Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ: ಸಿಎಂಗೆ ಹೊರಟ್ಟಿ ಪತ್ರ

12:31 PM Aug 11, 2017 | |

ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಸರಕಾರ ಆ.13ರೊಳಗೆ ಮಾತುಕತೆಗೆ ಮುಂದಾಗದಿದ್ದಲ್ಲಿ, ಆ.21ರಿಂದ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. 

Advertisement

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಸಮಸ್ಯೆ ಕುರಿತು ಹಲವಾರು ಬಾರಿ ಹೋರಾಟ ಮಾಡಲಾಗಿದೆ ಹಾಗೂ ಸದನದೊಳಗೆ ಮತ್ತು ಹೊರಗೆ ಚರ್ಚಿಸುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದರೂ ಸರಕಾರದಿಂದ ಸಕಾರಾತ್ಮಕ ಉತ್ತರ ಬಂದಿಲ್ಲ.

ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸೇರಿ 20ಕ್ಕೂ ಅಧಿಕ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು 2016ರ ಅಕ್ಟೋಬರ್‌ 24ರಂದು ರೆದು ಮನವಿ ಮಾಡಲಾಗಿತ್ತು. ನಂತರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಮನವಿ ಸಲ್ಲಿಸಿದಾಗ ಒಕ್ಕೂಟದ ಪದಾಧಿಕಾರಿಗಳನ್ನು ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿದ್ದೇವು. 

ಆದರೆ ತಮ್ಮ ಭರವಸೆ ಭರವಸೆಯಾಗಿಯೇ ಉಳಿಯಿತೆ ಹೊರತು ಕಿಂಚಿತ್ತು ಪ್ರಗತಿ ಕಂಡಿಲ್ಲ. ಈ ಬಗ್ಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಜೀವನಾಡಿಗಳಾಗಿದ್ದು, ಅಕ್ಷರ ದಾಸೋಹದ ಜೊತೆಗೆ ಅನ್ನದಾಸೋಹ ಕೈಗೊಂಡಿರುವ ಮಠ-ಮಾನ್ಯಗಳು,

ಶಿಕ್ಷಣ ಸಂಸ್ಥೆಗಳ ಕುರಿತು ಸರಕಾರದ ಧೋರಣೆ, ಅಧಿಕಾರಗಳ ಅಸಡ್ಡೆ ಮನೋಭಾವ ಸರ್ವತಾ ಸಮರ್ಥನಿಯವಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಆ.13ರೊಳಗಾಗಿ ಒಕ್ಕೂಟದ ಮನವಿಗೆ ಸ್ಪಂದಿಸಿ, ಪದಾಧಿಕಾರಿಗಳೊಂದಿಗೆ ಮಾತುಕತೆಗೆ ಮುಂದಾಗದಿದ್ದಲ್ಲಿ ಆ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ನಿಶ್ಚಿತ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.

Advertisement

ಜೊತೆಗೆ ಸೆಪ್ಟೆಂಬರ್‌ 5ರ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸುವುದರ ಮೂಲಕ ಪ್ರತಿಭಟಿಸಲು ನಿಶ್ಚಯಿಸಲಾಗಿದೆ. ಕಾರಣ ಈ ವಿಷಯದ ಗಾಂಭೀರ್ಯತೆ ಅರಿತುಕೊಂಡು ತಕ್ಷಣ ಕಾರ್ಯೋನ್ಮುಖರಾಗದಿದ್ದರೆ ಮುಂದಿನ ಆಗು-ಹೋಗುಗಳಿಗೆ ಸರಕಾರವೇ ಜವಾಬ್ದಾರವಾಗಬೇಕಾಗುತ್ತದೆ. ಆಡಳಿತ ಮಂಡಳಿಗಳ ಹಾಗೂ ಶಿಕ್ಷಕರ ತಾಳ್ಮೆ ಪರೀಕ್ಷಿಸದೆ ಸೌಹಾರ್ದಯುತ ಪರಿಹಾರಕ್ಕೆ ಮುಂದಾಗಬೇಕೆಂದು ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next