ಸುರತ್ಕಲ್: ಸ್ಪೇಸ್ ಟೆಕ್ನಾಲಜಿ ಆ್ಯಪ್ಲಿಕೇಶನ್ ಕ್ಷೇತ್ರದಲ್ಲಿ ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಸುರತ್ಕಲ್ ಎನ್‌ಐಟಿಕೆ ತಿಳಿವಳಿಕೆ ಒಪ್ಪಂದಕ್ಕೆ ಇಂದಿಲ್ಲಿ ಸಹಿ ಹಾಕಿವೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆಗೆ ವಿಪುಲ ಅವಕಾಶ ವಿದ್ದು, ವಿದ್ಯಾರ್ಥಿಗಳಿಗೆ ಸಾಧನೆಗೈಯುವ ಅವಕಾಶಗಳು ಉಜ್ವಲ ವಾಗಿವೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಇಸ್ರೋವು ಸುರತ್ಕಲ್ ಎನ್‌ಐಟಿಕೆ ಜತೆಗೆ ಪ್ರಾದೇಶಿಕ ಶೈಕ್ಷಣಿಕ ಅಧ್ಯಯನ ಕೇಂದ್ರ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಸಂಶೋಧನ ಕ್ಷೇತ್ರದಲ್ಲಿ ಉತ್ತೇಜನ ನೀಡಲು ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಸಂಶೋಧನೆಗೆ 2 ಕೋ. ರೂ.ಗಳ ನಿಧಿಯನ್ನು ನೀಡಲಾಗುವುದು ಎಂದು ಇಸ್ರೋದ ಸಾಮರ್ಥ್ಯ ವೃದ್ಧಿ ಯೋಜನ ವಿಭಾಗದ ನಿರ್ದೇಶಕ ಪಿ. ವೆಂಕಟಕೃಷ್ಣನ್ ಹೇಳಿದರು.
ಜೈಪುರ, ಗುವಾಹಾಟಿ, ಕುರುಕ್ಷೇತ್ರ ಗಳಲ್ಲಿ ಈಗಾಗಲೇ ಇಂಥ ಕೇಂದ್ರ ಗಳಿದ್ದು, ಎನ್‌ಐಟಿಕೆಯಲ್ಲಿ ನಾಲ್ಕನೇ ಕೇಂದ್ರ ಆರಂಭಗೊಳ್ಳುತ್ತಿದೆ ಎಂದರು.
ಭವಿಷ್ಯದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ತಂತ್ರಜ್ಞಾನ, ಸಂಶೋಧನೆಗೆ ಮುಂದಾಗುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇರಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತ.ನಾಡು, ಪುದುಚೇರಿ, ಲಕ್ಷದ್ವೀಪ ಗಳನ್ನು ಒಳಗೊಂಡು ಈ ಕೇಂದ್ರವು ಸಂಶೋಧನೆ, ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.
ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ| ಉಮಾಮಹೇಶ್ವರ ರಾವ್ ಮಾತನಾಡಿ, ಇಸ್ರೋದೊಂದಿಗಿನ ಈ ತಿಳಿವಳಿಕೆ ಒಪ್ಪಂದವು ಎನ್‌ಐಟಿಕೆಗೆ ಸ್ಫೂ ರ್ತಿದಾಯಕ ಹೆಜ್ಜೆಯಾಗಿದೆಎಂದರು.
ಇಸ್ರೋ ಮತ್ತು ಎನ್‌ಐಟಿಕೆಯ ಹಿರಿಯ ಅಧಿಕಾರಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.