Advertisement
ಉಪ ಮೆಯರ್ ಭದ್ರೇಗೌಡ ಅವರು ಬುಧವಾರ ಪಾಲಿಕೆಯಲ್ಲಿ 2012-13, 2013-14 ಹಾಗೂ 2014-15ನೇ ಸಾಲಿನ ಆಡಳಿತ ವರದಿ ಮಂಡಿಸಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ವೆಚ್ಚ ಹೆಚ್ಚಾಗಿರುವುದು, ಸಣ್ಣ ಪುಟ್ಟ ಕಾಮಗಾರಿಗಳಿಗೂ ಹೆಚ್ಚು ಹಣ ನೀಡಿರುವ ಉಲ್ಲೇಖವಿದೆ. ತುರ್ತು ಕಾಮಗಾರಿಗಳಿಗೆ 10 ಹಾಗೂ 20 ಲಕ್ಷ ರೂ. ಅನುದಾನ ಎಂಬ ಉಲ್ಲೇಖ ಇದೆಯಾದರೂ ಅದು ಯಾವ ಕಾಮಗಾರಿ ಎಂಬ ಬಗ್ಗೆ ವಿವರಣೆ ಇಲ್ಲ.
Related Articles
Advertisement
ವಾರ್ಡ್ ಸಂಖ್ಯೆ 142 ರ ಕೆಂಪಾಂಬುದಿ ಕೆರೆಯಲ್ಲಿ ರ್‍ಯಾಂಪ್ ಅಳವಡಿಕೆಗೆ 12,52,918 ರೂ., ಈಜು ಕೊಳದ ಪಕ್ಕದಲ್ಲಿರುವ ಮೋರಿ ಕವರಿಂಗ್ ಸ್ಲಾಬ್ 20,77,667 ರೂ. ನಾಮಫಲಕ ಹಾಕುವುದಕ್ಕೆ 20,90,938 ರೂ. ವೆಚ್ಚ ಮಾಡಲಾಗಿದೆ. ಇನ್ನೂ ಆರಂಭವಾಗದ ಕಲ್ಲಹಳ್ಳಿಯ ಸ್ಮಶಾನ ಪ್ರದೇಶ ಅಭಿವೃದ್ಧಿಗೆ (ಈ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕು ಎಂದು ಉಲ್ಲೇಖೀಸಲಾಗಿದೆ) 45 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
2014-15ನೇ ಸಾಲಿನ ವರದಿ: ವಾರ್ಡ್ ಸಂಖ್ಯೆ 65ರ ಕಾಡು ಮಲ್ಲೇಶ್ವರದಲ್ಲಿ ತುರ್ತು ಕಾರ್ಯಗಳಿಗೆ 4,49,893 ರೂ. (ತುರ್ತು ಕಾರ್ಯ ಯಾವುದು ಎಂದು ತಿಳಿಸಿಲ್ಲ) ರಾಜಾಜಿನಗರ, ಮಹಾಲಕ್ಷ್ಮೀಪುರ ಹಾಗೂ ರಾಮಮಂದಿರ ಕಚೇರಿಗಳ ಭದ್ರತೆಗೆ 14,51,112 ರೂ. ವಾರ್ಡ್ ಸಂಖ್ಯೆ 156ಕ್ಕೆ 22 ಲಕ್ಷ ರೂ. ತುರ್ತು ಅನುದಾನ (ಯಾವ ಕಾರಣ ಎಂಬ ಸ್ಪಷ್ಟನೆ ನೀಡಿಲ್ಲ), ವಾರ್ಡ್ 57ರ ಕಾಮಗಾರಿಗೆ 8,50,208 ರೂ. (ಯಾವ ಕಾಮಗಾರಿಗೆ ಎಂಬ ಮಾಹಿತೊಇಯಿಲ್ಲ) ವ್ಯಯಿಸಲಾಗಿದೆ. ವಾರ್ಡ್ 79ರ ಕತ್ತಾಳಿಪಾಳ್ಯದ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಲು 33,69,218 ರೂ. ಹಾಗೂ ಇದೇ ವರ್ಷ ಮತ್ತೆ ಕಾಂಪೌಂಡ್ ನಿರ್ಮಾಣಕ್ಕೆ 3,82,187 ರೂ. ಹೆಚ್ಚುವರಿ ಮೊತ್ತ ವ್ಯಯಿಸಿರುವುದು ವರದಿಯಿಂದ ಬಹಿರಂಗವಾಗಿದೆ.
ಆಡಳಿತ ವಿಕೇಂದ್ರೀಕರಣ “ಕಾಗದದ ಹುಲಿಯಾಗದಿರಲಿ’ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿಬಿಎಂಪಿಯ 8 ವಲಯಗಳಿಗೆ ನಾಲ್ವರು ವಿಶೇಷ ಆಯುಕ್ತರನ್ನು ನೇಮಿಸಿ ಅಧಿಕಾರ ನೀಡಿದೆ. ಅದೇ ರೀತಿ ಆಡಳಿತ ಸುಧಾರಣೆ ಮತ್ತು ನಗರದ ಅಭಿವೃದ್ಧಿ ಉದ್ದೇಶದಿಂದ ಮುಂದಿನ ದಿನಗಳಲ್ಲಿ ವಲಯವಾರು ಆಯವ್ಯಯ ಮಂಡಿಸಿದರೆ ಉತ್ತಮ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹೇಳಿದರು. ಬುಧವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾವನೆ ಮಾಡಿದ ಸದಸ್ಯರು ಸರ್ಕಾರ ವಲಯಗಳ ಉಸ್ತುವಾರಿಗೆ ವಿಶೇಷ ಆಯುಕ್ತರನ್ನು ನೇಮಿಸಿದೆ. ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ ಸ್ಪಷ್ಟಣೆ ನೀಡಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಸರ್ಕಾರ 2 ವಲಯಕ್ಕೆ ಒಬ್ಬ ವಿಶೇಷ ಆಯುಕ್ತರನ್ನು ನೇಮಕಗೊಳಿಸಲು ಆದೇಶ ಮಾಡಿದೆ. ವಿಶೇಷ ಆಯುಕ್ತರ ನೇಮಕ ಮತ್ತು ಅವರ ಅಧಿಕಾರ ವ್ಯಾಪ್ತಿ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ 10 ದಿನದಲ್ಲಿ ಕಚೇರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಈಗ ನೀಡಿರುವ ಅಧಿಕಾರವನ್ನು ವಿಶೇಷ ಆಯುಕ್ತರು ಬಳಸಿಕೊಳ್ಳದಿದ್ದರೆ ಆಡಳಿತ ವಿಕೇಂದ್ರೀಕರಣದ ಪರಿಕಲ್ಪನೆಗೆ ಹಿನ್ನಡೆಯಾಗಲಿದೆ. ಹೊಸದಾಗಿ ನೇಮಕಗೊಂಡಿರುವ ಆಯುಕ್ತರು ಇದೇ ರೀತಿ ಮಾಡಿದರೆ, ಸರ್ಕಾರದ ಆದೇಶ ಕಾಗದಕ್ಕೆ ಸಿಮೀತವಾಗಲಿದೆ. ಹೀಗಾಗಿ, ವಲಯಕ್ಕೆ ನೇಮಿಸಲಾಗಿರುವ ವಿಶೇಷ ಆಯುಕ್ತರಿಗೆ ತಮ್ಮ ಅಧಿಕಾರ ಚಲಾಯಿಸುವಂತೆ ಸೂಚನೆ ನೀಡಲಾಗಿದೆ ಎಂದರು. ನಮಗೆ ಗೌರವ ನೀಡಿ: ಬಿಬಿಎಂಪಿಯಲ್ಲಿ ಚುನಾಯಿತಿ ಪ್ರತಿನಿಧಿಗಳೇ ಸುಪ್ರೀಂ ಆಗಿರುತ್ತಾರೆ. ಆಯುಕ್ತರು ಬಿಬಿಎಂಪಿಯ ಎಲ್ಲಾ ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ಆಯುಕ್ತರು ಹಾಗೂ ನಗರ ಯೋಜನೆ ವಿಶೇಷ ಆಯುಕ್ತರು, ಕೆಆರ್‌ಐಡಿಎಲ್‌ನ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಜಾಬ್ ಕೋಡ್ ನೀಡದೆ ಕಡತ ವಾಪಾಸ್ ಕಳುಹಿಸುತ್ತಿದ್ದಾರೆ ಎಂದು ಸದಸ್ಯರು ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತ ಅನಿಲ್ ಕುಮಾರ್, ಕೆಆರ್‌ಐಡಿಎಲ್ ಬದಲು ಟೆಂಡರ್ ಮೂಲಕ ಕಾಮಗಾರಿ ನಡೆಸಿದರೆ ಪಾರದರ್ಶಕವಾಗಿರಲಿದೆ. ಹೀಗಾಗಿ, ಕೆಲವು ಕಡತಗಳನ್ನು ತಡೆಹಿಡಿಯಲಾಗಿದೆ ಎಂದರು. ಗೊಂದಲಗಳ ನಡುವೆಯೇ ವರದಿ ಮಂಡನೆ
ಬೆಂಗಳೂರು: ಆಡಳಿತ ವರದಿ ಮಂಡನೆ ಕುರಿತು ಬುಧವಾರದ ಬಿಬಿಎಂಪಿ ಕೌನ್ಸಿಲ್ ಸಭೆ ಗೊಂದಲದ ಗೂಡಾಯಿತು. ಗದ್ದಲ, ಕೂಗಾಟ, ಕಾನೂನು ಉಲ್ಲಂಘನೆ ಆರೋಪಗಳ ನಡುವೆಯೇ ಉಪಮೇಯರ್ ಭದ್ರೇಗೌಡ, 2012-13, 2013-14 ಹಾಗೂ 2014-15ನೇ ಸಾಲಿನ ಆಡಳಿತ ವರದಿ ಮಂಡಿಸಿದರು. ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ವಿಷಯ ಪ್ರಸ್ತಾವನೆ ಮಾಡಿದರು. ಈ ಸಂಬಂಧ ಕ್ರಿಯಾಲೋಪ ಎತ್ತಿದ ವಿರೋಧ ಪಕ್ಷದನಾಯಕ ಪದ್ಮನಾಭ ರೆಡ್ಡಿ, ಕೆಎಂಸಿ ಕಾಯ್ದೆ 10ರ ಪ್ರಕಾರ ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಸಭೆ ನಡೆಸುವುದರ ಬಗ್ಗೆ ಕಾನೂನು ಕೋಶದ ಅಧಿಕಾರಿಗಳಿಂದ ಮಾಹಿತಿ ಕೊಡಿಸಿ, ನಮಗೆ ವರದಿ ಮಂಡಿಸುವ ಸಂಬಂಧ ಆಕ್ಷೇಪಣೆಗಳಿಲ್ಲ ಎಂದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಪಾಲಿಕೆ ಕಾನೂನು ಕೋಶದ ಮುಖ್ಯಸ್ಥ ಕೆ.ದೇಶಪಾಂಡೆ, ಉಪಮೇಯರ್ ಭದ್ರೇಗೌಡರು ಆಡಳಿತ ವರದಿ ಮಂಡನೆ ಬಗ್ಗೆ ಕೇಳಲಾಗಿದ್ದ ಸಲಹೆಗೆ ಉತ್ತರಿಸಿದ್ದೇವೆ ಎಂದು ಹೇಳಿ, ಮಾಹಿತಿ ನೀಡದೆ ಜಾರಿಕೊಂಡರು. ಇದರಿಂದ ಗರಂ ಆದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಇದು ಸಭೆ ಎಂಬುದು ನೆನಪಿರಲಿ. ಇಲ್ಲಿ ಮಾತನಾಡುವ ಎಲ್ಲ ವಿಷಯಗಳು ಕಡತಕ್ಕೆ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಗುಣಶೇಖರ್, ಮೇಯರ್ ಹಾಗೂ ಉಪಮೇಯರ್ ಚುನಾವಣೆ ಅಧಿಸೂಚನೆ ಬಳಿಕ ಉಪಮೇಯರ್ ಆಡಳಿತ ವರದಿ ಮಂಡನೆ ಮಾಡುವುದು ಸಮಂಜಸವಲ್ಲ. ಅಧಿಸೂಚನೆ ಹೊರಡಿಸಿದ ಕೂಡಲೇ ಆಡಳಿತಾತ್ಮಕ ನಿರ್ಧಾರಗಳು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ತಕ್ಷಣವೇ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದಾಗಿ ಮೇಯರ್, 15 ನಿಮಿಷ ಕಾಲ ಸಭೆ ಮುಂದೂಡಿ, ಆಯುಕ್ತ ಅನಿಲ್ ಕುಮಾರ್, ಉಪಮೇಯರ್, ಆಡಳಿತ ಪಕ್ಷದ ನಾಯಕ, ಕಾನೂನು ಕೋಶದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದುಕೊಂಡು ಮತ್ತೆ ಸಭೆ ಪ್ರಾರಂಭಿಸಿದರು. ಚರ್ಚೆಯ ನಂತರ ಸ್ಪಷ್ಟಣೆ ನೀಡಿದ ಆಯುಕ್ತ ಅನಿಲ್ ಕುಮಾರ್, ಮೇಯರ್ ಹಾಗೂ ಉಪಮೇಯರ್ ಚುನಾವಣೆ ಅಧಿಸೂಚನೆ ಹೊರಡಿಸಿದರೂ, ಆಡಳಿತ ವರದಿ ಮಂಡನೆಗೆ ನಿರ್ಬಂಧವಿಲ್ಲ. ಕೆಎಂಸಿ ಕಾಯ್ದೆಯಲ್ಲಿಯೂ ಮೇಯರ್ ಚುನಾವಣೆ ಸಂದರ್ಭದಲ್ಲಿ ಆಡಳಿತ ವರದಿ ಮಂಡಿಸುವಂತಿಲ್ಲ ಎಂದು ಉಲ್ಲೇಖೀಸಿಲ್ಲ ಎಂದು ಸಮಜಾಯಿಷಿ ನೀಡಿದರು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ವರದಿ ಮಂಡಿಸಿ ತಪ್ಪು ಮಾಡುತ್ತಿದ್ದಿರಿ?, ಕೆಎಂಸಿ ಕಾಯ್ದೆಯ ಸೆಕ್ಷನ್ 10ಅನ್ನು ಪಾಲನೆ ಮಾಡುವುದಿಲ್ಲ ಎಂದಾದರೆ ತೆಗೆದು ಹಾಕುವುದಕ್ಕೆ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಕಿಡಿಕಾರಿದರು. ಉಪಮೇಯರ್ ಭದ್ರೇಗೌಡ ಅವರು 2012-13, 2013-14 ಹಾಗೂ 2014-15ನೇ ಸಾಲಿನ ಆಡಳಿತ ವರದಿಯನ್ನು ಮಂಡಿಸಿ, ಆಡಳಿತ ವರದಿ ಮಂಡಿಸುವುದು ಉಪಮೇಯರ್ ಜವಾಬ್ದಾರಿಯಾಗಿದೆ. ಕೆಲವರು ವರದಿ ಮಂಡಿಸದಿರುವುದರಿಂದ ಹಲವು ವರ್ಷಗಳ ಆಡಳಿತ ವರದಿ ಮಂಡನೆಯಾಗಿಲ್ಲ ಎಂದರು. ವಿರೋಧ ಪಕ್ಷದ ನಾಯಕಿ: ಆಡಳಿತ ವರದಿ ಮಂಡನೆ ಪ್ರಸ್ತಾವನೆ ವೇಳೆ ಉಪಮೇಯರ್ ಭದ್ರೇಗೌಡ ಅವರು ವಿರೋಧ ಪಕ್ಷದ ನಾಯಕ ಎನ್ನುವ ಬದಲು ವಿರೋಧ ಪಕ್ಷದ ನಾಯಕಿ ಎಂದರು. ಆಗ ಬಿಜೆಪಿ ಸದಸ್ಯರು ನಾಯಕಿ ಅಲ್ಲ ನಾಯಕ ಎಂದು ತಿದ್ದಿದರು. ಈ ವೇಳೆ ವಿರೋಧ ಪಕ್ಷದ ನಾಯಕರೂ ಸೇರಿ ಸಭೆ ನೆಗೆಗಡಲಲ್ಲಿ ತೇಲಿತು.