ಬೆಂಗಳೂರು: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ನಗರದಲ್ಲಿ ಸೋಮವಾರ ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನದಿ ಜೋಡಣೆ, ಕೃಷ್ಣಾ- ಮಹದಾಯಿ ನದಿ ವಿವಾದ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವುದು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಮೊತ್ತ ಬಿಡುಗಡೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.
ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಯಡಿಯೂರಪ್ಪ ಐದು ಪ್ರಮುಖ ಅಂಶಗಳ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಿದರು. ಮುಖ್ಯವಾಗಿ ಮಹದಾಯಿ ನದಿ ವಿವಾದ ಬಹುಕಾಲದಿಂದ ಬಗೆಹರಿಯದೆ ಹಾಗೇ ಉಳಿದಿದೆ. ಮಹದಾಯಿ ಯೋಜನೆ ಜಾರಿಗೆ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಪರಿಸರ ಇಲಾಖೆ ಯೋಜನೆಗೆ ಹಸಿರು ನಿಶಾನೆ ತೋರಿದೆ.
ಆದರೆ ಗೋವಾ ಸರ್ಕಾರ ಅಧಿಸೂಚನೆ ಹೊರಡಿಸದಂತೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿವಾದ ಬಗೆಹರಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕು. ಕೃಷ್ಣಾ ಹಾಗೂ ಮಹದಾಯಿ ನದಿ ವಿವಾದ ನ್ಯಾಯಾಧಿಕರಣದ ನೀರು ಹಂಚಿಕೆ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.
ಕೃಷ್ಣಾ ಮತ್ತು ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆದ ಯಡಿಯೂರಪ್ಪ, ಕೃಷ್ಣಾ ಮತ್ತು ಕಾವೇರಿ ನದಿಗಳು ರಾಜ್ಯದ ಹೆಚ್ಚು ವ್ಯಾಪ್ತಿಯಲ್ಲಿ ಹರಿಯುತ್ತಿದ್ದರೂ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಹಾಗಾಗಿ ಕೃಷ್ಣಾ ಮತ್ತು ಕಾವೇರಿ ನದಿ ನೀರು ಹಂಚಿಕೆಯನ್ನು ಮಾರ್ಪಡಿಸಿ ರಾಜ್ಯಕ್ಕೆ ಹೆಚ್ಚಿನ ಪಾಲು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯವಾಗಿ ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಪೆನ್ನಾರ್ ನದಿಗಳ ಜಲಾನಯನ ಪ್ರದೇಶಗಳಲ್ಲಿನ ನದಿಗಳ ಜೋಡಣೆಯಿಂದ ನೀರಿನ ಲಭ್ಯತೆಯನ್ನು ವೃದ್ಧಿಸುವ ಕುರಿತಂತೆ ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಇದು ಪ್ರಧಾನಿ ನರೇಂದ್ರ ಮೋದಿಯವರಿಗೂ ಆದ್ಯತೆಯ ವಿಷಯವಾಗಿದೆ. ನದಿ ಜೋಡಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೇಕೆದಾಟು ಯೋಜನೆಗೂ ಅನುಮೋದನೆ ನೀಡಿ: ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆ ಮಹತ್ವದ್ದಾಗಿದ್ದು, ಆ ಯೋಜನೆಗೂ ಅನುಮೋದನೆ ನೀಡಬೇಕು. ಈ ಯೋಜನೆಗೆ ಅನುಮೋದನೆ ನೀಡಲು ಯಾವುದೇ ಕಾನೂನು ತೊಡಕು ಇರುವುದಿಲ್ಲ ಎಂದು ಮುಖ್ಯಮಂತ್ರಿಗಳು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಇದಕ್ಕೆ ಜಲಶಕ್ತಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ವೇಳೆ ಪ್ರಧಾನ ಮಂತ್ರಿ ಕಿಸಾನ್ ಸಿಂಚಾಯಿ ಯೋಜನೆ ಸೇರಿ ರಾಜ್ಯ ಸರ್ಕಾರ ಕೈಗೊಂಡಿರುವ ತುಂಗಾ ಮೇಲ್ದಂಡೆ, ಭೀಮಾ ಏತ ನೀರಾವರಿ ಯೋಜನೆ, ಕಾರಂಜಾ, ರಾಮೇಶ್ವರ ಏತ ನೀರಾವರಿ ಯೋಜನೆ ಹಾಗೂ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ಸೇರಿ ಇತರೆ ಯೋಜನೆಗಳಿಗೆ 439 ಕೋಟಿ ರೂ.ಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ಜಲಶಕ್ತಿ ಸಚಿವರು ಭರವಸೆ ನೀಡಿದ್ದಾರೆ.
ಮುಂದಿನ ವಾರ ಜಲಸಂಪನ್ಮೂಲ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳು ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದು, ದೆಹಲಿಯಲ್ಲಿ ಇಲಾಖೆಗೆ ಸಂಬಂಧಪಟ್ಟಂತೆ ಸಭೆ ನಡೆಸಿ ರಾಜ್ಯದ ಮನವಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತರರು ಉಪಸ್ಥಿತರಿದ್ದರು.