Advertisement
ಐಟಿ ದಾಳಿಯಾದ ತಕ್ಷಣ ರಾಜ್ಯದ ಮೈತ್ರಿ ಪಕ್ಷದ ನಾಯಕರು ಜಂಟಿಯಾಗಿ ಆದಾಯ ತೆರಿಗೆ ಇಲಾಖೆಯ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಮೂಲಕ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಈ ದಾಳಿ ನಡೆಸಿದೆ ಎನ್ನುವುದು ಮೈತ್ರಿ ಪಕ್ಷಗಳ ನೇರ ಆರೋಪವಾಗಿತ್ತು.
Related Articles
Advertisement
ರಾಜಕಾರಣಿಗಳು ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ತಮ್ಮ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಹಾಗೂ ಪ್ರತಿ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುತ್ತಾರೆ. ಸರ್ಕಾರಿ ಅಧಿಕಾರಿಗಳೂ ಲೋಕಾಯುಕ್ತಕ್ಕೆ ಪ್ರತಿ ವರ್ಷ ತಮ್ಮ ಆಸ್ತಿ ವಿವರಸಲ್ಲಿಸುತ್ತಾರೆ. ಅವರು ಸಲ್ಲಿಸಿರುವ ಆಸ್ತಿಯ ವಿವರ ಬಹಿರಂಗ ಗೊಳ್ಳುವುದರಿಂದ ಸಾರ್ವಜನಿಕರು ಸಂಶಯ ಬರುವ ರಾಜಕಾರಣಿ, ಅಧಿಕಾರಿ, ಉದ್ಯಮಿಗಳ ಮೇಲೆ ಅಕ್ರಮ ಆಸ್ತಿಗಳಿಗೆ ಅಥವಾ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಅವರು ದೂರು ನೀಡುತ್ತಾರೆ. ಹಾಗೆಂದು ಆದಾಯ ತೆರಿಗೆ ಇಲಾಖೆ ದೂರು ಬಂದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿಯೇನೂ ಮಾಡುವುದಿಲ್ಲ. ಅವರ ಚಲನವಲನಗಳು, ಅವರಿಗೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳ ಆದಾಯದ ಮೇಲೆ ನಿರಂತರ ನಿಗಾ ಇಟ್ಟು ಕಾಯುತ್ತಾರೆ. ಅಲ್ಲದೇ ಒಮ್ಮೆ ದಾಳಿ ಮಾಡಲು ಸುಮಾರು ಮೂರರಿಂದ ಆರು ತಿಂಗಳು ಸಮಯವನ್ನೂ ತೆಗೆದುಕೊಳ್ಳುತ್ತಾರೆ. ಅಲ್ಲದೇ ತಮ್ಮ ದಾಳಿಯ ಬಗ್ಗೆ ಯಾರಿಗೂ ಮಾಹಿತಿ ದೊರೆಯದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ವಿಶೇಷವಾಗಿ ದಾಳಿ ಸಂದರ್ಭದಲ್ಲಿ ರಕ್ಷಣೆಗೆ ಪೊಲಿಸ್ ಇಲಾಖೆ, ಅರೆ ಮಿಲಿಟರಿ ಪಡೆಗಳನ್ನು ಬಳಸಿಕೊಳ್ಳುವ ಆದಾಯ ತೆರಿಗೆ ಇಲಾಖೆಯವರು, ತಾವು ಯಾರ ಮನೆ ಮೇಲೆ ದಾಳಿ ಮಾಡುತ್ತಿದ್ದೇವೆ ಎನ್ನುವುದನ್ನೂ ಇಲಾಖೆಯ ಅಧಿಕಾರಿಗಳಿಗೂ, ರಕ್ಷಣೆಗೆ ಬರುವ ಪೊಲೀಸರಿಗೂ ತಿಳಿಸದೇ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಅಕ್ರಮ ಆಸ್ತಿ ಸಂಪಾದನೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದದಲ್ಲೇ, ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಳ ಮಾಡುವುದರಿಂದ ಸಮಾಜದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಆರ್ಥಿಕ ಅಸಮತೋಲನ, ಸಮಾಜ ಘಾತುಕ ಶಕ್ತಿಗಳು ಹೆಚ್ಚಾಗಲೂ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಾನೂನು ಬದ್ದವಾಗಿ ನಡೆಸುವ ದಾಳಿಗಳು ರಾಜಕೀಯ ಬಣ್ಣ ಪಡೆದರೂ, ದೇಶದ ಹಿತದೃಷ್ಟಿಯಿಂದ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಯಾವುದೇ ದಾಖಲೆಯಿಲ್ಲದೇ ಸಂಗ್ರಹಿಸಿರುವ ಹಣದ ಬಗ್ಗೆ
ತನಿಖೆ ನಡೆಸುವುದು ಆರೋಗ್ಯವಂತ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನವೇ ಹೊರತು. ಅದರಿಂದ ಬೇರೆ ದುರುದ್ದೇಶ ಇರುವುದಿಲ್ಲ. ಆದರೆ, ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಬೇಕಾದ ಸ್ಥಾನದಲ್ಲಿರುವವರು, ಸಂವಿಧಾನಿಕ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಎಷ್ಟು ಅಪಾಯಕಾರಿಯೋ, ಅದೇ ಗೌಪ್ಯತೆಯನ್ನು ದಾಳಿಗೂ ಮೊದಲೇ ಬಹಿರಂಗಗೊಳಿಸುವುದೂ ಆತಂಕಕಾರಿ ಬೆಳವಣಿಗೆ. ಆರೋಪ ಮಾಡುವವರೂ ಹಾಗೂ ದುರುಪಯೋಗಪಡಿಸಿಕೊಳ್ಳುವವರೂ ಸಾಂವಿಧಾನಿಕ ಸಂಸ್ಥೆಗಳ ಘನತೆ ಕಾಪಾಡಬೇಕಿರುವುದು ಇಂದಿನ ಅಗತ್ಯ.