ಶಿವಮೊಗ್ಗ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ಪ್ರಬಲ ನಾಯಕರೊಬ್ಬನ್ನು ಹತ್ತಿಕ್ಕುವ ಬಿಜೆಪಿ ಕುತಂತ್ರ ರಾಜಕಾರಣ ಇದರಲ್ಲಿ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇದುವರೆಗೂ ಐಟಿ ಮತ್ತು ಸಿಬಿಐ ದಾಳಿಗಳಲ್ಲಿ ಕಾಂಗ್ರೆಸ್ ಖಂಡರನ್ನೇ ಗುರಿಯಾಗಿಸಲಾಗಿದೆ. ಆ ಮೂಲಕ ರಾಜಕೀಯ ಹಗೆತನ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಕುಂದಿಸಲು ಮೋದಿ ಸರ್ಕಾರ ಮುಂದಾಗಿದೆ. ತಮ್ಮ ಅಧಿಕಾರ ದಾಹ ತೀರಿಸಿಕೊಳ್ಳಲು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಹಾಗೆಯೇ ದೇಶದ ಕಾಂಗ್ರೆಸ್ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸವಾಗುತ್ತಿದೆ. ಇದೊಂದು ಸಂವಿಧಾನ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆಪಾದನೆ ಇದೆ. ಸಾವಿರಾ ಎಕರೆ ಭೂಮಿಯನ್ನು ಹೊಂದಿದ್ದಾರೆ. ಬಗರ್ ಹುಕುಂ ಸಾಗುವಳಿ ಜಮೀನು ಕಬಳಿಸಿದ್ದಾರೆ.
ಅರಣ್ಯ ಒತ್ತುವರಿ ಮಾಡಿದ್ದಾರೆ. ಈಗಾಗಲೇ ಹಲವು ಪ್ರಕರಣಗಳು ಇವರ ಮೇಲಿದೆ. ಆದರೆ ಕೇಂದ್ರ ಸರ್ಕಾರ ಅವರ ಮೇಲಿನ ಆರೋಪಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ದೂರಿದರು. ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸುವುದು ತಪ್ಪು ಎಂದು ಹೇಳುವುದಿಲ್ಲ. ಅದೇ ರೀತಿ ಕೋಟಿ ಕೋಟಿ ಲೂಟಿ ಹೊಡೆದಿರುವ, ಅಕ್ರಮ ಸಂಪತ್ತು ಹೊಂದಿರುವ ಬಿಜೆಪಿ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಮನೆ ಮೇಲೂ ದಾಳಿ ನಡೆಯಲಿ ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಬಿಎಸ್‌ವೈ ಹಾಗೂ ಕೆಎಸ್‌ಈ ಇಬ್ಬರು ಸಾಕಷ್ಟು ಅಕ್ರಮ ಎಸಗಿದ್ದಾರೆ. ಈ ಕುರಿತು
ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಆದಾಯ ತೆರಿಗೆ ಇಲಾಖೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು. ಕೇಂದ್ರ ಅಣತಿಯಂತೆ ನಡೆದುಕೊಂಡರೆ ಐಟಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಕು ತಂತ್ರ ರಾಜಕಾರಣದ ವಿರುದ್ದ ಆಂದೋಲನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ವೀಕ್ಷಕ ರಾಮಲಿಂಗಯ್ಯ, ಪ್ರಮುಖರಾದ ಎಲ್. ಸತ್ಯನಾರಾಯಣ ರಾವ್, ಮುನೇಶ್ವರ್, ತಿಮ್ಮೇಗೌಡ, ನಾಗರಾಜ್, ಪಾಲಿಕೆ ಸದಸ್ಯ ಕಾಶಿ ವಿಶ್ವನಾಥ್ ಇದ್ದರು.