Advertisement

ನಾಗರಿಕರೆಲ್ಲರಿಗೂ ತಲಪುವ ಕೇಜ್ರಿವಾಲ್‌ ಮಾದರಿ ಅನುಕರಣೀಯವಲ್ಲವೇ?

11:16 AM Feb 27, 2020 | mahesh |

ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನಾಯಕತ್ವದ ಆಮ್‌ ಆದ್ಮಿ ಪಾರ್ಟಿ ಭರ್ಜರಿ ಜಯ ದಾಖಲಿಸಿ ಮೂರನೇ ಬಾರಿಗೆ ಗದ್ದುಗೆ ಹಿಡಿದಿದೆ. ದಕ್ಷ ಆಡಳಿತ, ಸಾಫ್ಟ್ ಹಿಂದುತ್ವ, ದೂಷಣರಹಿತ ತಂತ್ರದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿದ ಜತೆಗೆ ಜನರ ದೈನಂದಿನ ಬದುಕಿನ ಅಗತ್ಯಗಳಾಗಿರುವ ವಿದ್ಯುತ್‌, ನೀರು, ಪ್ರಯಾಣ ಮತ್ತಿತರ ವಿಚಾರಗಳನ್ನು ನಿಯಂತ್ರಣಗಳಿಗೊಳಪಟ್ಟು ಒದಗಿಸಿ ಜನತೆಯ ಆಪ್ತ ಎಂದು ಪರಿಗಣಿಸಲ್ಪಟ್ಟ ಕಾರಣದಿಂದಲೇ ಸತತ ಎರಡನೇ ಬಾರಿಗೆ 70ರಲ್ಲಿ 60ಕ್ಕೂ ಮೇಲ್ಪಟ್ಟು (ಈ ಬಾರಿ 62) ಸೀಟುಗಳನ್ನು ದಕ್ಕಿಸಿಕೊಂಡಿರುವುದು ಅದ್ಭುತವಲ್ಲವೇ?

Advertisement

ಬೇರೆಲ್ಲ ಅಂಶಗಳನ್ನು ಹೊರತುಪಡಿಸಿ ಜನರ ದೈನಂದಿನ ಆವಶ್ಯಕತೆಗಳನ್ನು ಉಚಿತವಾಗಿ ಒದಗಿಸಿದ ಕಾರಣದಿಂದಲೇ ಅಮ್‌ ಆದ್ಮಿ ಪಾರ್ಟಿ ಅಂತಹ ಮಹತ್ತರ ಸಾಧನೆಗೈದಿದೆ ಎನ್ನುವವರೂ ಇದ್ದಾರೆ. ಈ ಮೂದಲಿಕೆಗೆ ಉತ್ತರವೆಂಬಂತೆ ತಮ್ಮ ಮೂರನೇ ಸರಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಕೇಜ್ರಿವಾಲ್‌ ಜಗತ್ತಿನ ಎಲ್ಲ ಅಮೂಲ್ಯ ವಸ್ತುಗಳನ್ನು ನಿಸರ್ಗವೇ ಉಚಿತವಾಗಿ ನೀಡಿರುವಾಗ ತಾನು ಅದಕ್ಕೆ ಶುಲ್ಕ ವಿಧಿಸಿದರೆ ಅದೊಂದು ನಾಚಿಕೆಗೇಡಿನ ಸಂಗತಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೇಜ್ರಿವಾಲ್‌ ಮಾತುಗಳನ್ನು ಸರಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಕೇಜ್ರಿವಾಲ್‌ಗಿಂತ ಹಿಂದೆ ಅನೇಕ ರಾಜ್ಯಗಳಲ್ಲಿ ಅನೇಕ ಸರಕಾರಗಳು ಉಚಿತ ಭಾಗ್ಯಗಳನ್ನು ನೀಡಿವೆ. ಆದರೆ ಮುಂದಿನ ಬಾರಿ ನಡೆದ ಚುನಾವಣೆಯಲ್ಲಿ ಅಧಿಕಾರ ಹಿಡಿದಿಟ್ಟುಕೊಳ್ಳಲು ಆ ಪಕ್ಷಗಳು ವಿಫ‌ಲವಾದ ದೃಷ್ಟಾಂತಗಳೇ ಹೆಚ್ಚಿನೆಡೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರಕಾರ ಅನ್ನಭಾಗ್ಯದಿಂದ ತೊಡಗಿ ಅನೇಕ ಭಾಗ್ಯಗಳನ್ನು ನೀಡಿದರೂ 2018ರ ಚುನಾವಣೆಯಲ್ಲಿ ಏಕಾಂಗಿಯಾಗಿ ಮಗದೊಮ್ಮೆ ಅಧಿಕಾರ ಹಿಡಿಯಲು ಬೇಕಾದ ಸೀಟುಗಳನ್ನು ಪಡೆಯಲಿಲ್ಲ.

ದಿಲ್ಲಿಗರಿಗೆ ಕೇಜ್ರಿವಾಲ್‌ ಕೊಡಮಾಡಿದ ವಿದ್ಯುತ್‌, ನೀರು, ಮಹಿಳೆಯರಿಗೆ ಉಚಿತ ಪ್ರಯಾಣ, ಮಕ್ಕಳಿಗೆ ಉಚಿತ ಗುಣಮಟ್ಟದ ವಿದ್ಯಾಭ್ಯಾಸ, ಮೊಹಲ್ಲಾ ಕ್ಲಿನಿಕ್‌ ಮತ್ತಿತರ ಸವಲತ್ತುಗಳು ಬೇರೆ ರಾಜ್ಯಗಳಲ್ಲಿ ಅಥವಾ ದಿಲ್ಲಿಯಲ್ಲೇ ಹಿಂದೆ ಜಾರಿಯಲ್ಲಿದ್ದ ಉಚಿತ/ರಿಯಾಯಿತಿ ಯೋಜನೆಗಳಿಗಿಂತ ಭಿನ್ನವಾಗಿ ನಿಲ್ಲುತ್ತವೆ. 2013ರ ಜುಲೈಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆ ಒಂದು ವರ್ಗದ ಜನರಿಗಾಗಿ ಅಂದರೆ ಬಿಪಿಎಲ್‌ ಕಾರ್ಡುದಾರರಿಗೆ ಜಾರಿಗೊಳಿಸಲಾಗಿತ್ತು. ಜನರಿಗೆ ಕನಿಷ್ಟ ದಿನಕ್ಕೆರಡು ಊಟಕ್ಕಾಗಿ ಕಷ್ಟವಾಗಬಾರದು ಎಂಬ ಉದಾತ್ತ ಧ್ಯೇಯದಡಿ ಅಕ್ಕಿ, ಖಾದ್ಯ ತೈಲ, ಉಪ್ಪು, ಸಕ್ಕರೆ ಮತ್ತಿತರ ಜೀವನಾಧಾರ ವಸ್ತುಗಳನ್ನು ಒದಗಿಸಿಕೊಡುವುದು ಈ ಯೋಜನೆಯ ಉದ್ದೇಶ. ಅಕ್ಕಿ ಮತ್ತಿತರ ಧಾನ್ಯಗಳನ್ನು ಪಡೆದವರು ಸುಮಾರು ಒಂದು ಕೋಟಿ ಜನ. ಅಂದರೆ ಜನಸಂಖ್ಯೆಯ ಸುಮಾರು ಶೇ. 15 ಜನ. ಇವ‌ರಲ್ಲಿಯೂ ಸರಕಾರದ ಅಕ್ಕಿಗಾಗಿಯೇ ಕಾಯುವಂತಹ ಪರಿಸ್ಥಿತಿ ಇದ್ದವರು ಬಹಳ ಕಡಿಮೆ ಜನ. ಸರಕಾರ ಪೂರೈಸಿದ ಅಕ್ಕಿ ರುಚಿಸದವರು ಕೆಲವರಾದರೆ, ಅಕ್ಕಿ ಪಡೆದು ಅದನ್ನು ಮಾರಾಟ ಮಾಡಿದವರೂ ಇದ್ದರು. ಹೀಗೆ ಮಾರಾಟದಿಂದ ಬಂದ ಹಣ ಶರಾಬು ಅಂಗಡಿ ಸೇರಿದ್ದು, ಆ ಶರಾಬಿನಿಂದ ಕುಟುಂಬದ ಶಾಂತಿ ನಾಶವಾದದ್ದೂ ಇಲ್ಲದಿಲ್ಲ. ಕರ್ನಾಟಕದಲ್ಲಿ 2006-07ರಲ್ಲಿ ಉಪಮುಖ್ಯ ಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರ ಕನಸಿನ ಕೂಸಾದ 8ರಿಂದ 10ನೇ ತರಗತಿಯ ಹುಡುಗಿಯರಿಗೆ ಸೈಕಲ್‌ ವಿತರಿಸುವ ಯೋಜನೆಯನ್ನು ಕೈಗೊಳ್ಳಲಾಯಿತು. ಬಳಿಕ ಇದನ್ನು ಹುಡುಗರಿಗೂ ವಿಸ್ತರಿಸಲಾಯಿತು. ಆದರೆ ವಿತರಿಸಿದ ಸೈಕಲ್‌ಗ‌ಳು ಕಳಪೆಯಾದ ಕಾರಣ ನಿರೀಕ್ಷಿತ ಫ‌ಲ ದೊರೆಯಲಿಲ್ಲ ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಈ ಯೋಜನೆ ಉತ್ತಮ ಹೆಸರು ಗಳಿಸಲು ವಿಫ‌ಲವಾಯಿತು.

ಇಲ್ಲಿ ಹೇಳಿರುವಂತಹವುಗಳು ಉಚಿತ ಯೋಜನೆಗಳ ಒಂದೆರಡು ಸ್ಯಾಂಪಲ್‌ ಮಾತ್ರ. ವಿವಿಧ ಕಾರಣಗಳಿಗಾಗಿ ಇಂತಹ ಸವಲತ್ತುಗಳು ಉತ್ತಮ ಫ‌ಲ ನೀಡಿಲ್ಲ, ನೀಡುವುದು ಸಾಧ್ಯವೂ ಇಲ್ಲ. ಕಾರಣ ಇವು ಜನರ ಒಂದು ವರ್ಗಕ್ಕೆ ಮಾತ್ರ ಸೀಮಿತ. ಸರಕಾರಿ ಅಧಿಕಾರಿಗಳು, ಪೂರೈಕೆದಾರರು, ಮಧ್ಯವರ್ತಿಗಳು ಇಂತಹ ಯೋಜನೆಗಳಿಂದ ಹಣ ಬಾಚಿಕೊಳ್ಳ ಬಹುದಾಗಿದೆ. ಇಂತಹ ಯೋಜನೆಗಳಿಂದ ಸರಕಾರಿ ಬೊಕ್ಕಸ ಬರಿದಾದರೂ ಯೋಜನೆಗಳ ಪೂರ್ಣ ಪ್ರಯೋಜನ ಅವು ನಿಜವಾಗಿ ದೊರೆಯಬೇಕಾದವರಿಗೆ ದೊರೆಯದೆ ಇರುವಂತಹ ಸನ್ನಿವೇಶಗಳೇ ಅಧಿಕ. ಆರೋಗ್ಯ ಸಂಬಂಧಿ ಕೆಲವು ಯೋಜನೆಗಳ ಫ‌ಲ ನಿಜವಾಗಿ ದೊರೆಯಬೇಕಾದವರಿಗೆ ದೊರೆತಿರುವ ಹೊರತು ಉಳಿದ ಹೆಚ್ಚಿನ ಯೊಜನೆಗಳ ಫ‌ಲ ಅನೇಕ ಕಾರಣಗಳಿಂದ ನಿರೀಕ್ಷಿಸಿದ ರೂಪದಲ್ಲಿ ಸಿಗುವುದು ಕಷ್ಟಸಾಧ್ಯವೆಂದೇ ಹೇಳಬಹುದು.

Advertisement

ಇನ್ನೊಂದು ವಿಧದಲ್ಲಿಯೂ ಆಲೋಚಿಸಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳ ಬಳಿಕ ಹಲವಾರು ಪಂಚವಾರ್ಷಿಕ ಯೋಜನೆಗಳು, ಹಸಿರು, ಬಿಳಿ, ನೀಲಿ ಮತ್ತಿತರ ಕ್ರಾಂತಿಗಳ ಬಳಿಕವೂ ದೇಶದ ಜನರಲ್ಲಿ ಕೆಲವರಾದರೂ ಊಟಕ್ಕೂ ಗತಿ ಇಲ್ಲದೆ ಇರುವುದು ಬಹಳಷ್ಟು ಶೋಚನೀಯ ವಿಚಾರ. ಇದನ್ನು ಕಾಣುವಾಗ ಆಡಳಿತ ನಡೆಸಿದ ಸರಕಾರಗಳು ಎಲ್ಲ ಜನರ ಉನ್ನತಿಯನ್ನು ಸಾಧಿಸಲು ಸಫ‌ಲವಾಗಿಲ್ಲ ಎಂದೇ ಹೇಳಬಹುದು. ಸ್ವಾತಂತ್ರ್ಯದ ಹೊತ್ತು ಶೇ. 12 ಇದ್ದ ಸಾಕ್ಷರತೆ ಪ್ರಸ್ತುತ ಶೇ. 70ಕ್ಕೆ ಏರಿದ್ದರೂ ಜನರಿಗೆ ಉದ್ಯೋಗ ಒದಗಿಸಿಕೊಡಲು ನಮ್ಮನ್ನಾಳುವವರಿಗೆ ಸಾಧ್ಯವಾಗದಿರುವುದು ಏನನ್ನು ತೋರಿಸುತ್ತದೆ?

ಈಗಲೂ ಚುನಾವಣೆ ಕಾಲದಲ್ಲಿ ರಾಜಕಾರಣಿಗಳ ಬಾಯಿಂದ ತಾವು ಮಾಡಿದ ಮತ್ತು ಮಾಡಲಿರುವ ಅಭಿವೃದ್ಧಿಯ ಮಾತುಗಳ ಬದಲಾಗಿ ಒಬ್ಬರನ್ನೊಬ್ಬರು ದೂರುವ, ಚಾರಿತ್ರ್ಯ ಹನನದ, ಕೆಸರೆರಚುವ ಇಂತಹ ಹತ್ತು ಹಲವು ಸಂಗತಿಗಳೇ ಹೊರಬರುತ್ತವೆ. ರಾಜಕಾರಣದಲ್ಲಿ ಅಪರಾಧಿಕರಣ ಹೆಚ್ಚಾಗಿರುವುದನ್ನು ಸುಪ್ರೀಂ ಕೋರ್ಟ್‌ ಕಟು ಶಬ್ದಗಳಲ್ಲಿ ಖಂಡಿಸಿ ಇದರ ನಿವಾರಣೆಗಾಗಿ ಕ್ರಮಗಳನ್ನು ಸೂಚಿಸಬೇಕಾದರೆ ನಮ್ಮನ್ನಾಳುವವರಿಗೆ ಜನರ ಏಳಿಗೆ ಬಗ್ಗೆ ಇರುವ ಕಾಳಜಿ ಎಷ್ಟು ಎಂದು ಅರ್ಥವಾದೀತು.

ಈ ನಿಟ್ಟಿನಲ್ಲಿ ನೋಡುವಾಗ ಕೇಜ್ರಿವಾಲ್‌ ಕೈಗೊಂಡ ಜನಪರ ಯೋಜನೆಗಳು ನಿಜಕ್ಕೂ ಶ್ಲಾಘನೀಯ. ಅವರ ಯೋಜನೆಗಳ/ಸಬ್ಸಿಡಿಗಳ ಫ‌ಲಾನುಭವಿಗಳು ಕೇವಲ ಬಡತನದ ರೇಖೆ ಕೆಳಗಿನವರಲ್ಲ. ಬದಲಾಗಿ ಸರಿಸುಮಾರು ಎಲ್ಲ ನಾಗರಿಕರು. ಬಡತನದ ರೇಖೆಗಿಂತ ಕೆಳಗಿನವರಾಗಲಿ ಅಥವಾ ಮೇಲಿನವರಾಗಲಿ ಎಲ್ಲರೂ ದೇಶದ ಪ್ರಜೆಗಳು, ಎಲ್ಲರೂ ಸಮಾನರು. ಬಿಪಿಎಲ್‌ ಜನರು ಅವಕಾಶ ವಂಚಿತರಾಗಿ ರಬಹುದು. ಇಂತಹವರಿಗೆ ದುಡಿಮೆಯ ಅವಕಾಶಗಳನ್ನು ಒದಗಿಸಿಕೊಡಬೇಕಾದುದು ಸರಕಾರಗಳ ಕರ್ತವ್ಯ. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿ, ಶ್ರಮವಹಿಸಿ ದುಡಿದ ಫ‌ಲವಾಗಿ ಬಡತನ ರೇಖೆಗಿಂತ ಮೇಲಿನವರು ಉತ್ತಮ ಜೀವನ ನಡೆಸುತ್ತಿರಬಹುದಾಗಿದೆ. ಬಿಪಿಎಲ್‌ ಅಥವಾ ಎಪಿಎಲ್‌ ಆಗಿರಲಿ ಎಲ್ಲರೂ ಸರಕಾರಿ ಖಜಾನೆಗೆ ಒಂದಿಲ್ಲೊಂದು ರೂಪದಲ್ಲಿ ತಮ್ಮ ಪಾಲನ್ನು ನೀಡುತ್ತಾರೆ. ಪ್ರತ್ಯಕ್ಷ ತೆರಿಗೆ ಪಾವತಿಸಲು ಬಾಧ್ಯತೆ ಇರುವವರು ಅದನ್ನು ಪಾವತಿಸುತ್ತಾರೆ ಜತೆಗೆ ಎಲ್ಲರೂ ಪ್ರತಿಯೊಂದು ಉಪಕರಣ, ವಾಹನಗಳೇ ಏಕೆ ಆಹಾರ ಪದಾರ್ಥಗಳು ಮತ್ತಿತರ ಹೆಚ್ಚಿನ ವಸ್ತುಗಳಿಗೆ ಪರೋಕ್ಷ ತೆರಿಗೆ ಪಾವತಿ ಮಾಡುವವರೇ ಆಗಿರುತ್ತಾರೆ. ಹಾಗಿರುವಾಗ ಸರಕಾರ ಕೇವಲ ತೆರಿಗೆ ಇತ್ಯಾದಿಗಳ ಮೂಲಕ ಹಣ ಸ್ವೀಕರಿಸಲು ಮಾತ್ರವಲ್ಲ, ಜನರಿಗೆ ಸವಲತ್ತುಗಳನ್ನು, ಸಬ್ಸಿಡಿಗಳನ್ನು ನೀಡುವಾಗ ಎಲ್ಲರಿಗೂ ನೀಡುವಂತಾಗ‌ಬೇಕೆಂಬ ಆಶಯ ಇರುವುದು ಉಚಿತವೇ ಆಗಿದೆ.

ಕೇಜ್ರಿವಾಲರ ಎಲ್ಲರಿಗೂ ವಿದ್ಯುತ್‌ ಸಬ್ಸಿಡಿ ಇದಕ್ಕೊಂದು ಉದಾಹರಣೆ. ಬಿಪಿಎಲ್‌ ಜನರ ವಿದ್ಯುತ್ಛಕ್ತಿ ಉಪಯೋಗ ಉಚಿತ ಯುನಿಟ್‌ಗಳ ಒಳಗಿರಬಹುದು. ಎಪಿಎಲ್‌ ಜನರು ಹೆಚ್ಚಿನ ವಿದ್ಯುತ್‌ ಉಪಯೋಗಕ್ಕೆ ಹೆಚ್ಚು ದರ ಪಾವತಿಸುತ್ತಾರೆ ಎನ್ನುವುದಂತೂ ನಿಜ. ಮಾತ್ರವಲ್ಲದೆ ಆ ಹೆಚ್ಚಿನ ವಿದ್ಯುತ್‌ ಉಪಯೋಗಿಸಿದ ಉಪಕರಣಗಳಿಗೆ ಹಣ ತೆತ್ತಿರುವುದರಿಂದ ಅಂತಹ ಉದ್ಯಮ ಬೆಳೆದಿದೆ. ಆ ಕಾರಣದಿಂದ ಉದ್ಯೋಗಗಳು ಸೃಷ್ಟಿಯಾಗಿವೆ. ಮಾತ್ರವಲ್ಲದೆ ಉಪಕರಣಗಳಿಗೆ ಪರೋಕ್ಷ ತೆರಿಗೆಯನ್ನೂ ಪಾವತಿಸಿರುತ್ತಾರೆ. ಇನ್ನು ಸ್ತ್ರೀಯರಿಗೆ ಸಾರಿಗೆಯಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿರುವುದೂ ಸಮಂಜಸವಾಗಿದೆ. ಕಾರಣ ಅನೇಕ ಕುಟುಂಬಗಳಲ್ಲಿ ಗಂಡಂದಿರ ಅಗಲುವಿಕೆ, ಅನಾರೋಗ್ಯ, ನಿರುದ್ಯೋಗ, ಮದ್ಯಪಾನ ಚಟ ಮತ್ತಿತರ ಕಾರಣಗಳಿಗಾಗಿ ಕುಟುಂಬ ನಡೆಸುವವರು ಮಹಿಳೆಯರೇ ಆಗಿರುತ್ತಾರೆ. ಅವರ ಕೈಯಲ್ಲಿ ಚಿಕ್ಕಾಸು ಉಳಿದರೂ ಅದು ಇಡೀ ಕುಟುಂಬಕ್ಕೆ ಉಳಿದಂತೆ.

ಕೇಜ್ರಿವಾಲ್‌ ಐಐಟಿ ಪದವೀಧರರು, ಭಾರತೀಯ ಕಂದಾಯ ಸೇವೆಯಲ್ಲಿ ಅಧಿಕಾರಿಯಾಗಿದ್ದವರು. ತಮ್ಮ ರಾಜ್ಯದ ಆದಾಯ-ವೆಚ್ಚದ ಬಗ್ಗೆ ತಿಳಿದೇ ಇಂತಹ ಸಬ್ಸಿಡಿ, ರಿಯಾಯಿತಿಗಳನ್ನು ಅವರು ನೀಡಿದ್ದಾರೆ. ದೇಶ ಮತ್ತು ಉಳಿದ ರಾಜ್ಯಗಳ ಮಟ್ಟದಲ್ಲಿಯೂ ಇದೇ ಮಾದರಿ ಅನುಸರಿಸಬಹುದಾಗಿದೆ. ಇದಕ್ಕಾಗಿ ಮತ್ತೂಂದು ವಿಧದ ತೆರಿಗೆ ವಿಧಿಸಬೇಕಾದ ಅಗತ್ಯವೇನೂ ಇರಲಿಕ್ಕಿಲ್ಲ. ಸರಕಾರಗಳು ಅನಗತ್ಯ ಬಾಬತ್ತುಗಳಿಗೆ ಮಾಡುವ ಖರ್ಚುವೆಚ್ಚಗಳನ್ನು ಕಡಿವಾಣ ಹಾಕಿದರಷ್ಟೇ ಸಾಕು. ಆಹಾರದ ವಿಚಾರದಲ್ಲಿಯೂ ಕೆಲವೊಂದು ಮುಂದುವರಿದ ದೇಶಗಳು ಭಾರಿ ರಿಯಾಯಿತಿ ನೀಡುತ್ತವೆ. ಬಹರೇನ್‌ನಲ್ಲಿ ಬ್ರೆಡ್‌/ಬನ್‌ನ ಬಹಳಷ್ಟು ಕಡಿಮೆ ಬೆಲೆ ಕೇಳಿ ಆಶ್ಚರ್ಯವಾಗಿತ್ತು. ಭಾರತದಲ್ಲಿಯೂ ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸುವುದನ್ನು ನಿಲ್ಲಿಸಿ ಮತ್ತು ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಎಲ್ಲರಿಗೂ ಆಹಾರ ವಸ್ತುಗಳು ಅಗ್ಗದ ದರದಲ್ಲಿ ದೊರೆಯುವಂತೆ ಮಾಡಬಹುದಾಗಿದೆ.

ಇತ್ತೀಚೆಗಿನ ಒಂದೆರಡು ವರ್ಷಗಳಲ್ಲಿ ಕೇಜ್ರಿವಾಲ್‌ ವಹಿಸಿರುವ ಸಂಯಮ ಮತ್ತು ನಡೆಸಿದ ಅಭಿವೃದ್ಧಿ ರಾಜಕಾರಣದಿಂದ ಕಲಿಯುವುದು ಬಹಳಷ್ಟಿದೆ. ದೇಶ ಮತ್ತು ರಾಜ್ಯಗಳು ಅನುಕರಣೆ ಮಾಡಬಹುದಾದ ಉತ್ತಮ ಅಂಶಗಳು ಅವರ ರಾಜಕಾರಣದಲ್ಲಿ ಕಾಣಬಹುದಲ್ಲವೇ?

ಎಚ್‌. ಆರ್‌. ಆಳ್ವ

Advertisement

Udayavani is now on Telegram. Click here to join our channel and stay updated with the latest news.

Next