ಹುಣಸೂರು: ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್.ಪಿ.ಮಂಜುನಾಥ್ 51 ರೈತರಿಗೆ ಸಾಗುವಳಿ ಪತ್ರ ವಿತರಿಸಿದರು. ಸಾಗುವಳಿ ಪತ್ರ ವಿತರಿಸಿ ಮಾತನಾಡಿದ ಶಾಸಕರು, ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸಾಗುವಳಿ ಪತ್ರ ವಿತರಣೆ ಈಗ ನಡೆಯುತ್ತಿದ್ದು ತಾಲೂಕಿನಲ್ಲಿ 960 ಅರ್ಜಿಗಳು ಪುನರ್‌ಪರಿಶೀಲನೆಗಾಗಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಸಮಿತಿ ಮುಂದೆ ಬಂದಿವೆ.
ಈಗಾಗಲೇ ಸಮಿತಿ ವತಿಯಿಂದ 330ಮಂದಿಗೆ ಸಾಗುವಳಿ ಪತ್ರ ವಿತರಿಸಲಾಗಿದೆ. ಈಗ ನೀಡುತ್ತಿರುವ 51 ಫಲಾನುಭವಿಗಳ ಪೈಕಿ 26 ಮಂದಿ ಆಸ್ಪತ್ರೆ ಕಾವಲ್ ಸೊಸೈಟಿ ಸದಸ್ಯರಾಗಿದ್ದಾರೆ. ಆಸ್ಪತ್ರೆ ಕಾವಲ್ ಸೊಸೈಟಿ 745 ರೈತರಿಗೆ 40ವರ್ಷಗಳಿಂದ ಬಗೆಹರಿಯದ ಸಮಸ್ಯೆ ಪರಿಹರಿಸಿದ್ದೇನೆಂದು ಹೇಳಿದರು.
ಸರ್ಕಾರದ ಕಿಮ್ಮತ್ತನ್ನು ನೀಡಿ ಸಾಗುವಳಿ ಪತ್ರ ಪಡೆಯಲು ರೈತರು ಮುಂದೆ ಬರುತ್ತಿಲ್ಲವೆಂದ ಅವರು, ಇದಕ್ಕಾಗಿ ತಹಶೀಲ್ದಾರ್ ಸೇರಿದಂತೆ ಕಾರ್ಯದರ್ಶಿಗಳನ್ನು ಗ್ರಾಮದಲ್ಲೇ ಮೊಕ್ಕಾಂ ಮಾಡಿಸಿ ದಾಖಲೆ ಪಡೆಯಲು ಅನುಕೂಲ ಮಾಡಿಕೊಡಲಾಗಿತ್ತು. ಇಲ್ಲಿಯವರೆಗೆ 300 ಮಂದಿ ಮಾತ್ರ ಸಾಗುವಳಿ ಪತ್ರ ಪಡೆದಿದ್ದಾರೆ. ರೈತರು ಮುಂದೆ ಬಂದು ಸಾಗುವಳಿ ಪತ್ರ ಪಡೆಯಬೇಕೆಂದು ಮನವಿ ಮಾಡಿದರು.
ನ.28ಕ್ಕೆ ಮತ್ತೆ ವಿತರಣೆ: ಮುಂದಿನ ಅಕ್ರಮ-ಸಕ್ರಮ ಸಭೆ ನ.28ಕ್ಕೆ ನಡೆಯಲಿದೆ. ಅಲ್ಲಿಯ ತನಕ ನೂರಕ್ಕೂ ಹೆಚ್ಚು ಪ್ರಕರಣ ತ್ಯರ್ಥಗೊಳಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗೋಮಾಳ ಭೂಮಿಗೆ ಸಾಗುವಳಿ ನೀಡಲು ಸರ್ಕಾರ ಸೂಚಿಸಿದ್ದರೂ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಇತ್ಯರ್ಥದ ನಂತರ ವಿತರಣೆಗೆ ಕ್ರಮವಹಿಸಲಾಗುವುದೆಂದರು. ಅಕ್ರಮ ಸಮಿತಿ ಸದಸ್ಯರಾದ ಚಿಕ್ಕಸ್ವಾಮಿ, ತಹಶೀಲ್ದಾರ್ ಎಸ್.ಪಿ.ಮೋಹನ್, ಶಿರಸ್ತೇದಾರ್ ಗುರುರಾಜ್ ಮತ್ತಿತರರಿದ್ದರು.