Advertisement

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

11:00 AM Nov 29, 2022 | Team Udayavani |

ಪಣಜಿ/ಮುಂಬೈ: ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧದ ಕಥೆಯನ್ನೊಳಗೊಂಡ “ದ ಕಾಶ್ಮೀರ ಫೈಲ್ಸ್” ಅಸಭ್ಯ ಮತ್ತು ಪ್ರಚಾರದ ಉದ್ದೇಶ ಹೊಂದಿರುವ ಚಿತ್ರವಾಗಿದೆ ಎಂಬ ಇಫಿ ಆಯ್ಕೆಗಾರರ ಸಮಿತಿ ಅಧ್ಯಕ್ಷ ಇಸ್ರೇಲ್ ಮೂಲದ ನಿರ್ದೇಶಕ ನಡಾವ್ ಲ್ಯಾಪಿಡ್ ವಿವಾದತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡಾವ್ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಇಫಿ ಜ್ಯೂರಿ ಸದಸ್ಯ ಸುದಿಪ್ತೋ ಸೇನ್ ಟ್ವೀಟ್ ಮೂಲಕ ಕೆಲವೊಂದು ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ” ನಿರ್ದೇಶನದ “ದಿ ಕಾಶ್ಮೀರ ಫೈಲ್ಸ್ ಸಿನಿಮಾದ ಕುರಿತು ನಡಾವ್ ಲ್ಯಾಪಿಡ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇಫಿಯ ಜಡ್ಜ್ ಆಗಿರುವ ಅವರು ಯಾವುದೇ ರಾಜಕೀಯದ ಹೇಳಿಕೆ ನೀಡುವುದಿಲ್ಲ ಎಂದು ಸೇನ್ ತಿಳಿಸಿದ್ದಾರೆ.

ನಡಾವ್ ಲ್ಯಾಪಿಡ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಬಾಲಿವುಡ್ ನ ಅನುಪಮ್ ಖೇರ್ ಸೇರಿದಂತೆ ಹಲವು ನಟರು, ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಡಾವ್ ಹೇಳಿಕೆಗೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ತಿರುಗೇಟು:

Advertisement

ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ದೇಶದ ನಿರ್ದೇಶಕ ನಡಾವ್ ಲ್ಯಾಪಿಡ್ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾದ ಕುರಿತು ನೀಡಿರುವ ಹೇಳಿಕೆಗೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ತೀವ್ರ ವಾಗ್ದಾಳಿ ನಡೆಸುವ ಮೂಲಕ ಹೇಳಿಕೆಯನ್ನು ಖಂಡಿಸಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ನಡಾವ್ ನೀಡಿರುವ ಹೇಳಿಕೆಗೆ ನಾಚಿಕೆಪಡಬೇಕು. ಯಾಕೆಂದರೆ ಐತಿಹಾಸಿಕ ಘಟನೆಗಳನ್ನು ಆಳವಾಗಿ ಅಧ್ಯಯನ ನಡೆಸುವ ಮೊದಲು ಮಾತನಾಡುವುದು ಅಸೂಕ್ಷ್ಮತೆಯಾಗಿದೆ. ಅಲ್ಲದೇ ಇದೊಂದು ಭಾರತಕ್ಕಾದ ಬಾಹ್ಯ ನೋವಿನ ವಿಚಾರದ ಬಗ್ಗೆ ಲಘುವಾಗಿ ಮಾತನಾಡುವುದು ದುರಹಂಕಾರವಾಗುತ್ತದೆ ಎಂದು ಗಿಲೋನ್ ಕಿಡಿಕಾರಿರುವುದಾಗಿ ವರದಿಯಾಗಿದೆ.

ನಾನು ನಡಾವ್ ಹೇಳಿಕೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರ ಪಂಡಿತರ ಸಮಸ್ಯೆಯ ಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಗಿಲೋನ್ ತಿಳಿಸಿದ್ದಾರೆ.

ಇಫಿ ಚಲನಚಿತ್ರೋತ್ಸವದ ಆಯ್ಕೆಗಾರರ ಸಮಿತಿಯ ಅಧ್ಯಕ್ಷರಾಗಿ ಭಾರತದ ಆಹ್ವಾನವನ್ನು, ನಂಬಿಕೆ ಮತ್ತು ಆತ್ಮೀಯ ಆತಿಥ್ಯವನ್ನು ನಡಾವ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರಾಯಭಾರಿ ಗಿಲೋನ್ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ಎಂದರೆ ದೇವರಿದ್ದಂತೆ. ಆದರೆ ನೀವು ಗೋವಾದಲ್ಲಿ ಇಫಿಯ ಆಯ್ಕೆಗಾರರ ಸಮಿತಿಯ ಅಧ್ಯಕ್ಷರಾಗಿ ಭಾರತ ನಿಮ್ಮನ್ನು ಆಹ್ವಾನಿಸಿದ್ದಕ್ಕೆ ಕೆಟ್ಟ ರೀತಿಯಲ್ಲಿ ಹೇಳಿಕೆ ನೀಡಿ, ಭಾರತದ ನಂಬಿಕೆ, ಗೌರವ ಮತ್ತು ಆತಿಥ್ಯಕ್ಕೆ ಅವಮಾನ ಮಾಡಿದ್ದೀರಿ ಎಂದು ಗಿಲೋನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next