ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಕೇಂದ್ರ ನಾಯಕರು ಬಿಡುಗಡೆ ಮಾಡಿರುವ ಡೈರಿ ಪ್ರತಿಗಳು “ನಕಲಿ’ (ಫೋರ್ಜರಿ) ಮತ್ತು “ಬಿಡಿ ದಾಖಲೆ’ ಗಳಾಗಿವೆ ಎಂದು ಗೋವಾ ಮತ್ತು ಕರ್ನಾಟಕ ವಿಭಾಗದ ಆದಾಯ ತೆರಿಗೆ ಪ್ರಧಾನ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಹಿಂದೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಮನೆ ಮೇಲೆ ದಾಳಿ ನಡೆಸಿದಾಗ ಪತ್ತೆಯಾದ ಡೈರಿಯ ಹಾಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಅವು ನಕಲು (ಜೆರಾಕ್ಸ್) ಪ್ರತಿಗಳಾಗಿರುವುದರಿಂದ ವಿಶ್ಲೇಷಿ ಸಲು ಸಾಧ್ಯವಿಲ್ಲ ಎಂದು ಪ್ರಯೋಗಾಲಯ ಅಧಿಕಾರಿಗಳು ವರದಿ ನೀಡಿದ್ದರು.
ಜತೆಗೆ, ಸುಪ್ರೀಂ ಕೋರ್ಟ್‌ನ ಕೆಲವು ಪ್ರಕರಣಗಳ ತೀರ್ಪುಗಳ ಪ್ರಕಾರ ಡೈರಿಯ ನಕಲು ಪ್ರತಿಯನ್ನು ಮೌಲ್ಯಯುತ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ಆಂಗ್ಲ ಪಾಕ್ಷಿಕ ಪ್ರಕಟಿಸಿರುವ ಮೊದಲ ಪುಟವನ್ನು ಜಪ್ತಿಯೇ ಮಾಡಿಲ್ಲ. ಹೀಗಾಗಿ ನಮ್ಮ ಪ್ರಕಾರ ಡೈರಿಯ ದಾಖಲೆಗಳು ನಕಲಿ ಎಂದು ಸ್ಪಷ್ಟಪಡಿಸಿದರು. ಈಗ ಈ ಪ್ರತಿಗಳನ್ನು ಮುಂದಿಟ್ಟುಕೊಂಡು ತನಿಖೆ ಮೇಲೆ ಪ್ರಭಾವ ಬೀರಲು ಈ ರೀತಿ ಬಿಡುಗಡೆ ಮಾಡಿರುವ ಸಾಧ್ಯತೆಯಿದೆ ಎಂದು ಬಾಲಕೃಷ್ಣನ್ ಹೇಳಿ ದರು. ಅಲ್ಲದೆ ಇದರಿಂದ ನಮ್ಮ ತನಿಖೆಯನ್ನು ದಾರಿ ತಪ್ಪಿಸಲು ಸಾಧ್ಯವೇ ಇಲ್ಲ ಎಂದೂ ಸ್ಪಷ್ಟಪಡಿಸಿದರು.
ಶುಕ್ರವಾರ ಕಾಂಗ್ರೆಸ್ ನಾಯಕ ರಣದೀಪ್ ಸುಜೇìವಾಲಾ ಬಿಡುಗಡೆ ಮಾಡಿದ ಡೈರಿಯ ದಾಖಲೆಗಳ ವಾಸ್ತವತೆ ಕುರಿತು ಆದಾಯ ತೆರಿಗೆ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ, 2017ರ ಆ.2ರಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಮೇಲಿನ ದಾಳಿ ವೇಳೆ ಈ ಕುರಿತಾದ ಡೈರಿಯದ್ದು ಎನ್ನಲಾದ ಪುಟಗಳ ಬಿಡಿಪ್ರತಿಗಳು ಲಭ್ಯವಾಗಿದ್ದವು. ಹೀಗಾಗಿ ನಕಲು ಪ್ರತಿಗಳ ಪರೀಕ್ಷೆಗಾಗಿ ಅವುಗಳನ್ನು ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿತ್ತು. ಆದರೆ ಮೂಲ ಡೈರಿ ಅಗತ್ಯವಿದೆ ಎಂದು ವಿಧಿ ವಿಜ್ಞಾನ ಸಂಸ್ಥೆ ಹೇಳಿತ್ತು. ಹೀಗಾಗಿ ಬಿಡುಗಡೆಯಾಗಿರುವ ದಾಖಲೆಗಳು ಬಗ್ಗೆ ಅನುಮಾನ ಇದೆ ಎಂದು ತಿಳಿಸಿದೆ.
ಬಿಎಸ್‌ವೈ ಡೈರಿಯಲ್ಲಿನ ಸತ್ಯ ಪ್ರಧಾನಿ ಮೋದಿಯವರಿಗೂ ಗೊತ್ತಿದೆ. ಹೀಗಾಗಿಯೇ ಅವರು ಡೈರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.