ಬೆಂಗಳೂರು: ಮಾರ್ಚ್ 29ರಂದು ಉಡಾವಣೆಗೊಂಡಿದ್ದ ಇಸ್ರೋದ ಸಂವಹನ ಉಪಗ್ರಹ ಜಿಸ್ಯಾಟ್ 6ಎ ಶನಿವಾರ ನಿಯಂತ್ರಣಾ ಕೇಂದ್ರದ ಸಂಪರ್ಕ ಕಡಿದುಕೊಂಡಿದೆ. ಮತ್ತೆ ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿರುವುದಾಗಿ ಇಸ್ರೋ ತಿಳಿಸಿದೆ. ವಿದ್ಯುತ್ ವ್ಯವಸ್ಥೆಯಲ್ಲಿನ ವೈಫಲ್ಯವೇ ಸಂಪರ್ಕ ಕಡಿತಕ್ಕೆ ಕಾರಣ ಎನ್ನಲಾಗಿದೆಯಾದರೂ, ಇಸ್ರೋ ಇದನ್ನು ಖಚಿತಪಡಿಸಿಲ್ಲ.
ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಶುಕ್ರವಾರ ಕಕ್ಷೆಗೆ ಏರಿಸುವ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು. ಲಿಕ್ವಿಡ್ ಅಪೊಜೀ ಮೋಟರ್ ಇಂಜಿನ್ ಸರಿಯಾಗಿಯೇ ಕೆಲಸ ಮಾಡುತ್ತಿತ್ತು. ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಏರಿಸುವಿಕೆಯೂ ನಡೆದಿತ್ತು. ಎರಡನೇ ಬಾರಿ ಕಕ್ಷೆಗೆ ಏರಿಸುವ ಪ್ರಕ್ರಿಯೆ ಶನಿವಾರ ಮಾಡಲಾಗಿದ್ದು, ಬೆಳಗ್ಗೆ 10.51ಕ್ಕೆ ಈ ಪ್ರಕ್ರಿಯೆ ಮುಗಿದ ನಂತರ ನಾಲ್ಕು ನಿಮಿಷಗಳವರೆಗೆ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಸಂಕೇತಗಳು ಲಭಿಸುತ್ತಿದ್ದವು. ನಂತರ ಸಂಪರ್ಕ ಕಡಿತಗೊಂಡಿದೆ. ಎರಡನೇ ಬಾರಿ ಕಕ್ಷೆಗೆ ಏರಿಸುವ ಪ್ರಕ್ರಿಯೆಯನ್ನು ಸುಮಾರು 53 ನಿಮಿಷಗಳ ಕಾಲ ನಡೆಸಲಾಗಿತ್ತು.
ಆರಂಭಿಕ ವಿಶ್ಲೇಷಣೆಯ ಪ್ರಕಾರ, ಉಪಗ್ರಹದಲ್ಲಿ ವಿದ್ಯುತ್ ವ್ಯವಸ್ಥೆಯ ವೈಫಲ್ಯ ಕಂಡುಬಂದಿದೆ ಎಂದು ಹೇಳಲಾಗಿದೆಯಾದರೂ, ಇದನ್ನು ಇಸ್ರೋ ಖಚಿತಪಡಿಸಿಲ್ಲ. ಮೂರನೇ ಬಾರಿ ಕಕ್ಷೆಗೆ ಏರಿಸುವ ಪ್ರಕ್ರಿಯೆಯನ್ನು ಭಾನುವಾರ ನಡೆಸಲು ನಿರ್ಧರಿಸಲಾಗಿತ್ತು.
ಈ ಸಂಬಂಧ ಶನಿವಾರ ಇಸ್ರೋದ ಹಿರಿಯ ವಿಜ್ಞಾನಿಗಳ ಜತೆ ಮುಖ್ಯಸ್ಥ ಕೆ. ಶಿವನ್ ನಿರಂತರ ಸಭೆ ನಡೆಸಿದ್ದು, ಸಮಸ್ಯೆಯ ಮೂಲ ಹಾಗೂ ಪರಿಹಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಶಿವನ್ ಇಸ್ರೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿನ ಮೊದಲ ಉಡಾವಣೆ ಇದಾಗಿತ್ತು.
ಜಿಸ್ಯಾಟ್ ಅತ್ಯಂತ ಶಕ್ತಿಯುತ ಸಂವಹನ ಸ್ಯಾಟಲೈಟ್ ಆಗಿದೆ. ಸುಮಾರು 10 ವರ್ಷಗಳವರೆಗೆ ಇದರ ಜೀವಿತಾವಧಿ ಇತ್ತು. ವಿವಿಧ ಬ್ಯಾಂಡ್‌ಗಳಲ್ಲಿ ಸಂಕೇತಗಳನ್ನು ಪಸರಿಸುವ ಮೂಲಕ ಭಾರತದ ಎಲ್ಲ ಭಾಗಗಳಲ್ಲೂ ನಿಸ್ತಂತು ಸಂವಹನಕ್ಕೆ ಇದು ಪೂರಕವಾಗಿತ್ತು. “ಎಸ್’ ಬ್ಯಾಂಡ್ ಮತ್ತು “ಸಿ’ ಬ್ಯಾಂಡ್ ಅನ್ನು ಇದು ಬಳಸಿಕೊಳ್ಳಬೇಕಿತ್ತು. ಸ್ಯಾಟಲೈಟ್ ಆರು ಮೀಟರ್ ಅಗಲದ ಆ್ಯಂಟೆನಾ ಹೊಂದಿದ್ದು, “ಎಸ್’ ಬ್ಯಾಂಡ್ ಸಂವಹನ ಸ್ಯಾಟಲೈಟ್‌ಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಉದ್ದದ ಆ್ಯಂಟೆನಾ ಬಳಸಲಾಗಿತ್ತು. ಇದರಿಂದಾಗಿ ಭೂಮಿಯ ಮೇಲೆ ಸಣ್ಣ ಆ್ಯಂಟೆನಾ ಬಳಸಿ ನಿಸ್ತಂತು ಸಲಕರಣೆಗಳು ಸಂವಹನ ನಡೆಸಬಹುದಾಗಿದೆ. ಸೇನಾ ಪಡೆಗಳಿಗೂ ಈ ಸ್ಯಾಟಲೈಟ್ ಬಳಕೆಗೆ ಲಭ್ಯವಾಗಲಿತ್ತು.