Advertisement

ಪ್ರಧಾನಿ ಮೋದಿ, ಮುಸ್ಲಿಂ ರಾಷ್ಟ್ರಗಳು ಮತ್ತು ಅತ್ಯುನ್ನತ ನಾಗರಿಕ ಗೌರವ

11:06 AM Aug 26, 2019 | Hari Prasad |

ನರೇಂದ್ರ ಮೋದಿ ಅವರು ಮೊದಲ ಸಲ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಎದುರಿಸಿದ ದೊಡ್ಡ ಸವಾಲುಗಳಲ್ಲಿ ಅವರು ಮುಸ್ಲಿಂ ವಿರೋಧಿ ಎಂಬ ಕಳಂಕವೂ ಒಂದಾಗಿತ್ತು. 2002ರಲ್ಲಿ ಗುಜರಾತ್ ದಂಗೆಯ ಸಂದರ್ಭದಲ್ಲಿ ಅಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದವರು ನರೇಂದ್ರ ಮೋದಿ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಮುಸ್ಲಿಂರಿಗೆ ಭದ್ರತೆಯಿಲ್ಲ ಎಂಬ ಆರೋಪ ದೇಶವ್ಯಾಪಿಯಾಗಿ ಕೇಳಿಬಂದಿತ್ತು. ಮತ್ತು ಆ ಬಳಿಕ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿ ಎಂಬ ಅಭಿಪ್ರಾಯವೊಂದು ಒಂದು ವರ್ಗದಲ್ಲಿ ಸಾರ್ವತ್ರಿಕವಾಗಿ ಬೇರೂರುತ್ತಾ ಹೋಯಿತು.

Advertisement

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ದೇಶದೆಲ್ಲೆಡೆ ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲ ಎಂಬ ಕೂಗು ಜೋರಾಗಿಯೇ ಕೇಳಿಬರಲಾರಂಭಿಸಿತ್ತು. ಆದರೆ ತಮ್ಮ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಎಲ್ಲಾ ವರ್ಗಗಳನ್ನು ಗಮನದಲ್ಲಿರಿಸಿಯೇ ತಮ್ಮ ಸರಕಾರದ ಯೋಜನೆಗಳನ್ನು ರೂಪಿಸುತ್ತಾ ಹೋದರು.

ಅದರಲ್ಲೂ ತಮ್ಮ ಎರಡನೇ ಅಧಿಕಾರಾವಧಿಯ ಪ್ರಾರಂಭದಲ್ಲಿಯೇ ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಯಾಗಿದ್ದ ತ್ರಿವಳಿ ತಲಾಖ್ ಅನ್ನು ನಿರ್ಬಂಧಿಸುವ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಿ ತಾನು ಮುಸ್ಲಿಂರ ವಿರೋಧಿ ಅಲ್ಲ ಎಂಬುದನ್ನು ತನ್ನ ಕಾರ್ಯದ ಮೂಲಕವೇ ತೋರಿಸಿಕೊಟ್ಟರು ಪ್ರಧಾನಿ ನರೇಂದ್ರ ಮೋದಿ ಅವರು.

ಇದೀಗ ಪ್ರಧಾನಿ ಮೋದಿ ಅವರು ಬಹ್ರೈನ್ ಮತ್ತು ಯು.ಎ.ಇ. ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ವ್ಯೂಹಾತ್ಮಕ ಸಂಬಂಧಗಳನ್ನು ಬೆಸೆಯಲು ಮಧ್ಯಪ್ರಾಚ್ಯ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಭಾರತದ ಪಾಲಿಗೆ ಯಾವತ್ತಿಗೂ ಉತ್ತಮ.

ಅದರಲ್ಲೂ ಬಹ್ರೈನ್ ಗೆ ಭಾರತದ ಪ್ರಧಾನಿಯೊಬ್ಬರು ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ದೊರೆ ಹಮಾದ್ ಬಿನ್ ಇಸಾ ಅಲ್ ಖಲೀಫಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿ ಸಮ್ಮಾನಿಸಿದರು.

Advertisement

ಹಾಗಾದರೆ ಇದುವರೆಗೆ ಯಾವೆಲ್ಲಾ ಇಸ್ಲಾಂ ರಾಷ್ಟ್ರಗಳು ಪ್ರಧಾನಿ ಮೋದಿ ಅವರಿಗೆ ತಮ್ಮ ತಮ್ಮ ದೇಶದ ಅತ್ಯುಚ್ಛ ನಾಗರಿಕ ಗೌರವಗಳನ್ನು ನೀಡಿ ಪುರಸ್ಕರಿಸಿವೆ ಎಂಬುದನ್ನು ನೋಡುವುದಾದರೆ…

1. ದಿ ಕಿಂಗ್ ಆಫ್ ಹಮಾದ್ ಆರ್ಡರ್ ಆಫ್ ದಿ ರಿನೈಸ್ಯಾನ್ಸ್, ಬಹ್ರೈನ್ – ಆಗಸ್ಟ್ 2019

2. ಯು.ಎ.ಇ.ಯ ಅತ್ಯುನ್ನತ ನಾಗರಿಕ ಗೌರವ ಆಗಿರುವ ಆರ್ಡರ್ ಆಫ್ ಝಾಯೇದ್ – ಆಗಸ್ಟ್ 2019

3.ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೈನ್ – ಫೆಬ್ರವರಿ 2018

4. ಅಮೀರ್ ಅಮಾನುಲ್ಲಾ ಖಾನ್ ಅವಾರ್ಡ್, ಅಫ್ಗಾನಿಸ್ಥಾನ – ಜೂನ್ 2016

5. ಕಿಂಗ್ ಅಬ್ದುಲಜೀಝ್ ಅವಾರ್ಡ್, ಸೌದಿ ಅರೇಬಿಯಾ – ಎಪ್ರಿಲ್ 2016

6. ರೂಲ್ ಆಫ್ ನಿಶಾನ್ ಇಝುದಿದ್ದೀನ್, ಮಾಲ್ಡೀವ್ಸ್- ಜೂನ್ 2019

ಜಗತ್ತಿನ ಮುಸ್ಲಿಂ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ಮತ್ತು ಈ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಾಕಿಕೊಂಡ ಕೆಲವೊಂದು ಉಪಕ್ರಮಗಳು ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿವೆ.

ಬಂಡವಾಳ ಹೂಡಿಕೆ, ಹಝ್ ಕೋಟಾದಲ್ಲಿ ಏರಿಕೆ, ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಬಂಧಿಗಳಾಗಿದ್ದ ಹಲವು ಭಾರತೀಯರು ಸ್ವದೇಶಕ್ಕೆ ವಾಪಸಾಗಿರುವುದು ಮೊದಲಾದವುಗಳನ್ನು ಈ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next