ನವದೆಹಲಿ: ಇಂದು ಸ್ನೇಹಿತರ ದಿನ. ನಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಒದಗುವವರಿದ್ದರೆ ಅದು ಸ್ನೇಹಿತರು ಮಾತ್ರ ಎಂಬ ಮಾತು ಆಗಾಗ ಸಾಬೀತಾಗುತ್ತಿರುತ್ತದೆ. ಇನ್ನು ಗೆಳೆಯ, ಗೆಳತಿಯರು ಪರಸ್ಪರ ಶುಭಾಶಯಗಳನ್ನು ಮತ್ತು ಉಡುಗೊರೆಗಳನ್ನು ಹಂಚಿಕೊಳ್ಳುವುದು ಫ್ರೆಂಡ್ ಶಿಪ್ ದಿನದಂದು ನಡೆಯತ್ತಿರುತ್ತದೆ. ಆದರೆ ಎರಡು ರಾಷ್ಟ್ರಗಳ ನಾಯಕರು ಗೆಳೆಯರ ದಿನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿರುವುದು ಇದೀಗ ವಿಶೇಷ ಸುದ್ದಿಯಾಗಿ ದಾಖಲಾಗಿದೆ.
ಭಾರತಕ್ಕೆ ಇಸ್ರೇಲ್ ಉತ್ತಮ ಸ್ನೇಹಿತ ರಾಷ್ಟ್ರವಾಗಿರುವುದು ಗೊತ್ತೇ ಇದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿದ ಬಳಿಕವಂತೂ ಭಾರತ ಮತ್ತು ಇಸ್ರೇಲ್ ನಡುವಿನ ಗೆಳೆತನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತೂ ಸಮಾರಂಭಗಳಲ್ಲಿ ಮಾತನಾಡುವಾಗಲೆಲ್ಲ, ಪ್ರಧಾನಿ ಮೋದಿ ಅವರನ್ನು ‘ಮೈ ಫ್ರೆಂಡ್’ ಎಂದೇ ಸಂಬೋಧಿಸುತ್ತಾರೆ. ಇದಕ್ಕೆ ಪೂರಕವೆಂಬಂತೆ ಫ್ರೆಂಡ್ ಶಿಪ್ ಡೇ ದಿನವೂ ಇಸ್ರೇಲ್ ‘ಭಾರತಕ್ಕೆ ಹ್ಯಾಪಿ ಫ್ರೆಂಡ್ ಶಿಪ್ ಡೇ’ ಎಂದು ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದೆ.
ಭಾರತದಲ್ಲಿರುವ ಇಸ್ರೇಲಿ ರಾಯಭಾರ ಕಛೇರಿಯು ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ನರೇಂದ್ರ ಮೋದಿ ಅವರನ್ನು ನೇತನ್ಯಾಹು ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿರುವ ಫೊಟೋ ಒಂದನ್ನು ಹಾಕಿದೆ. ಮತ್ತು ಬಲಗೊಳ್ಳುತ್ತಿರುವ ನಮ್ಮ ಗೆಳೆತನ ಹಾಗೂ ಬೆಳೆಯುತ್ತಿರುವ ಭಾಗೀದಾರಿಕೆ ಹೊಸ ಮಜಲನ್ನು ಮುಟ್ಟುವಂತಾಗಲಿ ಎಂದು ಇಂಗ್ಲೀಷಿನಲ್ಲಿ ಬರೆದು ಬಳಿಕ ಕೆಳಗಡೆ ಹಿಂದಿ ಲಿಪಿಯಲ್ಲೇ ‘ಏ ದೋಸ್ತೀ ಹಮ್ ನಹೀ ಛೋಡೇಂಗೆ’ ಎಂದು ಶೋಲೇ ಸಿನೇಮಾದ ಜನಪ್ರಿಯ ಗೀತೆಯ ಪ್ರಾರಂಭದ ಸಾಲನ್ನು ಬರೆಯಲಾಗಿದೆ.
ಈ ಟ್ಟೀಟ್ ಗೆ ಇದೀಗ ಎಲ್ಲೆಡೆಯಿಂದ ಭಾರೀ ಪ್ರಶಂಸೆ ಮತ್ತು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.