Advertisement

ಚುನಾವಣೆ ಮೇಲೆ ಐಟಿ ದಾಳಿ ಪರಿಣಾಮ ಬೀರದು

01:07 PM Mar 29, 2019 | Lakshmi GovindaRaju |

ಹಾಸನ: ಆರು ದಶಕಗಳ ರಾಜಕೀಯ ಜೀವನದಲ್ಲಿ ದೇವೇಗೌಡರು ಮತ್ತು ಕುಟುಂಬ ಲೋಕಾಯುಕ್ತ, ಸಿಬಿಐ ಸೇರಿದಂತೆ ಎಲ್ಲಾ ರೀತಿಯ ತನಿಖೆ ಎದುರಿಸಿದೆ. ಹಾಗಾಗಿ ಆದಾಯ ತೆರಿಗೆ ಇಲಾಖೆ ದಾಳಿಗೆ ಹೆದರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಪ್ರತಿಕ್ರಿಯಿಸಿದರು.

Advertisement

ಬಿಜೆಪಿ ಮುಖಂಡರು ಐ.ಟಿ ದಾಳಿ ನಡೆಯಲಿದೆ ಎಂದು ಒಂದು ವಾರದಿಂದಲೂ ಹೇಳುತ್ತಲೇ ಇದ್ದರು. ಹಾಸನದಲ್ಲಿ ನನ್ನ ಪುತ್ರ ಪ್ರಜ್ವಲ್‌ ಹಾಗೂ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖೀಲ್‌ ಸ್ಪರ್ಧಿಸಿರುವ ಕಡೆ ಮಾತ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಮಂಡ್ಯ ಮತ್ತು ಹಾಸನ ಕ್ಷೇತ್ರವನ್ನು ಮಾತ್ರ ಟಾರ್ಗೆಟ್‌ ಮಾಡಲಾಗಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ರಾಜಕೀಯ ಜೀವನದಲ್ಲಿ ಸಾಕಷ್ಟು ನೋಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಬಿಜೆಪಿ ದುರುದ್ದೇಶ: ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಆಸ್ತಿ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಆದಾಯ ತೆರಿಗೆ ಇಲಾಖೆಯನ್ನೂ ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆ ಕರ್ನಾಟಕ ವೃತ್ತದ ಮುಖ್ಯಸ್ಥರು ಒಂದು ಪಕ್ಷದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂಥ ಮಹತ್ವದ ಹುದ್ದೆಗೆ ನಾಲಾಯಕ್‌. ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್‌ – ಜೆಡಿಎಎಸ್‌ ಒಂದಾಗಿವೆ.

ಇಂತಹ ಸಂದರ್ಭದಲ್ಲಿ ಈ ರೀತಿ ದಾಳಿ ಮಾಡಿ ಹೆದರಿಸುತ್ತೇವೆ ಅಂದುಕೊಂಡಿದ್ದರೇ ಅದಕ್ಕೆ ಕಾಲವೇ ಉತ್ತರಿಸುತ್ತದೆ ಎಂದು ಹೇಳಿದರು. ಜಿಲ್ಲೆಯ ಬಿಜೆಪಿ ಮುಖಂಡರೇ ದಾಳಿ ಅಸ್ತ್ರ ಮುಂದಿಟ್ಟು, ತಮ್ಮ ಪಕ್ಷಕ್ಕೆ ಬರುವಂತೆ ಕಾರ್ಯಕರ್ತರು, ಮುಖಂಡರಿಗೆ ಹೇಳುತ್ತಿದ್ದರು. ಚನ್ನರಾಯಪಟ್ಟಣದ ಗುತ್ತಿಗೆದಾರ ಅಶ್ವತ್ಥ್ ನಮ್ಮ ಆಪ್ತ ಇರಬಹುದು. ಅಕ್ರಮ ನಡೆದಿದ್ದರೆ ಕ್ರಮ ಕೈಕೊಳ್ಳಲಿ ಎಂದು ಸವಾಲು ಹಾಕಿದರು.

Advertisement

ದೇವೇಗೌಡರ ಜಪ ಮಾಡುತ್ತಿದ್ದಾರೆ: ಬಿಜೆಪಿ ಮುಖಂಡರು ಇಷ್ಟು ದಿನ ರಾಮನ ಜಪ ಮಾಡಿ, ರಾಮಮಂದಿರವನ್ನು ಕಟ್ಟಲಿಲ್ಲ. ಇದೀಗ ದೇವೇಗೌಡ, ಕುಮಾರಸ್ವಾಮಿ ಅವರ ಜಪ ಮಾಡುತ್ತಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪ ಅವರಿಗೆ ಗೌಡರ ಹೆಸರು ಹೇಳದಿದ್ದರೆ ಊಟ ಸೇರುವುದಿಲ್ಲ. ಗೌಡರ ಕಂಡರೆ ಅವರಿಗೆ ಭಯ ಎಂದು ವ್ಯಂಗ್ಯವಾಡಿದರು.

9 ನಮಗೆ ಅಶುಭ ಅಲ್ಲ. 2009 ರ ಚುನಾವಣೆಯಲ್ಲಿ ದೇವೇಗೌಡರು ಭಾರೀ ಬಹುಮತದಿಂದಲೇ ಗೆದ್ದಿದ್ದರು ಎಂದು ಎ. ಮಂಜು ಅವರ ಹೇಳಿಕೆಗೆ ತಿರುಗೇಟು ನೀಡಿದ ರೇವಣ್ಣ ಅವರು, ನನ್ನದು ಸ್ವಾತಿ ನಕ್ಷತ್ರ. ನನಗೆ ಯಾರಾದರೂ ಮಾಟ, ಮಂತ್ರ ಮಾಡಿಸಿದರೆ ಅದು ನನಗೆ ತಟ್ಟುವುದಿಲ್ಲ.

ಮಾಡಿಸಿದವರಿಗೇ ತಿರುಗುಬಾಣವಾಗುತ್ತೆ. ಐಟಿ ದಾಳಿಯಿಂದ ನನಗೆ ಶಾಕ್‌ ಆಗಿಲ್ಲ. ಇದು ಚುನಾವಣೆಯ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ. ನಮಗೇ ಅನುಕೂಲವಾಗಲಿದೆ ಎಂದರು. ಪಕ್ಷದ ಮುಖಂಡರಾದ ಪಟೇಲ್‌ ಶಿವರಾಂ, ಕೆ.ಎಂ.ರಾಜೇಗೌಡ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next