Advertisement

Israel ಸರ್ಜಿಕಲ್‌ ಸ್ಟ್ರೈಕ್‌: ಇರಾನ್‌ ಗೌಪ್ಯ ನೆಲೆ ಧ್ವಂಸ!

02:14 AM Oct 28, 2024 | Team Udayavani |

ಜೆರುಸಲೇಂ: ಇರಾನ್‌ ಮೇಲೆ ಶನಿವಾರ ಇಸ್ರೇಲ್‌ ನಡೆಸಿದ ಸರ್ಜಿಕಲ್‌ ದಾಳಿಯಲ್ಲಿ ಇರಾನ್‌ನ 2 ರಹಸ್ಯ ಸೇನಾನೆಲೆಗಳಿಗೂ ಹಾನಿಯಾಗಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.
ವಿಶೇಷವೆಂದರೆ, ಈ ನೆಲೆಗಳನ್ನು ಈ ಹಿಂದೆ ಇರಾನ್‌ ತನ್ನ ಪರಮಾಣು ಅಸ್ತ್ರಗಳ ಯೋಜನೆಗೆ ಬಳಸುತ್ತಿತ್ತು ಹಾಗೂ ಈ ಪಾರ್ಚಿನ್‌ ಸೇನಾ ನೆಲೆಯಿಂದಲೇ ಇರಾನ್‌ ಹಲವು ಬಾರಿ ಅಣ್ವಸ್ತ್ರಗಳಿಗೆ ಸಂಬಂಧಿಸಿದ ದೊಡ್ಡ ಮಟ್ಟದ ಸ್ಫೋಟಕಗಳ ಪರೀಕ್ಷೆಯನ್ನೂ ನಡೆಸಿತ್ತು ಎಂದು ಹೇಳಲಾಗಿದೆ. ಇಲ್ಲಿರುವ ಅನೇಕ ಕಟ್ಟಡಗಳು ಇಸ್ರೇಲ್‌ ಸೇನೆಯ ವೈಮಾನಿಕ ದಾಳಿಯಿಂದ ಹಾನಿಗೀಡಾಗಿವೆ ಎಂದು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿ ದಿ ಅಸೋಸಿಯೇಟೆಡ್‌ ಪ್ರಸ್‌ ವರದಿ ಮಾಡಿದೆ.

Advertisement

ಇದಲ್ಲದೇ ಮತ್ತೂಂದು ರಹಸ್ಯ ಖೋಜಿರ್‌ ಸೇನಾನೆಲೆಗೂ ಹಾನಿ ಉಂಟಾಗಿದೆ. ಇಲ್ಲಿ ಭೂಗತ ಸುರಂಗ ವ್ಯವಸ್ಥೆಗಳಿದ್ದು, ಕ್ಷಿಪಣಿ ತಯಾರಿಕ ಘಟಕಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿ ಫ್ಯಾಕ್ಟರಿ ಧ್ವಂಸ?

ಇರಾನ್‌ಗೆ ಅಗತ್ಯವಿರುವ ಖಂಡಾಂತರ ಕ್ಷಿಪಣಿಗಳನ್ನು ತಯಾರು ಮಾಡುವ ಒಂದು ಕಾರ್ಖಾನೆ ಈ ದಾಳಿಯ ಸಮಯದಲ್ಲಿ ಸಂಪೂ ರ್ಣವಾಗಿ ನಾಶವಾಗಿದೆ ಎಂದು ಇಸ್ರೇಲ್‌ ಸೇನೆಯ ಮೂಲಗಳು ಹೇಳಿವೆ. ಇದು ಅಣ್ವಸ್ತ್ರ ಸೇರಿದಂತೆ ಇತರ ಕ್ಷಿಪಣಿಗಳನ್ನು ತಯಾರು ಮಾಡುತ್ತಿದ್ದ ಘಟಕವಾಗಿದ್ದು, ಇರಾನ್‌ನ ಕ್ಷಿಪಣಿ ತಯಾರಿಕ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಎಂದು ಅಂದಾಜಿಸಲಾಗಿದೆ. ಈ ದಾಳಿಯ ಬಳಿಕ ಇರಾನ್‌ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ತಯಾರು ಮಾಡಲು ಕಷ್ಟಪಡಬೇಕಾಗುತ್ತದೆ ಎಂದು ಇಸ್ರೇಲ್‌ ಹೇಳಿದೆ.

ಇಸ್ರೇಲ್‌ ನಡೆಸಿದ ದುಷ್ಕೃತ್ಯವನ್ನು ನಿರ್ಲಕ್ಷಿಸಲೂ ಸಾಧ್ಯವಿಲ್ಲ, ಅದನ್ನು ವೈಭವೀಕರಿಸಲೂ ಸಾಧ್ಯವಿಲ್ಲ. ಇರಾನ್‌ನ ಶಕ್ತಿಯನ್ನು ಸದ್ಯದಲ್ಲೇ ತೋರಿಸಲಿದ್ದೇವೆ.
ಆಯತೊಲ್ಲಾ ಅಲಿ ಖಮೇನಿ, ಇರಾನ್‌ ಪರಮೋಚ್ಚ ನಾಯಕ

Advertisement

ಸರ್ಜಿಕಲ್‌ಸ್ಟ್ರೈಕ್‌ಗೆ ಇಸ್ರೇಲ್‌ ಮಹಿಳಾ ಪೈಲಟ್‌ಗಳ ಬಳಕೆ!
ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯ ಫೋಟೋ, ವೀಡಿಯೋಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ. ಈ ಯುದ್ಧವಿಮಾನಗಳನ್ನು ಹಾರಿಸಿರುವ ಪೈಲಟ್‌ಗಳಲ್ಲಿ 4 ಮಹಿಳೆಯರೂ ಇದ್ದಾರೆ ಎಂದು ಇವುಗಳಿಂದ ತಿಳಿದುಬಂದಿದೆ. ಇದೇ ವೇಳೆ ಇಸ್ರೇಲ್‌ ನಡೆಸಿದ ದಾಳಿಯು ಇರಾನ್‌ಗೆ ತೀವ್ರ ಹಾನಿ ಉಂಟುಮಾಡಿದೆ. ಈ ಕಾರ್ಯಾಚರಣೆಯು ನಮ್ಮ ಎಲ್ಲ ಉದ್ದೇಶಗಳನ್ನೂ ಪೂರೈಸಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.

ಇರಾನ್‌ ಪರಮೋಚ್ಚ ನಾಯಕ ಖಮೇನಿಗೆ ಗಂಭೀರ ಅನಾರೋಗ್ಯ?


ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ತೀವ್ರ ಅನಾರೋಗ್ಯಪೀಡಿತರಾಗಿದ್ದು ಅವರ ಪುತ್ರ ಮುಂದಿನ ಉತ್ತರಾಧಿಕಾರಿ ಆಗಬಹುದು ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಖಮೇನಿ 1989­ರಿಂದ ಇರಾನ್‌ನ ಸರ್ವೋಚ್ಚ ನಾಯಕ­­­­ರಾಗಿದ್ದಾರೆ. ಈಗ ಖಮೇನಿ ಪುತ್ರ, 55 ವರ್ಷದ ಮೊಜಾ¤ಬಾ ಖಮೇನಿ ಮುಂದಿನ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ. ಇಬ್ರಾಹಿಂ ರೈಸಿ ಈ ಹುದ್ದೆಗೆ ಏರುವ ಸಂಭಾವ್ಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಅವರು ಅಪಘಾತದಲ್ಲಿ ಮೃತರಾಗಿದ್ದು, ಖಮೇನಿ ಪಟ್ಟಕ್ಕೆ ಇರಾನ್‌ನಲ್ಲಿ ದಂಗೆ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next