ಮೈಸೂರು: ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರ ವಿರುದ್ಧವೇ ವಾಗ್ಧಾಳಿ ನಡೆಸಿರುವ ಮಾಜಿ ಸಂಸದ ಎಚ್.ವಿಶ್ವನಾಥ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ವಿರುದ್ಧ ದೂರು ನೀಡಬೇಕೆಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೋವಿಂದರಾಜು ಚಾರಿತ್ರ ಸರಿಯಿಲ್ಲ ಎಂದು ಮೊದಲೇ ಗೊತ್ತಿತ್ತು, ಆದರೂ ಅವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಜವಾಬ್ದಾರಿಯನ್ನು ಗೊವಿಂದರಾಜು ಅವರೇ ಹೋರಬೇಕಿದೆ. ಒಟ್ಟಾರೆ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬುದು ಸತ್ಯದ ಸಂಗತಿಯಾಗಿದ್ದು, ಈ ಷಡ್ಯಂತ್ರ ಬಿಜೆಪಿ ಹಾಗೂ ಗೋವಿಂದರಾಜು ಅವರಿಂದಲೇ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಸೂಕ್ತ ತನಿಖೆಯಾಗಲಿ: ಮತ್ತೂಂದೆಡೆ ಕಾಂಗ್ರೆಸ್ ಹೈಕಮಾಂಡ್‌ಅನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕಪ್ಪ ನೀಡಿರುವ ಸಾಧ್ಯತೆಗಳಿದ್ದು, ಕೆಪಿಸಿಸಿ ಅಧ್ಯಕ್ಷರು ಏಕೆ ಇನ್ನೂ ಮೌನವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಡೈರಿ ಪ್ರಕರಣದ ಕುರಿತು ಕೆಪಿಸಿಸಿ ದೂರು ನೀಡಬೇಕಿದ್ದು, ಡೈರಿಯಲ್ಲಿರುವ ಅಂಶಗಳ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ಮೊದಲಿಗೆ ಡೈರಿ ದಾಖಲೆ ಹೇಗೆ ಹೊರಗೆ ಬಂತು ಅನ್ನುವುದೂ ತನಿಖೆಯಾಗಬೇಕಿದ್ದು, ಅದರೊಂದಿಗೆ ಡೈರಿಯಲ್ಲಿರುವ ಸತ್ಯಾಂಶ ಏನು ಎಂಬುದು ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನರಿಗೆ ತಿಳಿಯಬೇಕಿದೆ ಎಂದರು.
ಪದವೇ ಅಪವಿತ್ರವಾಗಿದೆ: ಪ್ರಸ್ತುತ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲೂ ಪಾವಿತ್ರತೆ ಉಳಿದಿಲ್ಲ. ಜಾರಿ ನಿರ್ದೇಶನಾಲಯ ಮಾತ್ರವಲ್ಲ, ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲೂ ಇಂದು ಪಾವಿತ್ರತೆ ಉಳಿದುಕೊಂಡಿಲ್ಲ. ಆ ಮೂಲಕ ಪಾವಿತ್ರತೆ ಎಂಬ ಪದವೇ ಅಪವಿತ್ರವಾಗಿ ಹೋಗಿದೆ ಎಂದ ಅವರು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಯಾರಾದರೂ ಬರೆದಿಡುತ್ತಾರಾ ಎಂದು ಯಡಿಯೂರಪ್ಪ ಅವರೇ ಹೇಳಿಲ್ಲವೇ.
ಅಲ್ಲದೆ ಡೈರಿಯಲ್ಲಿರುವ ದಾಖಲೆ ಪರಿಗಣನೆಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸಹ ಹೇಳಿದ್ದು, ಈ ಹಿನ್ನೆಲೆಯಲ್ಲಿ ಡೈರಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳನ್ನು ಹೇಗೆ ಸಾಬೀತು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಇದೆಲ್ಲವೂ ಜನರನ್ನು ದಾರಿ ತಪ್ಪಸುವ ಕೆಲಸವಾಗಿದೆ ಎಂದು ಕಿಡಿಕಾರಿದರು.