ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಹಾಗೂ ತೆರಿಗೆ ವಂಚನೆ ಆರೋಪ ಸಂಬಂಧ ಕಲ್ಯಾಣಿ ಡೆವಲಪರ್ಸ್‌ಗೆ ಸೇರಿದ ಎಂಟು ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಇದರಿಂದ ಸಚಿವ ಡಿ.ಕೆ. ಶಿವಕುಮಾರ್ ದಾಳಿ ಮುಂದುವರಿದ ಭಾಗ ಎಂದು ತಿಳಿದು ಬಂದಿದೆ.
ಉದ್ಯಮಿ ಎ.ಮೋಹನ್ ರಾಜು ಎಂಬುವರಿಗೆ ಸೇರಿದ ಕಲ್ಯಾಣಿ ಡೆವಲಪರ್ಸ್‌ನ 8 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇತರೆ 21 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಗಳು ಸಂಜೆ 4 ಗಂಟೆವರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ದಾಖಲೆ ಪತ್ರಗಳು ಪತ್ತೆಯಾಗಿದ್ದು ಅವನ್ನು ವಶಕ್ಕೆ
ಪಡೆದಿರುವುದಾಗಿ ಐಟಿ ಮೂಲಗಳು ತಿಳಿಸಿವೆ.
ಚೆನ್ನೈ, ಹೈದರಾಬಾದ್, ಬೆಂಗಳೂರಿನ ನಾಯಂಡಹಳ್ಳಿ, ಬನ್ನೇರುಘಟ್ಟದಲ್ಲಿ ದಾಳಿ ನಡೆಸಲಾಗಿದೆ. 1991ರಿಂದ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಮೋಹನ್ ರಾಜ್ ನಿರ್ದೇಶಕರಾಗಿರುವ ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಹಾಗೂ ರಿಂಗ್ ರೋಡ್‌ನಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್, ಕಲ್ಯಾಣಿ ಮೋಟರ್ಸ್ ಸೇರಿ ಕಲ್ಯಾಣಿ ಡೆವಲಪರ್ಸ್‌ನ ಸಹಭಾಗಿತ್ವದ ಇತರೆ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಲೆಕ್ಕಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಿಕರ ಮೇಲೆ ಸೇರಿ 60 ಕಡೆ ನಡೆದ ದಾಳಿಯ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಡಿಕೆಶಿ ಮನೆ ಮೇಲೆ ದಾಳಿ ವೇಳೆ ಕಲ್ಯಾಣಿ ಡೆವಲಪರ್ಸ್ ಗ್ರೂಪ್ಸ್ ಕಂಪನಿಯಲ್ಲಿ ಡಿಕೆಶಿ ಮತ್ತು ಕುಟುಂಬ ಶೇಕಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಅಧಿಕಾರಿಗಳು ಖಚಿತಪಡಿಸಲು ನಿರಾಕರಿಸಿದ್ದಾರೆ.