ನಿರ್ದೇಶಕ ಮಂಜು ಸ್ವರಾಜ್ ಅವರು “ಪಟಾಕಿ’ ಸಿನಿಮಾ ಮಾಡುವಾಗ ಅನೇಕರು ಒಂದು ಸಂದೇಹ ವ್ಯಕ್ತಪಡಿಸಿದರಂತೆ. “ಗಣೇಶ್ ಅವರನ್ನು ಪೊಲೀಸ್ ಪಾತ್ರದಲ್ಲಿ ಊಹಿಸಿಕೊಳ್ಳೋಕೆ ಸಾಧ್ಯನಾ’ ಎಂದು ಅನೇಕರು ಕೇಳಿದರಂತೆ. ಈ ಪ್ರಶ್ನೆಗೆ ಮಂಜು ಸ್ವರಾಜ್ ಈಗ ಉತ್ತರಿಸಿದ್ದಾರೆ. “ಖಂಡಿತಾ ಗಣೇಶ್ ಅವರನ್ನು ಪೊಲೀಸ್ ಪಾತ್ರದಲ್ಲಿ ಊಹಿಸಿಕೊಳ್ಳೋಕೆ ಸಾಧ್ಯ. ಚಿತ್ರದ ಮೊದಲ ಪ್ರತಿ ನೋಡಿದ ನಂತರ ನಾನು ಧೈರ್ಯವಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಪಾತ್ರ ಅವರಿಗೆ ತುಂಬಾ ಹೊಂದಿಕೆಯಾಗಿದೆ. ಬೇರೆ ತರಹದ ಪಾತ್ರದ ಮೂಲಕ ಪ್ರೇಕ್ಷಕರಿಗೆ ಮಜಾ ನೀಡಲಿದ್ದಾರೆ’ ಎಂದು ಹೇಳಿಕೊಂಡರು ಮಂಜು ಸ್ವರಾಜ್. ಅದಕ್ಕೆ ಸಾಕ್ಷಿಯಾಗಿ ಚಿತ್ರದ ಟ್ರೇಲರ್ ಸಖತ್ ಹಿಟ್ ಆಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆಯುವ ಮೂಲಕ ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಅಂದಹಾಗೆ, “ಪಟಾಕಿ’ ತೆಲುಗಿನ “ಪಟಾಸ್’ ಚಿತ್ರದ ರೀಮೇಕ್. ನಿರ್ದೇಶಕ ಮಂಜು ಸ್ವರಾಜ್ ಮೂಲ ಚಿತ್ರದ ಒನ್‌ಲೈನ್ ಇಟ್ಟುಕೊಂಡು ಉಳಿದಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರಂತೆ. “ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಶೇ 40 ರಷ್ಟು ಬದಲಾಗಿದ್ದು, ಒಂದಷ್ಟು ಹೊಸ ಪಾತ್ರಗಳನ್ನು ಸೇರಿಸಿದ್ದೇವೆ’ ಎಂದರು. ಇನ್ನು, ಮಂಜು ಸ್ವರಾಜ್‌ಗೆ ರೀಮೇಕ್ ಮಾಡೋದು ಕಷ್ಟದ ಕೆಲಸವಂತೆ. “ಒಂದು ದೃಶ್ಯ ಹೇಗಿದೆ ಎಂಬುದು ಜನರಿಗೆ ಗೊತ್ತಿರುತ್ತದೆ. ಹಾಗಾಗಿ, ರೀಮೇಕ್ ಮಾಡುವಾಗ ಅದನ್ನು ಹೇಗೆ ಭಿನ್ನವಾಗಿ ಮತ್ತು ಸುಂದರವಾಗಿ ತೋರಿಸುತ್ತಾರೆಂಬ ಲೆಕ್ಕಾಚಾರ ಶುರುವಾಗುತ್ತದೆ. ಅದೇ ಸ್ವಮೇಕ್ ಸಿನಿಮಾವಾದರೆ ಒಂದು ದೃಶ್ಯದ ಕಲ್ಪನೆ ಕೇವಲ ನಿರ್ದೇಶಕನಿಗಷ್ಟೇ ಇರುತ್ತದೆ’ ಎಂದು ರೀಮೇಕ್ ಕಷ್ಟದ ಬಗ್ಗೆ ಹೇಳಿಕೊಂಡರು ಮಂಜು ಸ್ವರಾಜ್. ಇನ್ನು, ಮಂಜು ಸ್ವರಾಜ್, ನಿರ್ಮಾಪಕ ಎಸ್.ವಿ. ಬಾಬು ಅವರ ಸಿನಿಮಾ ಪ್ರೀತಿಯ ಬಗ್ಗೆ ಹೇಳಲು ಮರೆಯಲಿಲ್ಲ. “ನನ್ನ ಕೆರಿಯರ್‌ನಲ್ಲಿ ನೋಡಿದ ಕೆಲವೇ ಕೆಲವು ಪ್ಯಾಶನೇಟ್ ನಿರ್ಮಾಪಕರಲ್ಲಿ ಬಾಬು ಅವರು ಒಬ್ಬರು. ಸಿನಿಮಾವನ್ನು ತುಂಬಾ ಪ್ರೀತಿಸುತ್ತಾರೆ. ಇವತ್ತು ಸಿನಿಮಾ ಇಷ್ಟೊಂದು ಅದ್ಧೂರಿಯಾಗಿ ಮೂಡಿಬರಲು ಅವರು ಕಾರಣ’ ಎಂದರು.
ನಿರ್ಮಾಪಕ ಎಸ್.ವಿ.ಬಾಬು ಅವರು ಈ ಸಿನಿಮಾ ಮಾಡಲು ಕಾರಣ ಸಾಯಿಕುಮಾರ್ ಅಂತೆ. ತೆಲುಗು ಚಿತ್ರ “ಪಟಾಸ್’ ಬಿಡುಗಡೆಯಾದ ದಿನ ಬಾಬು ಅವರಿಗೆ ಫೋನ್ ಮಾಡಿ, “ಈ ಸಿನಿಮಾ ತುಂಬಾ ಚೆನ್ನಾಗಿದೆ. ಇದರ ಕನ್ನಡ ರೀಮೇಕ್ ರೈಟ್ಸ್ ಪಡೆದುಕೊಳ್ಳಿ. ನಾನು ನಟಿಸುತ್ತೇನೆ’ ಎಂದರಂತೆ. ಅದರಂತೆ ಸಿನಿಮಾ ನೋಡಿದ ಬಾಬು ಅವರಿಗೆ ಇಷ್ಟವಾಗಿ ರೈಟ್ಸ್ ತಗೊಂಡು ಈಗ ಸಿನಿಮಾ ಕೂಡಾ ಮುಗಿಸಿದ್ದಾರೆ. ಗಣೇಶ್‌ರಿಂದ ಹಿಡಿದು ಪ್ರತಿ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದು, ಸಾಕಷ್ಟು ಹೊಸ ವಿಷಯಗಳನ್ನು ಈ ಸಿನಿಮಾದಲ್ಲಿ ಸೇರಿಸಿದ್ದಾಗಿ ಹೇಳಿದರು. ಚಿತ್ರವನ್ನು ಮೂಲ ನಿರ್ದೇಶಕ ಅನಿಲ್ ರವಿ ಪುಡಿಯವರಿಗೆ ತೋರಿಸಿದರಂತೆ ಎಸ್.ವಿ.ಬಾಬು. ಸಿನಿಮಾ ನೋಡಿ ಖುಷಿಯಾದ ರವಿ ಪುಡಿ, ಸಾಕಷ್ಟು ಹೊಸ ವಿಷಯಗಳನ್ನು ಸೇರಿಸಿದ್ದೀರಿ. ಖಂಡಿತಾ ಜನಕ್ಕೆ ಇಷ್ಟವಾಗುತ್ತದೆ ಎಂದು ಹೇಳಿದರಂತೆ. ಚಿತ್ರದ ಹಾಡೊಂದು ಬಾಕಿ ಇದ್ದು, ಆ ಹಾಡನ್ನು ಚಿತ್ರೀಕರಿಸಿ ಮೇ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡರು ಎಸ್.ವಿ.ಬಾಬು. ಚಿತ್ರದಲ್ಲಿ ನಟಿಸಿದ ರನ್ಯಾ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇಲ್ಲಿ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಪ್ರಿಯಾಂಕಾ, ತಂಗಿ ಪಾತ್ರದಲ್ಲಿ ನಟಿಸಿದ್ದು, ಒಳ್ಳೆಯ ಬ್ಯಾನರ್‌ನಲ್ಲಿ ನಟಿಸಿದ ಖುಷಿ ಅವರಿಗಿದೆಯಂತೆ.