ಜೆರುಸಲೇಂ: ಇಸ್ರೇಲ್, ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ಅಲ್ ಶಿಫಾ ಆಸ್ಪತ್ರೆಯನ್ನು ವಶಕ್ಕೆ ಪಡೆದಿರುವ ಇಸ್ರೇಲ್ ಸೇನೆ ಶೋಧ ಕಾರ್ಯ ನಡೆಸಿದ್ದು, ಈ ಸಂದರ್ಭದಲ್ಲಿ ಹಮಾಸ್ ಅಡಗಿಸಿ ಇಟ್ಟಿರುವ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ನರಿಗೆ ಅರಣ್ಯ ಅಧಿಕಾರಿಗಳಿಂದ ಶುಶ್ರೂಷೆ
ಹಮಾಸ್ ಭಯೋತ್ಪಾದಕರು ಅಲ್ ಶಿಫಾ ಆಸ್ಪತ್ರೆಯಲ್ಲಿ ಅಡಗಿಸಿ ಇಟ್ಟಿರುವ ಶಸ್ತ್ರಾಸ್ತ್ರಗಳ ವಿಡಿಯೋ ಫೂಟೇಜ್ ಅನ್ನು ಇಸ್ರೇಲ್ ಸೇನೆ ಬಿಡುಗಡೆಗೊಳಿಸಿದೆ.
ಆಸ್ಪತ್ರೆಯ ಬೃಹತ್ ಆವರಣದೊಳಗಿರುವ ಕೋಣೆಯೊಳಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಗ್ರೆನೇಡ್ಸ್, ಸ್ಪೋಟಕ ಮತ್ತು ಫ್ಯಾಕ್ ಜಾಕೆಟ್ಸ್ ಪತ್ತೆಯಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮತ್ತೊಂದೆಡೆ ಹಮಾಸ್ ನ ರಹಸ್ಯ ಸುರಂಗ ಮಾರ್ಗ ಪತ್ತೆಗಾಗಿ ಇಸ್ರೇಲ್ ಪಡೆ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಪಡೆ ಅಲ್ ಶಿಫಾ ಆಸ್ಪತ್ರೆಯೊಳಗೆ ಬುಲ್ಡೋಜರ್ಸ್ ನುಗ್ಗಿಸಿರುವುದಾಗಿ ಪ್ಯಾಲೇಸ್ತೇನ್ ಆರೋಗ್ಯ ಸಚಿವಾಲಯ ಆರೋಪಿಸಿದೆ. ಆಸ್ಪತ್ರೆಯಲ್ಲಿ 36 ನವಜಾತ ಶಿಶುಗಳು ಸೇರಿದಂತೆ 2,300 ರೋಗಿಗಳು, ಸಿಬಂದಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಶಿಫಾ ಆಸ್ಪತ್ರೆಯ ನೀರು ಸರಬರಾಜು, ವಿದ್ಯುತ್, ಆಕ್ಸಿಜನ್ ಸಂಪರ್ಕವನ್ನು ಇಸ್ರೇಲ್ ಪಡೆಗಳು ಕಡಿತಗೊಳಿಸಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ತಿಳಿರುವುದಾಗಿ ವರದಿಯಾಗಿದೆ.