ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸ್ತುತ ರಾಜಕೀಯ ಬೆಳವಣಿಗೆ ಮಹತ್ವದ ತಿರುವು ಪಡೆಯವ ಸಾಧ್ಯತೆ ಇದ್ದು, ಭ್ರಷ್ಟಾಚಾರ ಮತ್ತು ಜಡ್ಜ್ ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಎಲ್ಲಾ ಸಿದ್ಧತೆ ನಡೆದಿದ್ದು, ಇಮ್ರಾನ್ ಖಾನ್ ಬಂಧಿಸಲು ಲಾಹೋರ್ ನಲ್ಲಿರುವ ನಿವಾಸಕ್ಕೆ ಪೊಲೀಸರು ದೌಡಾಯಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಫಿನಾಡು ಚಿಕ್ಕಮಗಳೂರಲ್ಲಿ ವರ್ಷದ ಮೊದಲ ಮಳೆ…ಜನ ಫುಲ್ ಖುಷ್
ಇಮ್ರಾನ್ ಖಾನ್ ಬಂಧನವಾಗಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಲಾಹೋರ್ ನಲ್ಲಿರುವ ಇಮ್ರಾನ್ ನಿವಾಸದ ಎದುರು ಪಕ್ಷದ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದು, ಪೊಲೀಸರು ಮತ್ತು ಖಾನ್ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಶಸ್ತ್ರಾಸ್ತ್ರ ಸಜ್ಜಿತ ವಾಹನಗಳು ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ನಿವಾಸದತ್ತ ದೌಡಾಯಿಸಿದ್ದು, ಶೀಘ್ರದಲ್ಲೇ ಖಾನ್ ಬಂಧನವಾಗುವ ಸಾಧ್ಯತೆ ಇದ್ದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಡಾನ್ ನ್ಯೂಸ್ ಗೆ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಇಮ್ರಾನ್ ಖಾನ್ ಅವರನ್ನು ಯಾವ ಪ್ರಕರಣದಲ್ಲಿ ಬಂಧಿಸಲಿದ್ದೀರಿ ಎಂಬ ಪ್ರಶ್ನೆಗೆ ಉತ್ತರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿರುವುದಾಗಿ ವರದಿ ವಿವರಿಸಿದೆ.
ಉದ್ರಿಕ್ತ ಇಮ್ರಾನ್ ಖಾನ್ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪಾಕ್ ಪೊಲೀಸರು ಜಲಫಿರಂಗಿ ಪ್ರಯೋಗಿಸಿರುವುದಾಗಿ ವರದಿ ತಿಳಿಸಿದೆ. ಮತ್ತೊಂದೆಡೆ ಇಮ್ರಾನ್ ಖಾನ್ ಪೊಲೀಸರ ವಶದಲ್ಲಿದ್ದಾರೆಯೋ ಅಥವಾ ತಡರಾತ್ರಿ ಜೈಲಿಗೆ ಕರೆದೊಯ್ಯಲಿದ್ದಾರೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಿ ತಿಳಿದುಬರಬೇಕಾಗಿದೆ.