Advertisement

ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದ ಐಟಿ ಇಲಾಖೆ

02:06 AM Apr 10, 2019 | sudhir |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿ ವಿರೋಧಿಸಿ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೋವಾ ಮತ್ತು ಕರ್ನಾಟಕ ವಿಭಾಗದ ಆದಾಯ ತೆರಿಗೆ ಪ್ರಧಾನ ಆಯುಕ್ತ ಬಿ.ಆರ್‌. ಬಾಲಕೃಷ್ಣನ್‌, ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ.

Advertisement

ರಾಜ್ಯದಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೆ ಕಚೇರಿ ಎದುರು ನೂರಾರು ಮಂದಿ ಪ್ರತಿಭಟನೆ ನಡೆಸಿರುವುದು ಕಾನೂನುಬಾಹಿರ. ಈ ಮೂಲಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆದಾಯ ತೆರಿಗೆ ಇಲಾಖೆ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಾ. 27 ಮತ್ತು 28ರಂದು ವಿಶ್ವಾಸಾರ್ಹ ಮೂಲಗಳ ಖಚಿತ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆದರೆ ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ ರಾಜ್ಯ ಸರಕಾರ ಅದೇ ದಿನ (ಮಾ. 28)ದಂದು ಅಪರಾಹ್ನ 2 ಗಂಟೆ ಸುಮಾರಿಗೆ ಕ್ವೀನ್ಸ್‌ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು.

ಇದರಲ್ಲಿ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವ ಕುಮಾರ್‌, ಸಾ.ರಾ.ಮಹೇಶ್‌, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಇತರ ರಾಜಕೀಯ ಮುಖಂಡರು ಭಾಗವಹಿಸಿದ್ದರು. ಇಲಾಖೆಯ ವಿರುದ್ಧ ಘೋಷಣೆ ಕೂಗಿ ಇಲಾಖಾ ಅಧಿಕಾರಿಗಳ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಸಚಿವರಾದ ಎಚ್‌.ಡಿ.ರೇವಣ್ಣ, ಸಿ.ಎಸ್‌. ಪುಟ್ಟರಾಜು ದುರುದ್ದೇಶಪೂರ್ವಕವಾಗಿ ಐಟಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆ ದಿಕ್ಕು ತಪ್ಪಿಸಲು ಈ ರೀತಿ ಸುಳ್ಳು ಆರೋಪ ಮಾಡಿದ್ದು, ಇದು ಐಟಿ ಇಲಾಖೆ ಮತ್ತು ಅಧಿಕಾರಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಐಟಿ ದಾಳಿಯಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಆದರೂ ಈ ರೀತಿಯಾಗಿ ಪ್ರತಿಭಟನೆ ನಡೆಸಿರುವುದರಿಂದ ಐಟಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ ಎಂದು ದೂರಿನಲ್ಲಿ ಬಾಲಕೃಷ್ಣನ್‌ ಉಲ್ಲೇಖೀಸಿದ್ದಾರೆ.

Advertisement

8.14 ಕೋ.ರೂ. ನಗದು ಜಪ್ತಿ
ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಮೇಲೆ ನಡೆದ ದಾಳಿಯಲ್ಲಿ ಐಟಿ ಅಧಿಕಾರಿಗಳು ದಾಖಲೆಗಳಿಲ್ಲದ 8.14 ಕೋಟಿ ರೂ. ನಗದು ಮತ್ತು 1.69 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ರಾಜ್ಯ ಸರಕಾರದ ಖಜಾನೆಯಿಂದ ಭಾರೀ ಮೊತ್ತದ ಹಣ ಪಡೆದಿರುವುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ಶಾಸಕರು, ಸಚಿವರು, ವಿಧಾನ ಪರಿಷತ್‌ ಸದಸ್ಯರು ಸಹಿತ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಬಾಲಕೃಷ್ಣನ್‌ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next