ಈಗ, ಮೂರು ಸಿನಿಮಾಗಳಿಗೆ ಸಾಂಗ್ ಕಂಪೋಸಿಂಗ್ ಕೆಲಸ ನಡೆಯುತ್ತಾ ಇದೆ. ಮನೆಯಲ್ಲೇ ಟ್ಯೂನ್ ಹಾಕಿ, ವಾಟ್ಸ್ ಆಪ್ ಮೂಲಕ ಕಳಿಸ್ತಾ ಇದ್ದೇನೆ. ಒಂದುಭಕ್ತಿಗೀತೆಯ ಪ್ರಾಜೆಕ್ಟ ಇದೆ. ಅದಕ್ಕೆ ಹಾಡು ಬರೀತೇನೆ. ಸ್ವಲ್ಪ ಜಾಸ್ತಿ ಅನ್ನುವಷ್ಟೇ ಬಿಡುವು ಸಿಕ್ಕಿದೆಯಲ್ಲ; ಆ ವೇಳೆಯಲ್ಲಿ ಹಳೆಯ, ಕೆಲವು ಮಹೋನ್ನತ ಸಿನೆಮಾಗಳನ್ನು ಮತ್ತೆ ನೋಡ್ತಾ ಇದ್ದೇನೆ.
ಆ ದಿನಗಳ ದೃಶ್ಯವೈಭವ, ಚಿತ್ರ ತಂಡದವರ ಸಮರ್ಪಣಾ ಮನೋಭಾವ ನೋಡಿದಾಗ, ಮನಸ್ಸು ತುಂಬಿ ಬರುತ್ತೆ.ಒಂದು ಸೂಕ್ಷ್ಮವನ್ನು ಗಮನಿಸಿದ್ದೀರಾ? ಮಿಡ್ಲ ಕ್ಲಾಸ್ ಜನ ಅಂದುಕೊಂಡ ನಾವು-ನೀವೆಲ್ಲಾ ಮನೆಯಿಂದ ಆಚೆ ಬರ್ತಾ ಇಲ್ಲ. ಆದರೆ, ಪೌರ ಕಾರ್ಮಿಕರು, ತರಕಾರಿ ಮಾರುವವರು, ಬೀದಿಗಳ ಕಸ ಗುಡಿಸುವವರು… ತಮ್ಮ ಕೆಲಸವನ್ನು ಮಾಡ್ತಾನೇ ಇದ್ದಾರೆ. ಒಂದು ಸಮಾಧಾನ ಅಂದ್ರೆ, ಅವರಲ್ಲಿ ಯಾರ ಮೇಲೂ ಈ ಕೊರೊನಾದ ಕಾಕದೃಷ್ಟಿ ಬಿದ್ದಿಲ್ಲ.
ಯಾವತ್ತೂ ಬೀಳುವುದೂ ಬೇಡ. ಬಡವರಿಗೆ ಕಾಯಿಲೆಗಳು ಬರುವುದೇ ಬೇಡ. ಅವರಿಗೆಲ್ಲಾ ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅವರು ಚೆನ್ನಾಗಿದ್ರೆ ಮಾತ್ರ, ನಾವೂ ಚೆನ್ನಾಗಿರಲು ಸಾಧ್ಯ. ಆದ್ರೆ, ಈ ಲಾಕ್ ಡೌನ್ ದಿನಗಳಲ್ಲಿ, ಅವರಿಗೆಲ್ಲಾ ಕುಡಿಯೋಕೆ ದಿನವೂ ಶುದಟಛಿವಾದ ನೀರು ಸಿಗುತ್ತಾ? ಅವರಿಗೆ ಕನಿಷ್ಠ ಸೌಲಭ್ಯಗಳೆಲ್ಲಾ ಸಿಗುವ ಹಾಗೆ ಮಾಡುವುದು ಹೇಗೆ?- ಹೀಗೆಲ್ಲಾ ಯೋಚಿಸ್ತಾ ಕುಳಿತುಬಿಡ್ತೇನೆ. ಲಾಕ್ ಡೌನ್ ಕಾರಣದಿಂದ, ಕೆಲವೊಂದು ಒಳ್ಳೆಯ ಕೆಲಸಗಳೂ ಆಗಿವೆ.
ಕಳೆದ 40 ದಿನಗಳಿಂದ ಕ್ರೈಂ ನಡೆದಿಲ್ಲ, ರಾಜಕೀಯ ನಡೆದಿಲ್ಲ. ಟ್ರಾಫಿಕ್ ಇಲ್ಲ, ಪೊಲ್ಯೂಷನ್ ಇಲ್ಲ. ಇದೆಲ್ಲಾ ಪರ್ಮನೆಂಟ್ ಆಗಿ ಹೀಗೇ ಉಳಿದುಬಿಟ್ರೆ ಒಳ್ಳೆಯದಲ್ಲವೇ, ಅನಿಸುತ್ತೆ. ಆದ್ರೆ, ಲಾಕ್ ಡೌನ್ ಥರದ ಸಂದರ್ಭವೇ ಜೊತೆಗಿರಲಿ ಅಂತ ಯೋಚಿಸಿದ್ರೆ, ನಮ್ಮ ಕೆಲಸಗಳೆಲ್ಲಾ ತುಂಬಾ ತಡವಾಗುವ ಸಾಧ್ಯತೆ ಕೂಡ ಇದೆಯಲ್ಲ ಅನ್ನಿಸಿದಾಗ ಚಿತೆ ಆಗುತ್ತೆ. ಒಟ್ಟಿನಲ್ಲಿ, ಈ ಲಾಕ್ ಡೌನ್ ಅನ್ನುವುದು, ನಮಗೆ ಹೊಸದೊಂದು ಬಗೆಯ ಬದುಕಿನ ದರ್ಶನ ಮಾಡಿಸಿದೆ. ಮನೆಯಲ್ಲಿ ಇದ್ದುಕೊಂಡೂ ಏನೇನು ಸಾಧಿಸಬಹುದು ಅನ್ನುವುದನ್ನೂ ತೋರಿಸಿಕೊಟ್ಟಿದೆ.
* ವಿ. ಮನೋಹರ್, ಖ್ಯಾತ ಸಂಗೀತ ನಿರ್ದೇಶಕರು