Advertisement

ಐಟಿ ದಾಳಿ ಮಾಡಿಸಿದ್ದೇ ಬೊಮ್ಮಾಯಿ: ಎಚ್‌.ಕೆ.ಪಾಟೀಲ್‌

09:40 AM Dec 05, 2019 | Sriram |

ಹಾವೇರಿ:ಗೃಹ ಸಚಿವರು ಚುನಾವಣಾಧಿಕಾರಿಗಳಿಗೆ ಐದು ಬಾರಿ ದೂರವಾಣಿ ಕರೆ ಮಾಡಿ ಒತ್ತಡ ಹೇರಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮುಖಂಡರ ಮನೆ ಮೇಲೆ ದಾಳಿ ನಡೆಸುವಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ, ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಎಚ್‌.ಕೆ. ಪಾಟೀಲ ಆರೋಪಿಸಿದರು.

Advertisement

ಬುಧವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಚುನಾವಣೆಯಲ್ಲಿ ಆಡಳಿತಯಂತ್ರ ದುರ್ಬಳಕೆ ಮಾಡಿಕೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರ ಮನೆ ಮೇಲೆ ಐಟಿ, ಅಬಕಾರಿ ದಾಳಿ ನಡೆಸುತ್ತಿದೆ. ತನ್ಮೂಲಕ ಜನರಲ್ಲಿ ಗೊಂದಲ ಮೂಡಿಸಿ, ಅಭ್ಯರ್ಥಿಗಳ ಚುನಾವಣಾ ಕೆಲಸಕ್ಕೆ ಅಡ್ಡಿಪಡಿಸುತ್ತಿದೆ. ಪಕ್ಷದ ರಾಣಿಬೆನ್ನೂರು ಕ್ಷೇತ್ರದ ಅಭ್ಯರ್ಥಿ ಕೋಳಿವಾಡ ಮನೆ ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕ್ರಿಯಾಶೀಲ ಮುಖಂಡರ ಮನೆ ಮೇಲೆಯೂ ಅಬಕಾರಿ ಹಾಗೂ ಐಟಿ ದಾಳಿ ನಡೆದಿದೆ.

ದಾಳಿ ನಡೆಸಿದ ಅಬಕಾರಿಯವರು ಏನೂ ಸಿಗಲಿಲ್ಲ’ ಎಂದು ಹೇಳಿದ್ದಾರೆ. ಆದರೆ, ಆದಾಯ ತೆರಿಗೆ ಇಲಾಖೆಯವರು ಮಾತ್ರ ಏನನ್ನೂ ಹೇಳಿಲ್ಲ. ಏಕೆಂದರೆ ಅವರು ದಾಳಿ ಮಾಡಬೇಕಾದರೆ ಹಲವು ನಿಯಮಗಳಿವೆ. ಅವುಗಳನ್ನು ಗಾಳಿಗೆ ತೂರಿ ಏಕಾಏಕಿ ದಾಳಿ ಮಾಡಿದ್ದಾರೆ. ಚುನಾವಣಾ ಆಯೋಗ ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಎಚ್ಚರಿಕೆ ನೀಡಬೇಕು ಎಂದರು.

ಕ್ಷಮೆಯಾಚಿಸಬೇಕು:
ಅಧಿಕಾರಿಗಳು ದಾಳಿ ನಡೆಸಿದಾಗ ಪಂಚನಾಮೆ ಮಾಡಲಾಗುತ್ತದೆ. ಆ ಪಂಚನಾಮೆಯಲ್ಲಿ ಅ ಧಿಕಾರಿಗಳೆಲ್ಲರೂ ಸಹಿ ಮಾಡದೆ ಇರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮುಖಂಡರ ಮನೆ ಮೇಲೆ ದಾಳಿ ನಡೆಸಿದ ಅಬಕಾರಿ ಹಾಗೂ ಐಟಿ ಅ ಧಿಕಾರಿಗಳು ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರ ಐಟಿಯನ್ನು ಚುನಾವಣೆ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆಯಲ್ಲಿ ದ್ವೇಷ ರಾಜಕಾರಣ ಅನಾರೋಗ್ಯಕರ ಬೆಳವಣಿಗೆ. ಒತ್ತಡ ಹೇರಿ ದಾಳಿ ಮಾಡಿಸಿದ್ದು, ಖಂಡನೀಯ. ಇದನ್ನು ಚುನಾವಣಾ ಆಯೋಗ ಮೂಕಪ್ರೇಕ್ಷಕನಂತೆ ನೋಡದೆ ಕ್ರಮಕ್ಕೆ ಮುಂದಾಗಬೇಕು ಎಂದರು.

ಸಿಎಂ ಸ್ಥಾನಕ್ಕೆ ಚ್ಯುತಿ:
ಸಿಎಂ ಯಡಿಯೂರಪ್ಪ, ಪುತ್ರ ಸಂಸದ ಬಿ.ವೈ. ರಾಘವೇಂದ್ರ ಚುನಾವಣಾ ನೀತಿ ಸಂಹಿತೆ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಗೋಕಾಕ ಹಾಗೂ ಶಿರಗುಪ್ಪಿಯಲ್ಲಿ ಜಾತಿ ಆಧಾರದಲ್ಲಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರೆ, ಹಿರೇಕೆರೂರು, ರಾಣಿಬೆನ್ನೂರಿನಲ್ಲಿ ಆಮಿಷಯೊಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಕೆಲವು ಕಡೆ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ. ಆದರೆ, ತಕ್ಷಣ ಕ್ರಮ ಯಾವುದೂ ಆಗಿಲ್ಲ. ಗಣ್ಯ ವ್ಯಕ್ತಿಗಳ ಮೇಲೆ ಆಯೋಗ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಆಯೊಗದ ಮೇಲಿನ ಜನರ ವಿಶ್ವಾಸಕ್ಕೂ ಧಕ್ಕೆ ಬರುತ್ತದೆ ಎಂದರು.

Advertisement

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಮಂಡ್ಯದ ನಿಡಗಟ್ಟಿ ಚೆಕ್‌ಪೋಸ್ಟ್‌ನಲ್ಲಿ ತಮ್ಮ ವಾಹನವನ್ನು ತಪಾಸಣೆಗೊಳಪಡಿಸದೆ ಕಾನೂನು ಉಲ್ಲಂಘಿಸಿದ್ದಾರೆ. ಈ ಪ್ರಕರಣದಲ್ಲಿ ಆಯೋಗ ಸಚಿವರ ವಾಹನ ಚಾಲಕ, ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರ ಮೇಲೆ ಶಿಸ್ತುಕ್ರಮ ಜರುಗಿಸಿದೆ. ಆದರೆ, ವಾಹನದ ಮಾಲೀಕ ಗೃಹ ಸಚಿವರ ಮೇಲೆ ಏನೂ ಕ್ರಮ ಆಗಿಲ್ಲ. ದೊಡ್ಡವರನ್ನು ಬಿಟ್ಟು ಸಣ್ಣವರ ಮೇಲೆ ಕ್ರಮ ಜರುಗಿಸುವ ಆಯೋಗದ ಕ್ರಮ ಅಪಹಾಸ್ಯಕ್ಕೆ ಒಳಗಾಗುತ್ತದೆ ಎಂದರು.

ರಾಜೀನಾಮೆ ನೀಡಲಿ:
ವಾಹನ ತಪಾಸಣೆಗೆ ಒಳಪಡಿಸದೆ ಇರುವ ಘಟನೆಗೆ ಸಂಬಂಧಿಸಿ ಗೃಹ ಸಚಿವರು ಯಾವುದೇ ಸ್ಪಷ್ಟೀಕರಣವೂ ಕೊಟ್ಟಿಲ್ಲ. ಗೃಹಸಚಿವರೇ ತಮ್ಮ ವಾಹನ ತಪಾಸಣೆಗೆ ಒಳಪಡಿಸದೆ ಇದ್ದರೆ ಉದ್ದೇಶ ಏನಿದ್ದಿರಬಹುದು ಎಂದು ಚುನಾವಣಾ ಆಯೋಗವೇ ಅವಲೋಕಿಸಬೇಕು. ಈ ಘಟನೆ ಸಂಬಂಧಿ ಸಿ ಗೃಹಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜಿಲ್ಲೆಯ ವರಹಾ ತನಿಖಾ ಠಾಣೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ವಾಹನ ತಪಾಸಣೆಯನ್ನೇ ಮಾಡಿಲ್ಲ. ಹೀಗಾಗಿ ಅಲ್ಲಿಯ ನಾಲ್ವರು ಅ ಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ, ವಾಹನ ತಪಾಸಣೆಗೊಳಪಡಿಸದ ಸಂಸದರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಚುನಾವಣಾ ಆಯೋಗದ ಬಿಗುವಿಲ್ಲದ ಕ್ರಮದಿಂದಾಗಿ ಬಿಜೆಪಿ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕಾನೂನುಬಾಹಿರ ಕೆಲಸ ಮಾಡಿ ಚುನಾವಣೆಯನ್ನು ಅಪವಿತ್ರಗೊಳಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next