ಬೆಂಗಳೂರು: ಇತ್ತೀಚೆಗೆ ರಾಜ್ಯದ ಹಲವು ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಉಂಟಾಗಿದ್ದ 500 ಮತ್ತು 2000 ರೂ. ಮುಖ ಬೆಲೆಯ ನೋಟುಗಳ ಅಭಾವದ ರಹಸ್ಯ ಭೇದಿಸಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ರೂ.ಪತ್ತೆ ಹಚ್ಚುವ ಕಾರ್ಯವನ್ನು ಶುಕ್ರವಾರವೂ ಮುಂದುವರಿಸಿದ್ದಾರೆ. ಕಾರ್ಯಾಚರಣೆ ವೇಳೆ 4.01 ಕೋಟಿ ರೂ.ನಗದು ಮತ್ತು 6.5 ಕೆ.ಜಿ.ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ನಾಲ್ಕು ದಿನಗಳ ಹಿಂದಷ್ಟೇ ರಾಜ್ಯದ ವಿವಿಧೆಡೆ 11 ಮಂದಿ ಗುತ್ತಿಗೆದಾರರ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮೈಸೂರಿನ ನಾಲ್ವರು ಗುತ್ತಿಗೆದಾರರ ಬಳಿಯಿದ್ದ 6.7 ಕೋಟಿ ರೂ.ಜಪ್ತಿ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೆ ಗುತ್ತಿಗೆದಾರರ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮೈಸೂರು, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ದಾಖಲೆ ಇಲ್ಲದ 4.01 ಕೋಟಿ ನಗದು ಮತ್ತು 6.5 ಕೆ.ಜಿ.ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಈ ಪೈಕಿ 1.2 ಕೋಟಿ ನಗದು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ಪಡೆದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಮಾಹಿತಿ ಹಾಗೂ ಇತರ ಮೂಲಗಳು ನೀಡಿರುವ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಕೋಟ್ಯಂತರ ರೂ. ಅಘೋಷಿತ ನಗದು, ಚಿನ್ನ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿವೆ.
ದಾಳಿಗೊಳಗಾದ ಗುತ್ತಿಗೆದಾರರು ತಮ್ಮ ಬಳಿ ಸಂಗ್ರಹಿಸಿಟ್ಟಿದ್ದ ಹಣ, ಚಿನ್ನಾಭರಣಕ್ಕೆ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ. ಅಲ್ಲದೆ, ಉಪಗುತ್ತಿಗೆದಾರರು ಮತ್ತು ಕೂಲಿ ಕಾರ್ಮಿಕರಿಗೆ ವೇತನ ಹಾಗೂ ಕೆಲ ಸಲಕರಣೆಗಳನ್ನು ಖರೀದಿಸಿದ್ದೇವೆ ಎಂದು ಗುತ್ತಿಗೆದಾರರು ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಉಪಗುತ್ತಿಗೆದಾರನಿಗೆ ಹಣ ವರ್ಗಾವಣೆ ಆಗಿಲ್ಲ.
ಜತೆಗೆ ನಕಲಿ ಉಪಗುತ್ತಿಗೆದಾರನ ಹೆಸರು ನೊಂದಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಗೊಳಗಾದ ಎಲ್ಲ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದುಕೊಂಡಿದ್ದು, ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಶನಿವಾರವೂ ದಾಳಿ ಮುಂದುವರಿಯಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.