Advertisement

Israel-Hamas war ಗಾಜಾದ ಮತ್ತೊಂದು ಆಸ್ಪತ್ರೆಗೆ ಇಸ್ರೇಲ್‌ ಲಗ್ಗೆ

12:58 AM Nov 21, 2023 | Team Udayavani |

ಖಾನ್‌ ಯೂನಿಸ್‌/ಟೆಲ್‌ ಅವೀವ್‌: ಉತ್ತರ ಗಾಜಾದ ಇಂಡೋನೇಷ್ಯಾ ಆಸ್ಪತ್ರೆ ಬಳಿ ಸೋಮವಾರ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವೆ ಕದನ ಸ್ಫೋಟಗೊಂಡಿದೆ. ಆಸ್ಪತ್ರೆಯ ಎರಡನೇ ಮಹಡಿಗೆ ಕ್ಷಿಪಣಿ ಅಪ್ಪಳಿ ಕನಿಷ್ಠ 12 ಮಂದಿ ಅಸುನೀಗಿದ್ದಾರೆ. ಈ ಘಟನೆಯ ಬಳಿಕ ಅಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಯುದ್ಧ ಆರಂಭವಾಗಿದೆ.

Advertisement

ಗಾಜಾ ಪಟ್ಟಿಯ ಅತ್ಯಂತ ದೊಡ್ಡ ಆಸ್ಪತ್ರೆ ಅಲ್‌-ಶಿಫಾ ಆಸ್ಪತ್ರೆಗೆ ಇಸ್ರೇಲ್‌ ಸೇನೆ ನುಗ್ಗಿದ ಬಳಿಕ ಹೊಸ ಬೆಳವಣಿಗೆ ನಡೆದಿದೆ. ಈ ಆತಂಕಕಾರಿ ಬೆಳವಣಿಗೆಯ ನಡುವೆ ಅಲ್‌-ಶಿಫಾ ಆಸ್ಪತ್ರೆಯಲ್ಲಿ ಇದ್ದ 31ರ ಪೈಕಿ 28 ನವಜಾತ ಶಿಶುಗಳನ್ನು ಈಜಿಪ್ಟ್ ಗೆ ಸುರಕ್ಷಿತವಾಗಿ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಪ್ಯಾಲೆಸ್ತೀನ್‌ ರೆಡ್‌ ಕ್ರಾಸ್‌ ಸಂಘಟನೆ ನೆರವು ನೀಡಿದೆ. ಇದಾದ ಬಳಿಕ ಉತ್ತರ ಗಾಜಾದ ಇಂಡೋನೇಷ್ಯಾ ಆಸ್ಪತ್ರೆಯಲ್ಲಿ ಕಾಳಗ ಸ್ಫೋಟಗೊಂಡಿದೆ.

ಸುರಂಗ ನಾಶ
ಉತ್ತರ ಗಾಜಾದ ಬೆಟ್‌ ಹೆನೌನ್‌ ಎಂಬಲ್ಲಿ ಹಮಾಸ್‌ ಹೊಂದಿರುವ ರಹಸ್ಯ ಸುರಂಗ ಜಾಲಗಳ ಪೈಕಿ ಒಂದನ್ನು ನಾಶ ಮಾಡಿರುವುದಾಗಿ ಇಸ್ರೇಲ್‌ ಘೋಷಿಸಿದೆ.

ಮೊದಲ ತಾತ್ಕಾಲಿಕ ಆಸ್ಪತ್ರೆ
ಅ. 7ರಂದು ಹಮಾಸ್‌ ಉಗ್ರರು ದಾಳಿ ನಡೆಸಿದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ಸೇನೆ ದಾಳಿ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಗಾಜಾದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಅದಕ್ಕೆ ಜೋರ್ಡಾನ್‌ ನೆರವು ನೀಡಿದೆ. ಹೆಚ್ಚಿನ ಪ್ರಮಾಣದಲ್ಲಿ ದಾಳಿಗೆ ಒಳಗಾಗಿರುವ ಖಾನ್‌ ಯೂನಿಸ್‌ ಎಂಬ ಸ್ಥಳದಲ್ಲಿ ಅದನ್ನು ಸ್ಥಾಪಿಸಲಾಗುತ್ತಿದೆ.

ಅಲ್‌-ಶಿಫಾ ಆಸ್ಪತ್ರೆಯಲ್ಲೇ ಒತ್ತೆಯಾಳುಗಳು
ಉಗ್ರ ಸಂಘಟನೆ ಹಮಾಸ್‌ ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್‌-ಶಿಫಾದ ಅಡಿಯಲ್ಲಿಯೇ 240ಕ್ಕೂ ಅಧಿಕ ವಿದೇಶಿ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿ ಕೊಂಡಿದೆ ಎಂಬ ಪ್ರಬಲ ಶಂಕೆ ವ್ಯಕ್ತವಾಗಿದೆ.

Advertisement

ಜತೆಗೆ 55 ಸುರಂಗಗಳನ್ನು ಉಗ್ರರು ನಿರ್ಮಿಸಿದ್ದಾರೆ ಎಂದೂ ಇಸ್ರೇಲ್‌ ಹೇಳಿಕೊಂಡಿದೆ. ಈ ಸಂಬಂಧ ವೀಡಿಯೋ ಗಳನ್ನು ಇಸ್ರೇಲ್‌ ಸೇನೆ ಬಿಡುಗಡೆ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿದ ಇಸ್ರೇಲ್‌ ಸೇನೆ, ಅಲ್‌-ಶಿಫಾ ಆಸ್ಪತ್ರೆಯಲ್ಲಿಯೇ ಒತ್ತೆಯಾಳುಗಳನ್ನು ಇರಿಸಲಾಗಿದೆ ಎಂಬ ಅಂಶ ಬಯಲಾಗಿದೆ. ಆಸ್ಪತ್ರೆಯನ್ನು ಉಗ್ರ ಸಂಘಟನೆ ತನ್ನ ಮೂಲ ಸೌಕರ್ಯ ವ್ಯವಸ್ಥೆ ಪಡೆದುಕೊಳ್ಳುವ ಸ್ಥಳವನ್ನಾಗಿ ಮಾರ್ಪಾಡು ಮಾಡಿಕೊಂಡಿದೆ ಎಂದಿದೆ. ಆದರೆ ಹಮಾಸ್‌ ಈ ಆರೋಪವನ್ನು ತಿರಸ್ಕರಿಸಿದೆ.

ಇಸ್ರೇಲ್‌ ಸಂಪರ್ಕದ ಹಡಗುಗಳೇ ಗುರಿ: ಹೌತಿ ಎಚ್ಚರಿಕೆ ಯೆಮೆನ್‌ನ ಹೌತಿ ಬಂಡುಕೋರರು ರವಿವಾರ ವಶಪಡಿಸಿಕೊಂಡಿರುವ, ಭಾರತದತ್ತ ಬರು ತ್ತಿದ್ದ ಸರಕು ಸಾಗಣೆ ಹಡಗಿನಲ್ಲಿ 25 ಮಂದಿ ಸಿಬಂದಿ ಇರುವುದು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಇಸ್ರೇಲ್‌ ಜತೆಗೆ ಮಿತ್ರತ್ವ ಹೊಂದಿರುವ ದೇಶಗಳ ಮತ್ತು ಇಸ್ರೇಲಿ ಮಾಲಕತ್ವ ಹೊಂದಿರುವ ಹಡುಗಳನ್ನೇ ಗುರಿ ಮಾಡಿ ದಾಳಿ ಮಾಡು ವುದಾಗಿ ಬಂಡುಕೋರರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next