ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮುಖಂಡರ ಮೇಲಿನ ಐಟಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಆದಾಯ ತೆರಿಗೆ ಇಲಾಖೆ ತಿರುಗೇಟು ನೀಡಿದೆ.
ರಾಜ್ಯದ ಸಂಸದರು, ಶಾಸಕರು ಮತ್ತು ಸಚಿವರು ಹಾಗೂ ಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ವಿಶ್ವಾಸಾರ್ಹ ಮೂಲಗಳ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತ ಅಲ್ಲ ಎಂದು ಐಟಿ ಸ್ಪಷ್ಟಪಡಿಸಿದೆ.
ಐಟಿ ಇಲಾಖೆಯ ಚಟುವಟಿಕೆಗಳನ್ನು ರಾಜಕೀಯಗೊಳಿಸುವುದು, ವ್ಯಕ್ತಿಗತ ಮಾಡಬೇಡಿ. ಉನ್ನತ ಸ್ಥಾನದಲ್ಲಿರುವ ಕೆಲವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಖಂಡನೀಯ. ಐಟಿ ತನಿಖಾ ತಂಡ ಕಾನೂನಿನ ಅವಕಾಶಗಳನ್ನು ಬಳಸಿಕೊಂಡು ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ ಎಲ್ಲ ರಾಜಕೀಯ ಪಕ್ಷಗಳು, ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ. ಇಲಾಖೆಯಲ್ಲಿರುವ ಗುಪ್ತಚರ ವಿಭಾಗ ಹಾಗೂ ಇತರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಆಧಾರದ ಮೇಲೆ ಸೂಕ್ತ ದಾಖಲೆ ಗಳೊಂದಿಗೆ ದಾಳಿ ನಡೆಸಲಾಗುತ್ತದೆ. ಇದೇ ಆಧಾರದ ಮೇಲೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಈ ಹಿಂದೆ ಉದ್ಯಮಿಗಳು, ಗಣಿಉದ್ಯಮಿಗಳು, ಸಿನಿಮಾ ನಟರು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಇತರರ ಮೇಲೆ ಮೇಲೆ ದಾಳಿ ನಡೆಸಲಾಗಿದೆ.
ಕೆಲವರು ಹೊರ ರಾಜ್ಯಗಳಿಂದ ಕೇಂದ್ರ ಭದ್ರತಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಾಮಾನ್ಯ ಪ್ರಕ್ರಿಯೆ ಮೂಲಕವೇ ರಾಜ್ಯದ
ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿಯೇ ಸಿಆರ್‌ಪಿಎಫ್ ಪಡೆಯನ್ನು ಭದ್ರತೆಗೆ ನಿಯೋಜಿಸಿಕೊಳ್ಳಲಾಗಿದೆ ಎಂದು ಐಟಿ
ತಿಳಿಸಿದೆ. ಆದಾಯ ತೆರಿಗೆ ಇಲಾಖೆ ವಿಶ್ವಾಸಾರ್ಹ ಸ್ವಾಯತ್ತ ಸಂಸ್ಥೆಯಾಗಿದ್ದು, ಯಾರೂ ಹೆದರಬೇಕಿಲ್ಲ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.