Advertisement

ಭೂಸ್ವಾಧೀನಕ್ಕೆ ನೋಟಿಸ್‌ ಜಾರಿ

02:35 PM Jul 03, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಂಟೆ ಬಳಿ ಹೊಸ ಕೈಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧೀನಕ್ಕಾಗಿ ಜು. 7ರಂದು ಸಭೆಗೆ ಹಾಜರಾಗುವಂತೆ ರೈತರಿಗೆ ನೋಟಿಸ್‌ ನೀಡಲಾಗಿದ್ದು, ಆತಂಕಗೊಂಡಿರುವ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಭೂ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಕೆಐಡಿಬಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಅವರು, ಕೈಗಾರಿಕಾ ಪ್ರದೇಶಕ್ಕೆ ಭೂಮಿಯನ್ನು ಏಕೆ ಸ್ವಾಧೀನ ಪಡಿಸಿಕೊಳ್ಳಬಾರದೆಂಬುದರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಜು. 7ರಂದು ಹುಲಿಕುಂಟೆ ಗ್ರಾಮದ ಎಂಪಿಸಿಎಸ್‌ ಮುಂಭಾಗ ಆಯೋ ಜಿಸಿರುವ ಸಭೆಗೆ ಹಾಜರಾಗುವಂತೆ ರೈತರಿಗೆ ನೋಟಿಸ್‌ ನೀಡಿದ್ದು, ಫಲವತ್ತಾದ ಕೃಷಿಭೂಮಿ ಯನ್ನು ನೀಡುವುದಿಲ್ಲವೆಂದು ಪಟ್ಟು ಹಿಡಿದು ತೀವ್ರ ಹೋರಾಟ ನಡೆಸಿ, ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾಪ ಕೈ ಬಿಡುವಂತೆ ಮನವಿ ಸಲ್ಲಿಸಿದ್ದರು. ಮತ್ತೆ ನೋಟಿಸ್‌ ನೀಡಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಭೂಮಿ ವಶಪಡಿಸಿಕೊಳ್ಳುವ ಹುನ್ನಾರ: ಕೈಗಾರಿಕಾ ಪ್ರದೇಶ ಸ್ಥಾಪನೆ ಸರ್ಕಾರ ಫಲವತ್ತಾದ ಕೃಷಿ ವಶಪಡಿಸಿಕೊಳ್ಳಲು ಮತ್ತೆ ನೋಟಿಸ್‌ ನೀಡಿರುವುದು ಖಂಡನೀಯ. ಈ ವ್ಯಾಪ್ತಿಯಲ್ಲಿ ನೂರಕ್ಕು ಕೊಳವೆ ಬಾವಿಗಳು, 150 ಎಕರೆಗೂ ಹೆಚ್ಚು ಅಡಕೆ, ತೆಂಗು, ಮಾವಿನ ತೋಟಗಳು ಸೇರಿದಂತೆ ಇಲ್ಲಿನ ರೈತರು ಕೃಷಿಯನ್ನೇ ಅಧಾರವಾಗಿ ಜೀವನ ನಡೆಸುತ್ತಿರು ವುದಕ್ಕೆ ಸಾಕ್ಷಿಯಾಗಿ ಹೋಬಳಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರ ಲೀಟರ್‌ ಹಾಲನ್ನು ಉತ್ಪಾದಿಸಿ ಡೇರಿಗೆ ನೀಡಲಾಗುತ್ತಿದೆ. ಆದಾಗ್ಯೂ ರೈತರ ಪರ ಸರ್ಕಾರಗಳೆನ್ನುವವರು, ಫಲವತ್ತಾದ ಭೂಮಿಯನ್ನೇ ವಶಪಡಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದಿದ್ದಾರೆ.

2021ರ ಫೆ. 4ರಂದು ನಡೆದ ರಸ್ತೆತಡೆಯ ವೇಳೆ ಕೆಐಡಿಬಿಯಲ್ಲಿನ ಅಧಿಕಾರಿಗಳು ಹುಲಿಕುಂಟೆ ಸುತ್ತ ಕೆಐಡಿಬಿಗೆ ಭೂಸ್ವಾಧೀನಕ್ಕೆ ಒಳಪಡುತ್ತಿರುವ ಜಮೀನು ಕುರಿತು ಮಾಹಿತಿ ನೀಡಿರುವ ಆಧಾರದ ಮೇಲೆ ಪ್ರಭಾವಿ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಸಂಬಂಧಿಗಳು ಜಮೀನು ಖರೀದಿಸಿದ್ದಾರೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಗಂಭೀರ ಆರೋಪ ಮಾಡಿ, ಪ್ರತಿಭಟನೆ ಸಹ ನಡೆಸಿದ್ದರು.

ಕೈಗಾರಿಕೆಗಳು ಇನ್ನು ಕಾರ್ಯಾರಂಭ ಮಾಡಿಲ್ಲ: ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ 80ರ ದಶಕದಲ್ಲಿ ಆರಂಭವಾದ ಕೈಗಾರಿಕಾ ಪ್ರದೇಶ ನಾಲ್ಕು ಬಾರಿ ವಿಸ್ತರಣೆಯಾಗಿ ಈಗ ಸುಮಾರು 2,500 ಎಕರೆಗೆ ಬಂದು ನಿಂತಿದೆ. ಹಾಗೆಯೇ ಹುಲಿಕುಂಟೆ ಗಡಿ ಭಾಗಕ್ಕೆ ಹೊಂದಿಕೊಂಡಂತೆಯೇ ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆ, ಶಿವಗಂಗೆ ಸಮೀಪ ಸುಮಾರು 1,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗಿದೆ. ಈ ಇಷ್ಟೂ ಪ್ರದೇಶದಲ್ಲೂ ಭೂಸ್ವಾಧೀನವಾಗಿ ದಶಕಗಳೇ ಕಳೆದಿದ್ದರೂ, ಇನ್ನು ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡದೇ ಜಮೀನು ಖಾಲಿಯಾಗಿಯೇ ಉಳಿದಿವೆ.

Advertisement

ವಾಸ್ತವ ಸ್ಥಿತಿ ಹೀಗಿರುವಾಗ ತಾಲೂಕಿಗೆ ಮತ್ತೂಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಸಹಜವಾಗಿದೆ. ಹುಲಿಕುಂಟೆ, ಓಬಳಾಪುರ ವ್ಯಾಪ್ತಿಯಲ್ಲಿ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಕೃಷಿಕರನ್ನು ಒಕ್ಕಲೆಬ್ಬಿಸಿ ಕೈಗಾರಿಕೆ ಸ್ಥಾಪನೆ ಮಾಡುವ ಅಗತ್ಯವಾದರು ಏನಿದೆ?. ಯಾವುದೇ ಕಾರಣಕ್ಕೂ ನಾವು ಜಮೀನು ನೀಡುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

1,150 ಎಕರೆಯಲ್ಲಿ ಎಂಎಂಎಲ್ಪಿ ಸ್ಥಾಪನೆ : ನೆಲಮಂಗಲ ತಾಲೂಕಿನ ಓಬಳಾಪುರ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆ ಪ್ರದೇಶದಲ್ಲಿ ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌(ಎಂಎಂಎಲ್ಪಿ) ಸ್ಥಾಪನೆಯಾಗು ತ್ತಿದೆ. ನೆಲಮಂಗಲ ತಾಲೂಕಿನ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ, ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆ ಗುರುತಿಸಲಾಗಿದೆ. ಹುಲಿಕುಂಟೆ ಸಮೀಪ ಮಲ್ಟಿ ಮಾರ್ಡನ್‌ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ 600 ಎಕರೆ ಭೂಸ್ವಾಧೀನ ಕೈಬಿಡುವಂತೆ ಆಗ್ರಹಿಸಿ, ರಾಷ್ಟ್ರೀಯ ಹೆದ್ದಾರಿ 207ರಲ್ಲಿ ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಯೋಜನೆ ಕೈ ಬಿಡುವಂತೆ ರೈತರ ಪ್ರತಿಭಟನಾ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದ್ದರು. ಅಲ್ಲದೆ, ಕೃಷಿ ಭೂಮಿ ಉಳಿಸಿಕೊಳ್ಳಲು ಹುಲಿಕುಂಟೆ ವ್ಯಾಪ್ತಿಯ ಕೃಷಿ ಭೂಮಿ ಭೂ ಸ್ವಾಧೀನ ಕೈಬಿಡಿಸಲು ಮಠಾಧಿಪತಿಗಳ ನೆರವು ಬೇಡಿದ ರೈತರು, ಸರ್ಕಾರಕ್ಕೆ ಪತ್ರ ರವಾನಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next