Advertisement

ಕಾಂಗ್ರೆಸ್‌ ಮುಖಂಡ ಕೆಜಿಎಫ್ ಬಾಬು ನಿವಾಸಕ್ಕೆ ಐಟಿ ದಾಳಿ

11:52 PM May 28, 2022 | Team Udayavani |

ಬೆಂಗಳೂರು: ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉದ್ಯಮಿ ಹಾಗೂ ಕಾಂಗ್ರೆಸ್‌ ಮುಖಂಡ ಯೂಸುಫ್ ಶರೀಫ್ ಅಲಿಯಾಸ್‌ ಕೆಜಿಎಫ್ ಬಾಬು ಅವರ ವಸಂತನಗರ ನಿವಾಸ, ಕಚೇರಿ ಸಹಿತ ಒಟ್ಟು 7 ಕಡೆಗಳಿಗೆ ಶನಿವಾರ ಬೆಳಗ್ಗೆ ದಿಢೀರ್‌ ದಾಳಿ ನಡೆಸಿ ದಾಖಲೆಗಳ ಶೋಧನೆ ನಡೆಸಿದರು.

Advertisement

ಜತೆಗೆ ಅವರ ಸ್ನೇಹಿತರು ಮತ್ತು ಆಪ್ತರ ನಿವಾಸಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದರು.

ಸಿಆರ್‌ಪಿಎಫ್ ಭದ್ರತಾ ಸಿಬಂದಿ ಜತೆಗೆ ಬೆಳಗ್ಗೆ 7.30ರ ಸುಮಾರಿಗೆ ನಾಲ್ಕು ಇನೋವಾ ಕಾರಿನಲ್ಲಿ ವಸಂತ ನಗರದ ರುಕ್ಸಾನಾ ಪ್ಯಾಲೇಸ್‌ಗೆ ಆಗಮಿಸಿದ ಅಧಿಕಾರಿಗಳು ಸಂಜೆಯವರೆಗೆ ದಾಖಲೆಗಳ ಪರಿಶೋಧನೆ ನಡೆಸಿದರು.

ಬಾಬು ಒಡೆತನದ ರುಕ್ಸಾನಾ ಪ್ಯಾಲೇಸ್‌, ಉಮ್ರಾ ಡೆವಲಪರ್ಸ್‌, ಉಮ್ರಾ ರಿಯಲ್‌ ಎಸ್ಟೇಟ್‌ ಕಂಪೆನಿ ಮುಂತಾದೆಡೆ 30ಕ್ಕೂ ಅಧಿಕ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ಬ್ಯಾಂಕ್‌ ಖಾತೆಯಲ್ಲಿ 70 ಕೋಟಿ ರೂ.ಪತ್ತೆ?
ಅಧಿಕಾರಿಗಳಿಗೆ ಕೆಲವು ಮಹತ್ವದ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಒಟ್ಟು 23 ಬ್ಯಾಂಕ್‌ ಖಾತೆಗಳನ್ನು ಬಾಬು ಕುಟುಂಬಸ್ಥರು ಹೊಂದಿದ್ದು, ಸುಮಾರು 70 ಕೋ.ರೂ. ಠೇವಣಿ ಇರುವುದು ಪತ್ತೆಯಾಗಿದೆ. ಬಾಬು ಅವರ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ 11 ಖಾತೆಗಳಿವೆ ಎನ್ನಲಾಗಿದೆ.

Advertisement

ಗುಜರಿ ಉದ್ಯಮ
ಕೆಜಿಎಫ್ ಬಾಬು ಗುಜರಿ ಉದ್ಯಮದಲ್ಲಿ ಖ್ಯಾತರಾಗಿದ್ದಾರೆ. ತಿಂಗಳುಗಳ ಹಿಂದೆ ನಡೆದಿದ್ದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2023ರ ವಿಧಾನಸಭಾ ಚುನಾಚಣೆಯಲ್ಲಿ ಕೋಲಾರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅವರು ಉಮ್ರಾ ಡೆವಲಪರ್ಸ್‌ ಕಂಪೆನಿಯ ಮಾಲಕರೂ ಆಗಿದ್ದಾರೆ.

ಕೋಟಿಕೋಟಿ ಹೂಡಿಕೆ
ಬಾಂಡ್‌, ಷೇರುಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ ಷರೀಫ್‌ 17.62 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್‌ಸ್ಟ್ರಕ್ಷನ್‌ ಕಂಪೆನಿಗಳಲ್ಲಿ ಬಾಬು ಹೂಡಿಕೆ ಮಾಡಿದ್ದು, ಅವರ ಒಟ್ಟು ಹೂಡಿಕೆ ಮೊತ್ತ 17.61 ಕೋಟಿ ರೂ. ಆಗಿದೆ ಎಂದು ತಿಳಿದು ಬಂದಿದೆ. ಕೆಲವರಿಗೆ ಕೋಟ್ಯಂತರ ರೂ. ಸಾಲವನ್ನೂ ನೀಡಿದ್ದಾರೆ.

1,745 ಕೋಟಿ ಆಸ್ತಿ ಒಡೆಯ
ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಬಾಬು 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1,643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸಹಿತ ಒಟ್ಟು 1,741.57 ಕೋಟಿ ರೂ.ಆಸ್ತಿ ಘೋಷಿಸಿಕೊಂಡಿದ್ದರು. ಜತೆಗೆ ಪತ್ನಿಯರು, ಅವಲಂಬಿತರ ಆಸ್ತಿಯೂ ಸೇರಿದರೆ 1,745 ಕೋಟಿ ರೂ. ತಲುಪಿತ್ತು.

ರೋಲ್ಸ್‌ ರಾಯಸ್ ಕಾರು
ಷರೀಫ್‌ ಅವರು 2.99 ಕೋಟಿ ರೂ. ಮೌಲ್ಯದ ವಾಹನವನ್ನು ಹೊಂದಿದ್ದಾರೆ. 2.01 ಕೋಟಿ ರೂ. ಬೆಲೆಯ ಒಂದು ರೋಲ್ಸ್‌ ರಾಯಸ್ ಕಾರು, ಎರಡು ಫಾರ್ಚೂನರ್‌ ಕಾರುಗಳು ಅವರಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next