha Rao |

ಬೆಂಗಳೂರು: ರಾಜ್ಯದ “ಪವರ್‌’ ಫ‌ುಲ್‌ ಸಚಿವ ಡಿ.ಕೆ. ಶಿವ ಕುಮಾರ್‌ ಕುಟುಂಬ ಸದಸ್ಯರು, ಆಪ್ತರ ನಿವಾಸ ಹಾಗೂ ಕಚೇರಿ ಗಳ ಮೇಲಿನ ಐಟಿ ದಾಳಿ ಗುರುವಾರವೂ ನಡೆದಿದ್ದು, ದೇಶ – ವಿದೇಶಗಳಲ್ಲಿ ಹೂಡಿಕೆ ಮಾಡಿರುವ ದಾಖಲೆ ಪತ್ರಗಳೂ ಸಿಕ್ಕಿವೆ ಎಂದು ಹೇಳಲಾಗಿದೆ. ಸಿಂಗಾಪುರ ಸಹಿತ ವಿದೇಶ ಗಳಲ್ಲಿ ಡಿಕೆಶಿ ಹೂಡಿಕೆ ಮಾಡಿದ್ದಾರೆ ಎಂದು ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖೀಸಿ ಪಿಟಿಐ ಸುದ್ದಿ ಸಂಸ್ಥೆ  ತಿಳಿಸಿದೆ.

Advertisement

ಬುಧವಾರ ಬೆಳಗ್ಗೆ ಶುರುವಾಗಿದ್ದ ಐಟಿ ದಾಳಿ, ಗುರುವಾರವೂ ಡಿಕೆಶಿ, ಜೋತಿಷಿ ದ್ವಾರಕಾನಾಥ್‌, ಸ್ನೇಹಿತ ಸುಭಾಷ್‌ ಬಾಲಾಜಿ, ಶರ್ಮಾ ಟ್ರಾವೆಲ್ಸ್‌ನ ಸುರೇಶ್‌ ಶರ್ಮಾ, ಮಾವ ತಿಮ್ಮಯ್ಯ, ಅವರ ಆಪ್ತ ಎಡ್ವಿನ್‌ ನಿವಾಸ ಸಹಿತ 69 ಕಡೆಗಳಲ್ಲಿ ನಡೆಯಿತು. ಈ ವೇಳೆ ಯಾರನ್ನೂ ಹೊರಹೋಗದಂತೆ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಸದಾಶಿವನಗರದ ಡಿಕೆಶಿ ಅವರ “ಕೆಂಕೇರಿ’ಯಲ್ಲಿದ್ದ ಲಾಕರ್‌ಗಳ ಬೀಗ ಮತ್ತು ರಹಸ್ಯ ನಂಬರ್‌ಗಳನ್ನು ನೀಡದೆ ಹೋದಾಗ ನಕಲಿ ಕೀ ತಯಾರಕರನ್ನು ಕರೆಸಿದ ಅಧಿಕಾರಿಗಳು ಲಾಕರ್‌ ತೆರೆ ಸಿದರು. ಇಲ್ಲಿದ್ದ  ದಾಖಲೆ ಪತ್ರ, ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜತೆಗೆ ಮೈಸೂರಿನಲ್ಲಿರುವ ಮಾವ ತಿಮ್ಮಯ್ಯ ಅವರ ನಿವಾಸದಲ್ಲೂ ಶೋಧ ಮುಂದುವರಿಸಿ ಅವರ ಪುತ್ರ ಸತ್ಯನಾರಾಯಣ ಹಾಗೂ ತಿಮ್ಮಯ್ಯ ಆಪ್ತ ಎಡ್ವಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಈ ಮಧ್ಯೆ, ಐಟಿ ಪರಿಶೀಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸದ್ಯದಲ್ಲೇ ಎಫ್ಐಆರ್‌ ದಾಖಲಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಹೇಳಿಕೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಬುಧವಾರ ಬೆಳಗ್ಗೆ 7.30ರಿಂದ ರಾತ್ರಿ 10.45ರವರೆಗೆ ಸತತ 20 ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದೆ.  ಸದಾಶಿವನಗರದ ಮನೆಯಲ್ಲಿ ಕೆಲ ಮಹತ್ವದ 20 ಪುಟಗಳ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ನಗದು, ಚಿನ್ನಾಭರಣ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

ಆದರೆ ಮೂಲಗಳ ಪ್ರಕಾರ ದಿಲ್ಲಿಯ ನಿವಾಸದಲ್ಲಿ 8.33 ಕೋಟಿ ರೂ., ಬೆಂಗಳೂರಿನ ನಿವಾಸದಲ್ಲಿ 2.50 ಕೋಟಿ ರೂ. ಹಾಗೂ ಮೈಸೂರಿನ ನಿವಾಸದಲ್ಲಿ 60 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಗುರುವಾರವೂ ಲಾಕರ್‌ಗಳಲ್ಲಿ ನಗದು ಸಿಕ್ಕಿದೆ ಎಂದು ಹೇಳಲಾಗಿದೆ. ಈ ಬಗ್ಗೆ  ಸಂಪೂರ್ಣವಾಗಿ ಪರಿಶೀಲನೆ ಬಳಿಕ ಒಟ್ಟಾರೆ ನಗದು ಹಾಗೂ ದಾಖಲೆಗಳ ಮೌಲ್ಯವನ್ನು ಬಿಡುಗಡೆ ಮಾಡುತ್ತೇವೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next