Advertisement

ಡ್ರಗ್ಸ್‌ ಪ್ರಕರಣದಲ್ಲಿ ರಾಜಕೀಯ ಬೇಡ: ಫ‌ಡ್ನವೀಸ್‌

12:44 PM Oct 11, 2021 | Team Udayavani |

ಮುಂಬಯಿ: ವಿಲಾಸಿ ನೌಕೆಯಲ್ಲಿಯ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಸಿಪಿಯ ರಾಷ್ಟ್ರೀಯ ವಕ್ತಾರ ನವಾಬ್‌ ಮಲಿಕ್‌ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಲ್ಲದೆ ಎನ್‌ಸಿಬಿಯ ಕ್ರಮವನ್ನು ಪ್ರಶ್ನಿಸಿದ್ದಾರೆ. ಎನ್‌ಸಿಬಿಯಿಂದ ಬಿಡುಗಡೆಯಾದ ಮೂವರು ವ್ಯಕ್ತಿಗಳಲ್ಲಿ ಬಿಜೆಪಿ ನಾಯಕ ಮೋಹಿತ್‌ ಕಾಂಬೋಜ್‌ ಅವರ ಅಳಿಯನನ್ನು ಏಕೆ ಬಿಡುಗಡೆ ಮಾಡಲಾಯಿತು ಎಂದು ಪ್ರಶ್ನಿಸಿದ್ದರು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌, ಬಿಡುಗಡೆಯಾದ ವ್ಯಕ್ತಿಗಳಲ್ಲಿ ಓರ್ವ ಎನ್‌ಸಿಪಿಯ ಹಿರಿಯ ನಾಯಕನ ಪುತ್ರನೊಂದಿಗೆ ಸಂಬಂಧ ಹೊಂದಿದ್ದ. ಆದರೆ ಅವರು ಪ್ರಕರಣದಲ್ಲಿ ಸಿಲುಕದ ಕಾರಣ ನಾವು ಅವರ ಹೆಸರನ್ನು ತೆಗೆದುಕೊಳ್ಳುತ್ತಿಲ್ಲ. ಪ್ರಕರಣವನ್ನು ರಾಜಕೀಯಗೊಳಿಸಬಾರದು. ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ, ಅವರನ್ನು ಹಾಳು ಮಾಡುವ ಡ್ರಗ್ಸ್‌ ವಿರುದ್ಧ ಎನ್‌ಸಿಬಿ ಕಾರ್ಯಾಚರಣೆಯಾಗಿದ್ದು, ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಡ್ರಗ್‌ ಪಾರ್ಟಿ ವಿಚಾರವಾಗಿ ಎನ್‌ಸಿಬಿ ಸ್ಪಷ್ಟಪಡಿಸಿದೆ. ವಿಚಾರಣೆಗೆ ಕರೆದೊಯ್ದವರಲ್ಲಿ  ಪ್ರಕರಣದಲ್ಲಿ ಸಂಬಂಧ ಇಲ್ಲದವರನ್ನು ಬಿಡುಗಡೆ ಮಾಡಲಾಯಿತು. ಯಾರ ಬಳಿ ಮಾದಕ ಪದಾರ್ಥಗಳು ದೊರೆತಿವೆ ಅವರನ್ನು ಬಂಧಿಸಲಾಗಿದೆ. ಮಾದಕ ಪದಾರ್ಥ ನಮ್ಮ ಸಮಾಜಕ್ಕೆ, ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದನ್ನು ರಾಜಕೀಯಗೊಳಿಸುವುದು ತುಂಬಾ ತಪ್ಪು ಎಂದು ಫಡ್ನವೀಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next