Advertisement

ರೇವಣ್ಣ ಆಪ್ತರ ಮನೆ ಮೇಲೆ ಐಟಿ ದಾಳಿ

09:34 AM Apr 17, 2019 | Team Udayavani |

ಹಾಸನ: ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಜೆಡಿಎಸ್‌ ಬೆಂಬಲಿಗರ ನಿವಾಸದ ಮೇಲೆ 2 ಸುತ್ತಿನ ಆದಾಯ ತೆರಿಗೆ ದಾಳಿ ನಡೆದಿದೆ.

Advertisement

ಮಂಗಳವಾರ ಮುಂಜಾನೆ ಹಾಸನ ನಗರದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಂ ಸೇರಿ ಐವರು ಜೆಡಿಎಸ್‌ ಬೆಂಬಲಿಗರ ನಿವಾಸ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊಳೆನರಸೀಪುರದಲ್ಲಿಯೂ ಸಚಿವ ರೇವಣ್ಣ ಅವರ ಬೆಂಬಲಿಗರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗೌಡರ ಸಂಬಂಧಿಗಳೇ ಟಾರ್ಗೆಟ್‌: ಹಾಸನದ ಕುವೆಂಪು ನಗರದಲ್ಲಿರುವ ವಿಧಾನಪರಿಷತ್‌ ಸದಸ್ಯ ಪಟೇಲ್‌ ಶಿವರಾಂ, ಕೆ.ಆರ್‌.ಪುರಂನಲ್ಲಿರುವ ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹೊನ್ನವಳ್ಳಿ ಸತೀಶ್‌, ವಿದ್ಯಾನಗರದಲ್ಲಿರುವ ಪ್ರಥಮ ದರ್ಜೆ ಗುತ್ತಿಗೆದಾರ ಕಾರ್ಲೆ ಇಂದ್ರೇಶ್‌, ಕ್ರಷರ್‌ ಮಾಲೀಕ ನ್ಯಾಮನಹಳ್ಳಿ ಅನಂತ್‌, ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಂಬಂಧಿ ಜಿಪಂ ಮಾಜಿ ಸದಸ್ಯ ದೇವೇಗೌಡ ಉರುಫ್ ಪಾಪಣ್ಣಿ ಅವರ ನಿವಾಸದ ಮೇಲೆ ದಾಳಿ ನಡೆದಿದೆ.

ದಾಖಲೆಗಳ ಪರಿಶೀಲನೆ: ಮಂಗಳವಾರ ಏಕ ಕಾಲದಲ್ಲಿ ಐದೂ ಕಡೆ ಐಟಿ ದಾಳಿ ಆರಂಭವಾಯಿತು. ಸಿಆರ್‌ಪಿಎಫ್ ಯೋಧರ ರಕ್ಷಣೆಯೊಂದಿಗೆ ಜೊತೆ ಇನ್ನೋವಾ ಕಾರುಗಳಲ್ಲಿ ಐವರ ನಿವಾಸಗಳ ಬಳಿ ಪ್ರತ್ಯೇಕವಾಗಿ ಬಂದಿಳಿದ ಐಟಿ ಅಧಿಕಾರಿಗಳು ಮನೆಯ ಬಾಗಿಲುಗಳನ್ನು ಭದ್ರಪಡಿಸಿಕೊಂಡು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದರು. ಸಂಜೆವರೆಗೂ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು. ನಗದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಹೊಳೆನರಸೀಪುರದಲ್ಲಿ ರೇವಣ್ಣ ಅವರ ಆಪ್ತ ತರಕಾರಿ ವ್ಯಾಪಾರಿ ರಾಜೇಶ್‌ ಎಂಬವರ ಮನೆಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೇವಣ್ಣ ಅವರ ಒಡೆತನದ ಚನ್ನಾಂಬಿಕಾ ಚಿತ್ರಮಂದಿರದ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ರೇವಣ್ಣ ಅವರ ಆಪ್ತ ಸಹಾಯಕ ಹಾಸನ ಡೇರಿ ನೌಕರ ಬೋರೇಗೌಡ ಅವರ ನಿವಾಸದ ಮೇಲೂ ದಾಳಿ ನಡೆದರೂ ಅವರ ಬಳಿ ಏನೂ ಸಿಕ್ಕಿರಲಿಲ್ಲ.

Advertisement

ಮಾಹಿತಿ ನೀಡಿದರೂ 7 ಕೋಟಿ ರೂ. ಹಿಡಿಯಲಿಲ್ಲ
ಹಾಸನ: ಐಟಿ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆದಾಯತೆರಿಗೆ ಪಾವತಿ ಮಾಡದವರು, ಅಕ್ರಮ ಸಂಪತ್ತು ಹೊಂದಿದ್ದವರ ಮೇಲೆ ದಾಳಿ ನಡೆಸಲಿ. ಆದರೆ ಜೆಡಿಎಸ್‌ ಬೆಂಬಲಿಗರ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿ ಅವರು ಚುನಾವಣಾ ಪ್ರಚಾರಕ್ಕೆ ಹೋಗದಂತೆ ಮನೆಯಲ್ಲಿಯೇ ಕೂಡಿ ಹಾಕಿಕೊಳ್ಳಲಾಗಿದೆ ಸಚಿವ ಎಚ್‌.ಡಿ.ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಮುಖಂಡರ ಮನೆ ಮೇಲೆ ಪದೇ ಪದೇ ದಾಳಿ ನಡೆಸುವ ಐಟಿ ಅಧಿಕಾರಿಗಳು ಮಾಹಿತಿ ನೀಡಿದರೂ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ನಡೆಸುತ್ತಿಲ್ಲ. ಎರಡು ದಿನಗಳ ಹಿಂದೆ ಹಾಸನದ ರಿಂಗ್‌ ರಸ್ತೆಯಲ್ಲಿ ಬಿಜೆಪಿಯವರು 7 ಕೋಟಿ ರೂ. ನಗದು ಸಾಗಾಣೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ ಎಂದು ಆಪಾದಿಸಿದರು.

ದೇವೇಗೌಡರ ಕುಟುಂಬದವರಿಗೆ ನೋವು ಕೊಟ್ಟವರ್ಯಾರೂ ಉಳಿದಿಲ್ಲ. ಐಟಿ ದಾಳಿಯ ಹಿಂದಿನ ಗುಟ್ಟಿನ ವಿಷಯಗಳನ್ನು ಚುನಾವಣೆ ಮುಗಿದ ನಂತರ ಬಹಿರಂಗಪಡಿಸುವೆ ಎಂದು ರೇವಣ್ಣ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next