Advertisement

ಐಟಿ ಕಮಿಷನರ್‌ ಆಯ್ತು, ಈಗ ಎಲೆಕ್ಷನ್‌ ಕಮೀಷನರ್ರಾ?

01:11 PM Apr 27, 2017 | Team Udayavani |

ಮೈಸೂರು: ಈ ಹಿಂದೆ ಐಟಿ ಕಮೀಷನರ್‌ ಆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇದೀಗ ಎಲೆಕ್ಷನ್‌
ಕಮೀಷನರ್‌ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಜ್ಯದಲ್ಲಿ ಅವಧಿಗೂ ಮುನ್ನ
ಚುನಾವಣೆ ನಡೆಯಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಯಾವಾಗ ಎಲೆಕ್ಷನ್‌ ಕಮೀಷನರ್‌ ಆದ್ರು? ಈ ಹಿಂದೆ ಐಟಿ ಕಮೀಷನರ್‌ನಂತೆ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಎಲೆಕ್ಷನ್‌ ಕಮೀಷನರ್‌ನಂತೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನೂ ಮುಂದೆ ಇನ್ನೇನು ಆಗ್ತಾರೆ ನೋಡ್ಬೇಕು ಎಂದು ಲೇವಡಿ ಮಾಡಿದರು.

ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಎತ್ತಿದ ಕೈ.ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನು ಮಾಡಿರುವ
ಯಡಿಯೂರಪ್ಪನವರಂತವರು ಸರ್ಕಾರದ ವಿರುದ್ಧ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಟೀಕಿಸಿದ ಸಿದ್ದರಾಮಯ್ಯ, ಹಿಟ್‌ ಆ್ಯಂಡ್‌ ರನ್‌ ಹೇಳಿಕೆ ನೀಡುವುದರಲ್ಲಿ ಪರಿಣತಿ ಪಡೆದಿರುವ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾಗುತ್ತಿದ್ದ ಉಕ್ಕಿನ ಸೇತುವೆ
ನಿರ್ಮಾಣವನ್ನು ಬಿಜೆಪಿಯವರ ಆರೋಪಕ್ಕೆ ಮಣಿದು ಕೈಬಿಟ್ಟಿಲ್ಲ. ಸಾರ್ವಜನಿಕರ ವಿರೋಧ ಹಾಗೂ ಹಸಿರುಪೀಠ
ತಡೆಕೊಟ್ಟಿದ್ದರಿಂದ ಉಕ್ಕು ಸೇತುವೆ ನಿರ್ಮಾಣವನ್ನು ಕೈಬಿಟ್ಟು ಅದೇ ಮಾರ್ಗದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಚರ್ಚೆ
ನಡೆಯುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಮುಂಗಾರು ವೈಫ‌ಲ್ಯದಿಂದಾಗಿ 4700 ಕೋಟಿ ರೂ. ಪರಿಹಾರ ನೀಡುವಂತೆ ಎನ್‌ಡಿಆರ್‌ಎಫ್ ಮಾರ್ಗ ಸೂಚಿಯ ಅನುಸರಿಸಿ ಮನವಿ ಮಾಡಲಾಗಿತ್ತು. ಆದರೆ ನಮಗೆ 1685 ಕೋಟಿ ರೂ. ನೀಡಿ ತಮಿಳುನಾಡಿಗೆ 4 ಸಾವಿರ ಕೋಟಿ, ಮಹಾರಾಷ್ಟ್ರಕ್ಕೆ 7 ಸಾವಿರ ಕೋಟಿ, ಮಧ್ಯಪ್ರದೇಶಕ್ಕೆ 4 ಸಾವಿರ ಕೋಟಿ ಕೊಟ್ಟು ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದಿ ದ್ದೇನೆ. ಆದರೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹಿಂಗಾರು ಬೆಳೆ ನಷ್ಟ 3100 ಕೋಟಿ ಕೊಡುವಂತೆ ಆಗ್ರಹಿಸಿದ್ದೇನೆ ಎಂದು ತಿಳಿಸಿದರು. ಜಿಎಸ್‌ಟಿಗೆ ನಾವೇನೂ ವಿರೋಧ ವ್ಯಕ್ತಪಡಿಸಿಲ್ಲ. ಗುಜರಾತ್‌ ಸಿಎಂ ಆಗಿದ್ದಾಗ ಜಿಎಸ್‌ಟಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ನರೇಂದ್ರಮೋದಿಯವರೇ ಈಗ ಜಾರಿಗೊಳಿಸುತ್ತಿದ್ದಾರೆ. ಆದರೆ ರಾಜ್ಯಕ್ಕೆ ಆಗುವ ನಷ್ಟವನ್ನು ಭರಿಸುವಂತೆ ಹೇಳಿದ್ದೇವೆ ಎಂದರು.

ವಿಶ್ವನಾಥ್‌ ಕಾಂಗ್ರೆಸ್‌ ತೊರೆಯುವುದಿಲ್ಲ: ಸಿಎಂ
ಎಚ್‌.ವಿಶ್ವನಾಥ್‌ ಅವರು ಈ ಹಿಂದೆ ಕಾಂಗ್ರೆಸ್‌ ನನ್ನ ತಾಯಿ ಇದ್ದಂತೆ ಎಂದು ಹೇಳಿದ್ದರು. ಯಾರಾದರೂ ತನ್ನ ತಾಯಿಯನ್ನು ಬಿಟ್ಟು ಹೋಗುತ್ತಾರಾ? ವಿಶ್ವನಾಥ್‌ರವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯುವುದಿಲ್ಲ.
ಮೊದಲಿನಿಂದಲೂ ವಿಶ್ವನಾಥ್‌ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಿಲ್ಲ. ಈಗಲೂ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next