ಮಂಗಳೂರು: ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿರುವುದನ್ನು ಖಂಡಿಸಿ, ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ಬಿಜೆಪಿಯ ಜನಾರ್ದನ ರೆಡ್ಡಿ, ಸಿದ್ದೇಶ್ ಅವರ ಮೇಲೆ ಇಂತಹ ದಾಳಿ ಆದಾಗ ಕಾಂಗ್ರೆಸ್‌ನವರು ಸತ್ಯಕ್ಕೆ ಸಂದ ಜಯ ಎಂದಿದ್ದರು. ಆದರೆ ಡಿ.ಕೆ. ಶಿವಕುಮಾರ್ ಮನೆಗೆ ದಾಳಿ ಮಾಡಿದಾಗ ನರೇಂದ್ರ ಮೋದಿ ಕುಮ್ಮಕ್ಕು ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಎಂಬುದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನದತ್ತ ಸಾಗುತ್ತಿದೆ. ಆದಾಯ ತೆರಿಗೆ ಇಲಾಖೆ ರಾಜ್ಯದ ಎಲ್ಲ ಭ್ರಷ್ಟರ ಪಟ್ಟಿ ಮಾಡಿ ದಾಳಿ ನಡೆಸುವ ಮೂಲಕ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತವಾಗಿಸಬೇಕು ಎಂದು ಆಗ್ರಹಿಸಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿಯಾದಾಗ ಮುಖ್ಯಮಂತ್ರಿಗಳು ತನಿಖೆಗೆ ಪೂರ್ಣ ಸಹಕಾರ ನೀಡಬೇಕಿತ್ತು. ತಾವು ನಿಷ್ಕಳಂಕರು ಎಂದು ಸಾಬೀತು ಮಾಡಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಡಿಕೆಶಿ ಮನೆ ಮೇಲೆ ದಾಳಿಯಾದಾಗ ಕಾಂಗ್ರೆಸ್ ಕಾರ್ಯಕರ್ತರು ಐಟಿ ಸಂಸ್ಥೆಯ ಮೇಲೆಯೇ ದಾಳಿ ನಡೆಸಿ ಸೊತ್ತು ನಾಶ ಮಾಡಿದ್ದಾರೆ. ಈ ರೀತಿ ಗೂಂಡಾಗಿರಿ ಪ್ರದರ್ಶಿಸಿರುವುದು ಖಂಡನೀಯ. ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನವರಿಗೆ ಜನರ ಹಿತಾಸಕ್ತಿ ಬೇಕಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದವರು ಹೇಳಿದರು.
ಇನ್ನೂ ಆರೋಪಿಗಳ ಬಂಧನವಾಗಿಲ್ಲ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾಗಿ ತಿಂಗಳು ಕಳೆದರೂ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಪೊಲೀಸರು ನಿರ್ಲಕ್ಷ್ಯ ವಹಿಸದೆ ತತ್‌ಕ್ಷಣ ಬಂಧಿಸಿ ಕಾನೂನಿನಡಿ ಸೂಕ್ತ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್, ಕಿಶೋರ್ ರೈ, ಸುರೇಶ್ ಆಳ್ವ ಉಪಸ್ಥಿತರಿದ್ದರು.