Advertisement
ಎಲ್ಲೆಂದರಲ್ಲಿ ರಾಕೆಟ್‌ಗಳ ಹಾರಾಟಉಡುಪಿಯ ಪ್ರಮೀಳಾ, ರಾಜೇಶ್ ಆತಂಕದ ಮಾತು
ಉಡುಪಿ: ಸೋಮವಾರ ಪೂರ್ತಿ ರೆಡ್ ಅಲರ್ಟ್ ಘೋಷಿಸ ಲಾಗಿದೆ. ಆಗಸದಲ್ಲಿ ರಾಕೆಟ್‌ಗಳ ಹಾರಾಟ ಕಾಣಿಸುತ್ತಿದೆ. ನಾವು ಇರುವ ಪ್ರದೇಶದಿಂದ 1 ಕಿ.ಮೀ. ದೂರದಲ್ಲಿ ಉಗ್ರರು ಹಾರಿಸಿದ ರಾಕೆಟ್ ಬಿದ್ದಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನುತ್ತಾರೆ ಇಸ್ರೇಲ್‌ನ ರಾಜಧಾನಿ ಟೆಲ್‌ಅವೀವ್‌ನ ಆಸ್ಪತ್ರೆಯಲ್ಲಿ 6 ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿರುವ ಹೆರ್ಗದ ಪ್ರಮೀಳಾ ಪ್ರಭು.
ಇಸ್ರೇಲ್‌ನಲ್ಲಿ 10 ವರ್ಷಗಳಿಂದ ವಾಸವಾಗಿರುವ ಸರಳೇಬೆಟ್ಟು ನಿವಾಸಿ ರಾಜೇಶ್ ಸಾಲ್ಯಾನ್ ರವಿವಾರದಿಂದ ಸಂಪರ್ಕಕ್ಕೆ ಸಿಗದ ಕಾರಣ ಊರಿನಲ್ಲಿ ಆತಂಕ ನೆಲೆಸಿತ್ತು. ಆದರೆ ಸೋಮವಾರ ಅಪರಾಹ್ನ ಸಂಪರ್ಕಿಸಿದ್ದಾರೆ ಎಂದು ಸಹೋದರ ಗಣೇಶ್‌ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.ಕೇರ್‌ಟೇಕರ್ ಕೆಲಸ ಮಾಡಿಕೊಂಡಿ ರುವ ರಾಜೇಶ್ ಅವರು ಪತ್ನಿ, ಮಗು ವಿನೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಅವರು ಕ್ಷೇಮವಾಗಿದ್ದಾರೆ. ಪ್ರಸ್ತುತ ಅವರು ಇರುವ ಪ್ರದೇಶದಲ್ಲಿ ತೊಂದರೆ ಇಲ್ಲ ಎಂದಿದ್ದಾಗಿ ತಿಳಿಸಿದ್ದಾರೆ.
Related Articles
ಪಡುಬಿದ್ರಿ: ಉಡುಪಿಯ ಪಲಿಮಾರು ಗ್ರಾಮದ ಇಬ್ಬರು ಯುದ್ಧಪೀಡಿತ ಇಸ್ರೇಲ್‌ನಲ್ಲಿದ್ದು, ಸದ್ಯ “ಕ್ಷೇಮ’ವಾಗಿ ಇರುವುದಾಗಿ ಉದಯವಾಣಿಗೆ ತಿಳಿಸಿದ್ದಾರೆ.
Advertisement
ವಿಕ್ಟರ್ ಡಿ’ಸೋಜಾ ಅವರು ಟೆಲ್ ಅವೀವ್‌ನಲ್ಲಿ ಮತ್ತು ವೀಣಾ ಡಿ’ಸೋಜಾ ಅವರು ನತಾಲಿಯಾದಲ್ಲಿದ್ದಾರೆ. 1 ಸಾವಿರ ಉಗ್ರರು ದೇಶದ ಒಳಕ್ಕೆ ನುಸುಳಿದ್ದು ಜನತೆ ಬಲು ಎಚ್ಚರಿಕೆಯಿಂದ ಇರುವಂತೆ ಆಡಳಿತ ಮನವಿ ಮಾಡಿದೆ. ಶಾಲೆ, ಮಾಲ್ ಮುಂತಾದ ಜನನಿಬಿಡ ವ್ಯಾಪಾರ ವಹಿವಾಟು ಪ್ರದೇಶ ಗಳನ್ನು ಮುಚ್ಚಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ನರ್ಸಿಂಗ್ ಕಾಯಕದಲ್ಲಿರುವ ವಿಕ್ಟರ್ ಮಾತನಾಡಿ, ದೇಶದ ಮಿಲಿಟರಿ ಶಕ್ತಿಶಾಲಿಯಾಗಿದ್ದು, ಉಗ್ರರು ಇಂದುಗಾಜಾಪಟ್ಟಿಯಿಂದ ಉಡಾಯಿಸಿರುವ ಬಾಂಬ್‌ಗಳನ್ನು ನಭದಲ್ಲೇ ಹೊಡೆದುರುಳಿಸಲಾಗಿದೆ. ಹಾಗಾಗಿ ನಮಗೆ
ಯಾವುದೇ ತೊಂದರೆ ಆಗಿಲ್ಲ. ದಿನನಿತ್ಯದ ಎಲ್ಲ ಆಹಾರ ಸಾಮಗ್ರಿಗಳು, ನೀರು, ಹಾಲು, ಬಿಸ್ಕತ್‌ಗಳು ಎಂದಿದ್ದಾರೆ. ವೀಣಾ ಮಾತನಾಡಿ, ಈವರೆಗೆ ಯಾವುದೇ ತೊಂದರೆ ಯಾಗಿಲ್ಲ. ಆಹಾರ ವಸ್ತುಗಳು ಲಭ್ಯವಿವೆ. ಊರಿನಲ್ಲಿರುವ ಪತಿ ಡೊಮಿನಿಕ್ ಜತೆಗೆ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ. ಸಂಕಷ್ಟದಲ್ಲಿದ್ದರೆ ಮಾಹಿತಿ ನೀಡಿ: ಉಡುಪಿ ಡಿಸಿ
ಉಡುಪಿ: ಇಸ್ರೇಲ್‌ನಲ್ಲಿ ನಮ್ಮವರಿಗೆ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಇಲ್ಲ, ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದೆ ಎಂದು ಡಿಸಿ ಡಾ| ವಿದ್ಯಾಕುಮಾರಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಕೂಡ ಯಾವುದೇ ಸಮಸ್ಯೆಗಳು ಆದ ಬಗ್ಗೆ ಸ್ಥಳೀಯರಿಂದ ಹಾಗೂ ರಾಯಭಾರಿ ಕಚೇರಿಯಿಂದ ಮಾಹಿತಿ ಬಂದಿಲ್ಲ. ಸರಕಾರ ನಿರ್ದೇಶನದಂತೆ ಉಡುಪಿ ಜಿಲ್ಲಾ ಡಳಿತ ಕ್ರಮ ಕೈಗೊಳ್ಳುತ್ತದೆ. ಇಸ್ರೇಲ್‌ನಲ್ಲಿ ಉಡುಪಿ ಜನತೆ ಸಂಕಷ್ಟದಲ್ಲಿ ಇದ್ದರೆ ರಾಯಭಾರಿ ಕಚೇರಿ ಸಂಪರ್ಕ ಮಾಡಬಹುದು. ಕುಟುಂಬದವರಿಗೆ ಮಾಹಿತಿ ದೊರೆತರೆ ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿ ತಿಳಿಸಬಹುದು. ಇಸ್ರೇಲ್‌ನಲ್ಲಿ ಉಡುಪಿಯ ಎಷ್ಟು ಜನ ಇದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಕ್ಷಿಪಣಿ ಭಯವಿಲ್ಲ; ಉಗ್ರರು ಒಳನುಗ್ಗಿದ್ದೇ ಭೀತಿಗೆ ಕಾರಣ
ಮಂಗಳೂರು: ಇಸ್ರೇಲಿನಲ್ಲಿ ಕ್ಷಿಪಣಿ ದಾಳಿಯ ಬಗ್ಗೆ ಹೆಚ್ಚಿನ ಭಯವಿಲ್ಲ, ಆದರೆ ಈಗ ಹಮಾಸ್ ಉಗ್ರರು ದೇಶದೊಳಕ್ಕೆ ನುಗ್ಗಿರುವುದೇ ಭಯಕ್ಕೆ ಕಾರಣ. ಅದಕ್ಕಾಗಿಯೇ ನಾವ್ಯಾರೂ ಹೊರಗೆ ಹೆಚ್ಚು ತಿರುಗಾಡದಂತೆ ಸರಕಾರ ಎಚ್ಚರಿಕೆ ನೀಡುತ್ತಿದೆ. ಮುಂದೇನಾಗುವುದೋ ಭಗವಂತನೇ ಬಲ್ಲ… ಇದು ಇಸ್ರೇಲಿನ ಹರ್ಜಿಲಿಯಾದಲ್ಲಿ 14 ವರ್ಷಗಳಿಂದ ವೃದ್ಧರ ಕೇರ್‌ಟೇಕರ್ ಹಾಗೂ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿರುವ ಮೈಕೇಲ್ ಕ್ಸೇವಿಯರ್ ಒಲಿವೆರಾ ಅವರ ಹೇಳಿಕೆ. ಇಸ್ರೇಲಿನಲ್ಲಿರುವ ಸಹಸ್ರಾರು ಮಂದಿ ಕರಾವಳಿ ಮೂಲದವರು ಸದ್ಯ ನೇರ ಅಪಾಯಕ್ಕೆ ಸಿಲುಕಿಲ್ಲ, ಹಾಗೆಂದು ಎಷ್ಟರ ಮಟ್ಟಿಗೆ ಸುರಕ್ಷಿತರಾಗಿದ್ದಾರೆ ಎನ್ನುವುದೂ ಖಚಿತವಿಲ್ಲ. ಭಯೋತ್ಪಾದಕರು ಯಾವ ಕಡೆಯಿಂದ ಬಂದು ದಾಳಿ ನಡೆಸುತ್ತಾರೆ ಎನ್ನಲಾಗದು. ಹಾಗಾಗಿ ಸದ್ಯ ಶಾಪಿಂಗ್ ಸೆಂಟರ್‌ಗಳು, ಮನೋರಂಜನಾ ಕೇಂದ್ರಗಳು ಎಲ್ಲ ಮುಚ್ಚಿವೆ. ಕೇವಲ ಕೆಲವೇ ಸೂಪರ್‌ಸ್ಟೋರ್‌ಗಳಷ್ಟೇ ತೆರೆದಿವೆ. ಎಲ್ಲರೂ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಕುಂದಾಪುರ ಪಡುಕೋಣೆ ಮೂಲದ ಮೈಕೇಲ್. ಇನ್ನು ಬಂಟ್ವಾಳ ಮೊಡಂಕಾಪು ಮೂಲದ ಹೋಂನರ್ಸ್ ಆಗಿರುವ ಝೀನಾ ಡಿ’ಸೋಜಾ ಪ್ರಕಾರ ಸ್ಥಿತಿ ಸದ್ಯ ಆತಂಕದಲ್ಲೇ ಇದೆ. ಅ. 7ರಂದು ಬೆಳಗ್ಗೆ ಅವರು ಇರುವ ರನಾನಾ ನಗರದಲ್ಲಿ ಕ್ಷಿಪಣಿ ದಾಳಿ ಆಗಿತ್ತು. ಆಗ ನಾವು ಬಂಕರ್ ಸೇರಿಕೊಂಡೆವು. ಸಂಜೆ ಕೂಡಾ ಸೈರನ್ ಆಯ್ತು. ಆ ಬಳಿಕ ಸ್ಥಿತಿ ತುಸು ಸುಧಾರಿಸಿದೆ. ಆದರೂ ಮತ್ತೆ ಕ್ಷಿಪಣಿ ದಾಳಿಯಾಗುವ ಭೀತಿಯಲ್ಲಿ ಇದ್ದೇವೆ ಎನ್ನುತ್ತಾರೆ ಝೀನಾ. ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ಗಡಿಭಾಗದ 20-30 ಕಿ.ಮೀ. ಪ್ರದೇಶದಲ್ಲಿ ಬಾಂಬಿಂಗ್ ನಿರಂತರ ಆಗುತ್ತಿದೆ. ನಾವಿರುವ ಹರ್ಜಿಲಿಯಾ ಮಧ್ಯ ಭಾಗದಲ್ಲಿರುವುದರಿಂದ ಹೆಚ್ಚಿನ ಆತಂಕವಿಲ್ಲ, ಆದರೆ ಕಚೇರಿಗಳು ತೆರೆದಿಲ್ಲ, ಕೇವಲ ದಿನಸಿ ಅಂಗಡಿಗಳಷ್ಟೇ ತೆರೆದುಕೊಂಡಿವೆ. ಬಸ್ ಸಂಚಾರ ಕಡಿಮೆ ಇದೆ ಎಂದು ಮಂಗಳೂರು ಮೂಲದ ರಿಜಯ್ ಮೆಂಡೋನ್ಸ ತಿಳಿಸುತ್ತಾರೆ. ಎಲ್ಲ ಮನೆಗಳಲ್ಲೂ ಬಂಕರ್!
ಇಸ್ರೇಲಿನ ಎಲ್ಲ ಮನೆಗಳಲ್ಲೂ ಬಾಂಬ್ ಶೆಲ್ಟರ್ ಇದೆ. ಬಾಂಬ್ ಬೀಳುವಾಗ, ಕ್ಷಿಪಣಿ ದಾಳಿಯಾಗುವಾಗ ಮುಂಚಿತವಾಗಿ ಸೈರನ್ ಆಗುತ್ತದೆ. ಆಗ ಎಲ್ಲರೂ ಶೆಲ್ಟರ್ ಒಳಗೆ ಸೇರಿಕೊಳ್ಳುತ್ತಾರೆ. ಮನೆಗಳಲ್ಲಿ ಮಾತ್ರವಲ್ಲ, ಪಾರ್ಕ್, ಬಸ್‌ನಿಲ್ದಾಣ ಎಲ್ಲ ಸಾರ್ವಜನಿಕ ಜಾಗದಲ್ಲೂ ಇರುವ ಬಂಕರ್‌ಗಳನ್ನು ಈಗ ತೆರೆದಿರಿಸಲಾಗಿದೆ. ಆಕಸ್ಮಿಕ ದಾಳಿಯಾದರೆ ಅದಕ್ಕೆ ಸೇರಿಕೊಂಡರಾಯಿತು. ಮುಂದೇನು ಎಂಬ ಆತಂಕ
ಸದ್ಯ ಅ. 14ರ ವರೆಗೆ ಭಾರತ ಹಾಗೂ ಇಸ್ರೇಲ್ ಮಧ್ಯೆಯ ಏರ್ ಇಂಡಿಯಾ ವಿಮಾನಗಳು ರದ್ದಾಗಿರುವುದರಿಂದ ಯಾರಿಗೂ ಭಾರತಕ್ಕೆ ಬರಲಾಗುತ್ತಿಲ್ಲ. ಇದರ ನಡುವೆ ಭಾರತೀಯ ರಾಯಭಾರ ಕಚೇರಿಯವರು ಇಸ್ರೇಲ್‌ನಲ್ಲಿರುವ ಭಾರತೀಯರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಂದು ವೇಳೆ ಯುದ್ಧ ಸ್ಥಿತಿ ಎದುರಾದರೆ ತಾಯ್ನಾ ಡಿಗೆ ಮರಳಬೇಕಾಗಬಹುದು ಎನ್ನುವುದು ಬಹುತೇಕರ ಅನಿಸಿಕೆ. ಮಂಗಳೂರು ನಗರದ
113 ಮಂದಿ ಇಸ್ರೇಲ್‌ನಲ್ಲಿ
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳುವ ಪ್ರಕಾರ ಮಂಗಳೂರಿನ 113 ಮಂದಿ ಇಸ್ರೇಲ್‌ನಲ್ಲಿದ್ದಾರೆ. ಇನ್ನಷ್ಟು ಮಂದಿ ಇರಬಹುದು, ಆದರೆ ನಮ್ಮಲ್ಲಿ ಇನ್ನೂ ಮಾಹಿತಿ ಇಲ್ಲ, ಸಂಗ್ರಹಿಸಲಾಗುತ್ತಿದೆ ಎಂದರು. ಜಿಲ್ಲಾಡಳಿತದಲ್ಲಿ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲ. ಜಿಲ್ಲಾ ಎಸ್‌ಪಿಯವರೂ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ. ಬಾಂಬ್ ಸ್ಫೋಟಕ್ಕೆ ಕಟ್ಟಡಗಳು ನಡುಗುತ್ತಿವೆ
ಬಂಟ್ವಾಳ: ಕೆಲವು ದಿನಗಳಿಂದ ನಾವಿರುವ ಪ್ರದೇಶದ 10 ಕಿ.ಮೀ. ದೂರದಲ್ಲಿ ಬಾಂಬ್ ಸಿಡಿಯುವ ಶಬ್ದ ಕೇಳುತ್ತಿತ್ತು. ಆದರೆ ಸೋಮವಾರ 3-4 ಕಿ.ಮೀ. ವ್ಯಾಪ್ತಿಯಲ್ಲೇ ಬಾಂಬ್‌ಗಳು ಸಿಡಿಯುತ್ತಿವೆ. ನಾವಿರುವ ಕಟ್ಟಡಗಳು ನಡುಗುತ್ತಿವೆ. ಭಯವಾದರೂ ಸದ್ಯ ಸುರಕ್ಷಿತವಾಗಿದ್ದೇವೆ ಎಂದು ಇಸ್ರೇಲ್‌ನಲ್ಲಿರುವ ಬಂಟ್ವಾಳ ಮೂಲದ ವಿಜೇತ್ ಹೆಗ್ಡೆ ಹಾಗೂ ಬೆಳ್ತಂಗಡಿ ಮೂಲಕ ಶರತ್ ಯುದ್ಧ ಸ್ಥಿತಿಯ ಅನುಭವಗಳನ್ನು “ಉದಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶರತ್ 7 ವರ್ಷಗಳಿಂದ ಹಝಿಲಿಯಾದಲ್ಲಿ ನರ್ಸಿಂಗ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದು ಅವರ ಜತೆಗೆ ಅವರ ಅಕ್ಕ, ತಮ್ಮ, ಚಿಕ್ಕಪ್ಪನ ಮಗ, ಬಂಟ್ವಾಳ ತಾಲೂಕು ನೈನಾಡಿನ ವಿಜೇತ್ ಹೆಗ್ಡೆ ಸೇರಿದಂತೆ ಮೂವರು ಸ್ನೇಹಿತರು ಹೀಗೆ ಒಟ್ಟು 7 ಮಂದಿ ಇದ್ದಾರೆ. ಸೋಮವಾರ ಹತ್ತಿರದಲ್ಲೇ ಬಾಂಬ್ ಸ್ಫೋಟ ಆಗಿರುವುದರಿಂದ ಆತಂಕ ಹೆಚ್ಚಾಗಿದೆ. ಯುದ್ಧದ ಕುರಿತು ಇಸ್ರೇಲಿನ ಪ್ರಜೆಗಳಲ್ಲಿ ವಿಚಾರಿಸಿದರೆ ಇದೆಲ್ಲಾ ನೋಡಿ ನೋಡಿ ಸಾಕಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ನಿರ್ಬಂಧವಿಲ್ಲ
ನಾವಿರುವಲ್ಲಿ ಸದ್ಯ ಯಾವುದೇ ಆತಂಕದ ಸ್ಥಿತಿ ಇಲ್ಲ. ಹೊರಗೆ ಹೋಗುವುದಕ್ಕೂ ನಿರ್ಬಂಧ ಹೇರಿಲ್ಲ. ಸಾಮಾಜಿಕ ಜಾಲತಾಣಗಳು ಕೂಡ ಸಕ್ರಿಯ ವಾಗಿವೆ. ಯಾವ ಸಂದರ್ಭದಲ್ಲೂ ಯುದ್ಧ ಘೋಷಣೆ ಯಾಗಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಎಂದು ಅಳದಂಗಡಿಯ ಶರತ್ ತಿಳಿಸಿದ್ದಾರೆ. ಬಾಂಬ್ ಸೇಫ್ಟಿ ಶೆಲ್ಟರ್
ಇಸ್ರೇಲ್‌ನ ಪ್ರತೀ ಕಟ್ಟಡದಲ್ಲೂ ಬಾಂಬ್ ಸೇಫ್ಟಿ ಶೆಲ್ಟರ್‌ಗಳನ್ನು ನಿರ್ಮಿಸಲಾಗಿರುತ್ತದೆ. ಬಾಂಬ್ ಸ್ಫೋಟಿಸಿದಾಗ ಅದರೊಳಗೆ ಕೂತರೆ ಕಟ್ಟಡ ಧ್ವಂಸ ವಾದರೂ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ವಿಜೇತ್ ಹೆಗ್ಡೆ ನೈನಾಡು ಹೇಳುತ್ತಾರೆ. ಇಸ್ರೇಲ್‌ನಲ್ಲಿ ಶಾಂತಿ ನೆಲೆಸಲಿ: ಬಿಷಪ್
ಮಂಗಳೂರು: ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ದಾಳಿ ನಡೆಯುತ್ತಿದ್ದು, ಕರಾವಳಿಯವರು ಸುರಕ್ಷಿತರಾಗಿದ್ದಾರೆ. ಈ ಕುರಿತಂತೆ ಜೆರುಸಲೇಂ ನಲ್ಲಿರುವ ಧರ್ಮಗುರುಗಳ ಜತೆ ಸಂಪರ್ಕದಲ್ಲಿದ್ದೇನೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಮರ ಶೋಕದ ಸುದ್ದಿ. ಕರಾವಳಿಯ ಅನೇಕ ಮಂದಿ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ನಾಗರಿಕರನ್ನು ಬಲಿಪಡೆದುಕೊಂಡಿರುವ ಈ ಆಕ್ರಮಣ ಸಹಿಸಲು ಸಾಧ್ಯವಿಲ್ಲ. ದ್ವೇಷದಿಂದ ಶಾಂತಿ ಸ್ಥಾಪಿಸಲು ಆಗುವುದಿಲ್ಲ. ಪ್ರತೀಕಾರದ ಭಾವನೆ, ಹಿಂಸೆಯ ಪ್ರವೃತ್ತಿ ಬದಲಾಗಬೇಕು. ಹಲವು ದಶಕಗಳಿಂದ ಇರುವ ಈ ಸಮರ ಅಂತ್ಯವಾಗಬೇಕು. ಇದಕ್ಕೆ ವಿಶ್ವದ ಪ್ರಮುಖರು ಸಹಕಾರ ನೀಡಬೇಕು ಎಂದರು. ನಾನು ತಿಂಗಳ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲೇ ಜನರಲ್ಲಿ ಭೀತಿ ಇತ್ತು. ನಿರ್ಭೀತಿಯಿಂದ ಹೊರಗಡೆ ತೆರಳುವ ಪರಿಸ್ಥಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಬೈಂದೂರಿನ 20 ಯುವಕರು
ವೀಡಿಯೋ ಕರೆ ಮಾಡಿ ಧೈರ್ಯ ತುಂಬಿದ ಗಂಟಿಹೊಳೆ
ಬೈಂದೂರು/ಕುಂದಾಪುರ:ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಬೈಂದೂರು ಭಾಗದ ಸುಮಾರು 20 ಯುವಕರಿದ್ದಾರೆ. ಸದ್ಯಕ್ಕೆ ಅವರು ಇರುವ ಜಾಗ ಸುರಕ್ಷಿತವಾಗಿದ್ದರೂ ಭಯದಿಂದಲೇ ದಿನ ಕಳೆಯುತ್ತಿದ್ದಾರೆ. ಉದಯವಾಣಿ ಜತೆಗೆ ಮಾತನಾಡಿ, ಆರೇಳು ವರ್ಷಗ ಳಿಂದ ಈ ದೇಶದಲ್ಲಿದ್ದು, ಪ್ರಸ್ತುತ ಹರ್ಜೆಲಿಯಾ ಎಂಬಲ್ಲಿದ್ದೇವೆ. ಈ ವರೆಗೆ ಯಾವುದೇ ಆತಂಕ ಇರಲಿಲ್ಲ. ಹಠಾತ್ ಕದನ ನಮ್ಮನ್ನು ಭೀತರನ್ನಾಗಿಸಿದೆ. ನಮ್ಮ ಸುರಕ್ಷೆಗೆ ಇಲ್ಲಿನ ಸರಕಾರ ವಿಶೇಷ ಒತ್ತು ನೀಡಿದೆ. ಆದರೆ ನುಸುಳುಕೋರರ ಆತಂಕವಿದೆ. ಸೈರನ್ ಆದ ತತ್‌ಕ್ಷಣ ಸುರಕ್ಷಿತ ಜಾಗಕ್ಕೆ ತೆರಳಬೇಕು. ಊರಿನಿಂದ ಗೆಳೆಯರು, ಮನೆಯವರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.
ಬೈಂದೂರಿನ ಸಂದೇಶ್ ಮಾತನಾಡಿ, ಇಲ್ಲಿರುವ ಬೈಂದೂರು ಮೂಲದವರು ವಾಟ್ಸ್‌ಆ$Âಪ್ ಗುಂಪಿನ ಮೂಲಕ ಸಂವಹನ ಮಾಡುತ್ತಿದ್ದೇವೆ. ಯುದ್ಧದಿಂದ ದೈನಂದಿನ ಚಟುವಟಿಕೆಗೆ ತುಂಬಾ ತೊಂದರೆಯಾಗಿದೆ. ಭಯದ ನಡುವೆ ಭಗವಂತನನ್ನು ಸ್ಮರಿಸುತ್ತ ಬದುಕ ಬೇಕಾಗಿದೆ ಎಂದರು. ಶಾಸಕರ ಸ್ಪಂದನೆ
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದೂರವಾಣಿ ಮೂಲಕ ಇಸ್ರೇಲ್‌ನಲ್ಲಿರುವ ಬೈಂದೂರಿಗರನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ ಮತ್ತು ಸರಕಾರದ ಮೂಲಕ ಅಗತ್ಯ ಇರುವ ಎಲ್ಲ ಸೇವೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಶಾಸಕರ ಸ್ಪಂದನೆ ನಮ್ಮಲ್ಲಿ ಬದುಕಿನ ಭರವಸೆ ಮೂಡಿಸಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಶಾಸಕರು, ಇಸ್ರೇಲ್‌ನಲ್ಲಿರುವ ಬೈಂದೂರು, ಕುಂದಾಪುರಿಗ ರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಕಿನ್ನಿಗೋಳಿ ಮೂಲದವರು ಸುರಕ್ಷಿತ
ಕಿನ್ನಿಗೋಳಿ: ಕಿನ್ನಿಗೋಳಿಯ 12 ಮಂದಿ ಇಸ್ರೇಲ್‌ನ ಟೆಲ್‌ಅವೀವ್‌ದಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಹೊರಗಡೆ ಹೋಗಲು ಅವಕಾಶ ವಿದ್ದು, ಅಪಾಯದ ಸಂದರ್ಭದಲ್ಲಿ ಸೈರನ್ ಮೊಳಗಿದಾಗ ಬಂಕರ್ ಸೇರಿ ಕೊಳ್ಳುತ್ತೇವೆ. ಊಟ ತಿಂಡಿಗೆ ಸಮಸ್ಯೆ ಆಗಿಲ್ಲ ಎಂದು ನವೀನ್ ಶೆಟ್ಟಿ ಕಿನ್ನಿಗೋಳಿ ಉದಯವಾಣಿಗೆ ತಿಳಿಸಿದ್ದಾರೆ.
ಪ್ರತೀ ವರ್ಷ ಗಣೇಶ ಹಬ್ಬವನ್ನು ಮೈದಾನದಲ್ಲಿ ಆಚರಿಸುತ್ತಿದ್ದು ಈ ಬಾರಿ ಆಚರಿಸಲು ಸಾಧ್ಯವಾಗಿಲ್ಲ. ನಮ್ಮ ಪರಿಸರದಲ್ಲಿ ಒಂದು ಸಾವಿರಕ್ಕೂ ಅಧಿಕ ಜನ ಕರ್ನಾಟಕದವರು ಇದ್ದು, ಪ್ರತೀ ಶನಿವಾರ ಸುಮಾರು 400 ಜನ ಸೇರಿ ಕ್ರಿಕೆಟ್ ಆಡುತ್ತಿದ್ದೆವು ಎಂದರು. ದಾಮಸ್‌ಕಟ್ಟೆಯ ಪ್ರವೀಣ್ ಪಿಂಟೋ ಮಾತನಾಡಿ, ನಮ್ಮ ಸಮೀಪದಲ್ಲೇ ಬಸ್‌ಗೆ ಬಾಂಬ್ ದಾಳಿಯಾಗಿದೆ. ಸದ್ಯ ಅಪಾಯವಿಲ್ಲ, ನಮ್ಮ ಜತೆ ಪಲಿಮಾರು, ತೊಕ್ಕೊಟ್ಟು, ಕೇರಳದವರಿದ್ದಾರೆ ಎಂದರು. ಕಿನ್ನಿಗೋಳಿ ತುಡಾಮ್‌ನ ಗಿಬ್ಬರ್ಟ್ ಡಿ’ಸೋಜಾ ಯುದ್ಧ ಸ್ಥಳದಿಂದ 50 ಕಿ.ಮೀ. ದೂರದಲ್ಲಿ ಇದ್ದು ಸದ್ಯ ಸುರಕ್ಷಿತ ವಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಕಿನ್ನಿಗೋಳಿಯ 12, ಶುಂಠಿಪಾಡಿಯ 2, ಬಪ್ಪನಾಡಿನ 7, ಕರ್ನಿರೆಯ 5, ಬಳುRಂಜೆ, ಕಾರ್ನಾಡ್, ಕಕ್ವದ ತಲಾ ಒಬ್ಬರು ಇಸ್ರೇಲ್‌ನಲ್ಲಿದ್ದಾರೆ. ಗಾಜಾ ಸಮೀಪದಲ್ಲಿ ಅನೇಕ ಮಂದಿ ಭಾರತೀಯರು ಇದ್ದಾರೆ. ಅಲ್ಲಿನ ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಿಲ್ಲ. ಸೈರನ್ ಆಗುತ್ತಿದ್ದಂತೆ ಭೂಮಿಯಡಿ ಇರುವ ಬಂಕರ್‌ಗಳಿಗೆ ಹಿರಿಯರನ್ನು ಕೆರೆದುಕೊಂಡು ಹೋಗಿ ಸೇರಿಕೊಳ್ಳುತ್ತೇವೆ. ಕೆಲವು ದಿನಗಳಿಗೆ ಬೇಕಾದ ನೀರು ಆಹಾರವನ್ನು ಸಂಗ್ರಹಿಸಿದ್ದೇವೆ. ಈಗಾಗಲೇ ಅನೇಕ ಮಂದಿ ಸಾವನ್ನಪ್ಪಿರುವ ಸುದ್ದಿ ತಿಳಿದು ದುಃಖವಾಗುತ್ತಿದೆ.
– ಸುನೀತಾ, ಕರಾವಳಿ ಮೂಲದ ಇಸ್ರೇಲ್ ಉದ್ಯೋಗಿ ಸದ್ಯ ನಾವು ಸುರಕ್ಷಿತರಾಗಿದ್ದೇವೆ. ಮುಂದೆ ಏನಾದೀತು ಎಂದು ಗೊತ್ತಿಲ್ಲ. ಯುದ್ಧದ ಪರಿಸ್ಥಿತಿ ಎದುರಾದಲ್ಲಿ ಭಾರತ ಸರಕಾರ ನಮ್ಮನ್ನು ದೇಶಕ್ಕೆ ಕರೆತರಲು ಸಹಾಯ ಮಾಡುವ ನಿರೀಕ್ಷೆಯಲ್ಲಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಉದ್ಯೋಗಕ್ಕಿಂತ ಸುರಕ್ಷಿತವಾಗಿ ಕುಟುಂಬ ಸೇರುವುದು ಮುಖ್ಯವಾಗಿದೆ.
– ಲವಿನಾ, ಇಸ್ರೇಲ್‌ನಲ್ಲಿರುವ ಮಂಗಳೂರು ಮಹಿಳೆ