Advertisement

ಏಸೂರಲ್ಲೂ ಇಲ್ಲ,ಈಸೂರಿನಂಥ ದೇವಳ: ಕೋಟೆಯ ರಾಮೇಶ್ವರ

02:36 PM Jan 14, 2017 | |

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಐತಿಹಾಸಿಕ ಗ್ರಾಮ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟೀಷರ ಆಡಳಿತಕ್ಕೆ ಒಳಪಡುವುದನ್ನು ವಿರೋಧಿಸಿ “ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಉಗ್ರ ಹೋರಾಟ ನಡೆಸಿ ಹುತಾತ್ಮರಾದ ದೇಶ ಭಕ್ತರ ಗ್ರಾಮ ಇದಾಗಿದೆ. ಈ ಗ್ರಾಮದಲ್ಲಿ ಅತ್ಯಂತ ಪ್ರಾಚೀನ ಇತಿಹಾಸವುಳ್ಳ ಕೋಟೆ ರಾಮೇಶ್ವರ ದೇವಾಲಯವಿದ್ದು ಭಕ್ತರ ಮನೋಭಿಲಾಷೆ ಪೂರೈಸುವ ದೇಗುಲವೆಂದು ಪ್ರಸಿದ್ಧವಾಗಿದೆ.

Advertisement

  ಅತಿ ಪ್ರಾಚೀನ ಕಾಲದಲ್ಲಿಯೂ ಗ್ರಾಮದ ಈ ಸ್ಥಳ ಕೋಟೆ ಕೊತ್ತಲಗಳಿಂದ ಕೂಡಿದ ಸ್ಥಳವಾಗಿತ್ತು. ಸಾಮಂತ ರಾಜರು, ಮಾಂಡಲಿಕರು ವಾಸಿಸಿದ ಸ್ಥಳವಾಗಿತ್ತು. ಈ ದೇವಾಲಯ ಗಜಮುಖಾಕೃತಿ ಹೊಂದಿರುವುದು ಗಮನಾರ್ಹ ಅಂಶವಾಗಿದೆ. 1992ರ ಸುಮಾರಿಗೆ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಅಲ್ಲಿಯವರೆಗೂ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು. ಇತಿಹಾಸ ತಜ್ಞ ಅ.ಸುಂದರಂ ಮತ್ತ ತಂಡದ ಸದಸ್ಯರನ್ನು ಕರೆಸಿ ಇಲ್ಲಿನ ದೇಗುಲದ ಬಗ್ಗೆ ಅಧ್ಯಯನ ನಡೆಸಲು ಗ್ರಾಮಸ್ಥರು ಆಮಂತ್ರಿಸಿದ್ದರು. ಜೀರ್ಣೋದ್ಧಾರಕ್ಕಾಗಿ ಶಿಲಾ ದೇಗುಲದ ಅಡಿಪಾಯ ಸರಿಪಡಿಸುವ ಸಂದರ್ಭದಲ್ಲಿ ತಳ ಭಾಗದಲ್ಲಿ ಇನ್ನೊಂದು ದೇವಾಲಯ ಇರುವುದು ತಿಳಿದು ಬಂದಿತು.ದೇವಾಲಯಕ್ಕೆ ಬಳಸಿದ ಕಲ್ಲುಗಳು ಸುಟ್ಟ ಇಟ್ಟಿಗೆಯದಾಗಿದ್ದು  1 ಅಡಿ ಉದ್ದ . 2 ಅಡಿ ಅಗಲ ಮತ್ತು 3 ಅಡಿ ದಪ್ಪದ ಕಲ್ಲುಗಳಾಗಿದ್ದವು. ಇದು ಶಾತವಾಹನರ ಕಾಲದ ರಚನೆಯಾಗಿತ್ತು ಎಂಬುದು ತಜ್ಞರ ಅಭಿಮತ. ಐಹೊಳೆ ,ಪಟ್ಟದಕಲ್ಲು, ಬಾದಾಮಿ ಇನ್ನಿತರ ಕಡೆಗಳಲ್ಲಿನ ಶಿಲಾ ರಚನೆ, ಕೆತ್ತನೆಗಳು ಗೋಚರಿಸಿದ್ದವು.

ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ದೇವಿಯ ತವರೂರು ಈಸೂರು ಎಂಬುದು ಇತಿಹಾಸದ ಹಲವು ಉಲ್ಲೇಖಗಳಿಂದ ವೇದ್ಯವಾಗಿದೆ. ಶಾಂತಲಾದೇವಿ  ತನ್ನನ್ನು ಈಶಪುರದ ಕೋಟೆ ರಾಮೇಶ್ವರನ ವರ ಪ್ರಸಾದ ಎಂದು ಬಣ್ಣಿಸಿಕೊಂಡಿದ್ದಾಳೆ. 

ಈ ಈಶಪುರವೇ ಈಗಿನ ಈಸೂರು. ಶಾಂತಲೆ ಈಸೂರಿನಲ್ಲಿ ಜನಿಸಿ ,ಬಳ್ಳೇಗಾಯ ವಿಶ್ವ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಹೊಯ್ಸಳ ಸಾಮ್ರಾಟನ ಪಟ್ಟದರಾಣಿಯಾದ ಬಳಿಕ ಇವಳು ತನ್ನ ತವರೂರಿನ ಈ ರಾಮೇಶ್ವರ ದೇವಾಲಯವನ್ನು ಜೀರ್ಣೋದ್ಧರಗೊಳಿಸದ ಬಗ್ಗೆ ದಾಖಲೆ ದೊರೆತಿದೆ. ಶಾತವಾಹನರ ಕಾಲದಲ್ಲಿ ನಿರ್ಮಾಣವಾಗಿ ಪ್ರಕೃತಿ ಕೋಪದಿಂದ ನೆಲದಲ್ಲಿ ಹೂತು ಹೋಗಿದ್ದ ದೇವಾಲಯದ ಮೇಲ್ಭಾಗದಲ್ಲಿ ಶಾಂತಲಾದೇ ಹೊಯ್ಸಳ ಶೈಲಿಯಲ್ಲಿ ಶಿಲಾ ದೇಗುಲ ನಿರ್ಮಿಸಿದ್ದಳು ಎನ್ನಲಾಗಿದೆ.ಇಲ್ಲಿನ ಆವರಣದ ಸಮೀಪ ಪ್ರಾಚೀನ ಕಾಲದಲ್ಲಿ ನಾಣ್ಯ ತಯಾರಿಸುವ ಟಂಕಸಾಲೆ ಇದ್ದಿತ್ತು ಎನ್ನಲಾಗಿದೆ. ಈ ಸ್ಥಳದಲ್ಲಿ ಚೇಳಿನಾಕೃತಿಯ ಬಂಗಾರದ ನಾಣ್ಯ ದೊರೆತಿದೆ.
ಈ ನಾಣ್ಯದಲ್ಲಿ ರಾಮ, ಸೀತೆ, ಆಂಜನೇಯರ ಚಿತ್ತವಿದೆ. ಈಶಪುರ ಎಂಬ ಕೆತ್ತನೆ ಸಹ ಇದೆ. ಚಾಲುಕ್ಯರ ದೊರೆ ತ್ರೆ„ಲೋಕಮಲ್ಲನ ಕಾಲಕ್ಕೆ ಸೇರಿದ ಶಿಲಾ ಶಾಸನ ಸಹ ಇಲ್ಲಿ ದೊರೆತಿದೆ.

 ದೇವಾಲಯದಿಂದ ಸ್ವಲ್ಪ ದೂರದ ಸ್ಥಳದಲ್ಲಿ ಜೋಡಿ ಸಮಾಧಿ ಕಂಡು ಬಂದಿದ್ದು ರಾಜರಾಣಿ ಸಮಾಧಿ ಎಂಬ ಪ್ರತೀತಿ ಇದೆ. ಶಾಂತಲೆಯ ತಾಯಿ ಮಾಚಿಕಬ್ಬೆಯ ಸಮಾಧಿ ಇದು ಎನ್ನಲಾಗಿದೆ. 

Advertisement

ರಾಮ ಮತ್ತು ಶಿವನ ಸಾನಿಧ್ಯ ಇದಾಗಿದ್ದು ಭಕ್ತರಿಗೆ ಶೀಘ್ರ ವರ ಪ್ರಸಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸ, ಕಾರ್ತಿಕ ಮಾಸಗಳಲ್ಲಿ ನಿತ್ಯ ವಿಶೇಷ ಪೂಜೆ ನಡೆಯುತ್ತದೆ.ದಸರಾದಲ್ಲಿ ನವರಾತ್ರಿ ಉತ್ಸವ ನಡೆಯುತ್ತದೆ. ವಿಜಯದಶಮಿಯಂದು ವೈಭವದ ಉತ್ಸವ ನಡೆಸಲಾಗುತ್ತದೆ. ಶಿವರಾತ್ರಿಯಂದು ಭಕ್ತರಿಂದ ಅಭಿಷೇಕ, ಜಾಗರಣೆ, ಭಜನಾ ಸೇವೆ ನಡೆಯುತ್ತದೆ. ಯುಗಾದಿಯಂದು ಗ್ರಾಮ ಪೂಜೆ ನಡೆಸಲಾಗುತ್ತದೆ. ಬಿಲ್ವ ಪತ್ರೆ, ಪೀತಾಂಬರ ಬಟ್ಟೆ, ರುದ್ರಾಭಿಷೇಕಗಳನ್ನು ಭಕ್ತರು ಹರಕೆಯಾಗಿ ಪ್ರಾರ್ಥಿಸಿ ತಮ್ಮ ಇಷ್ಟಾರ್ಥ ನೆರವೇರಿದ ಹರಕೆ ಸಲ್ಲಿಸುವ ದೃಶ್ಯ ನಿತ್ಯ ಕಂಡು ಬರುತ್ತದೆ.

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next