Advertisement
ಶಿವಮೊಗ್ಗದ ಉಗ್ರ ಸಂಚು ಪ್ರಕರಣ ಸಂಬಂಧ ಶುಕ್ರವಾರ 9 ಮಂದಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಹಲವು ಹೊಸ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಐವರು ಆರೋಪಿಗಳು ಟೆಕ್ನಿಕಲ್ ಹಿನ್ನೆಲೆ ಹೊಂದಿದ್ದು, ಅವರಿಗೆ ರೊಬೊಟಿಕ್ಸ್ ತರಬೇತಿ ಪಡೆದು ಉಗ್ರ ಕೃತ್ಯಕ್ಕೆ ಅಗತ್ಯವಿರುವ ಕೌಶಲ ಪಡೆಯುವಂತೆ ಸೂಚಿಸಲಾಗಿತ್ತು ಎಂದು ಉಲ್ಲೇಖೀಸಲಾಗಿದೆ.
Related Articles
Advertisement
ಶಾರೀಕ್, ಮುನೀರ್ ಮತ್ತು ಯಾಸೀನ್ ಐಸಿಸ್ ಹ್ಯಾಂಡ್ಲರ್‌ನೊಂದಿಗೆ ಸೇರಿ ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂಥ ಕೃತ್ಯಗಳನ್ನು ಎಸಗಲು ಕ್ರಿಮಿನಲ್ ಸಂಚು ರೂಪಿಸಿದ್ದರು. ಈ ಮೂವರು ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಸಹ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದರು ಎಂದೂ ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದೆ. ಆನ್‌ಲೈನ್ ಹ್ಯಾಂಡ್ಲರ್ ಎಲ್ಲ ಆರೋಪಿಗಳಿಗೂ ಕ್ರಿಪ್ಟೋಕರೆನ್ಸಿ ಮೂಲಕ ಹಣ ರವಾನಿಸುತ್ತಿದ್ದ.
ಕಳೆದ ವರ್ಷದ ಸೆ. 19ರಂದು ಶಿವಮೊಗ್ಗ ಗ್ರಾಮೀಣ ಪೊಲೀಸರು ಈ ಪ್ರಕರಣ ಸಂಬಂಧ ಆರಂಭದಲ್ಲಿ ಕೇಸು ದಾಖಲಿಸಿಕೊಂಡಿದ್ದರು. ಅನಂತರದಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ನ.15ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಕೈಗೆತ್ತಿಕೊಂಡು, ಹೊಸದಾಗಿ ಕೇಸು ನೋಂದಣಿ ಮಾಡಿಕೊಂಡಿತ್ತು.
ಕೌಶಲಕ್ಕಾಗಿ ಕೋರ್ಸ್
ಈ ಪೈಕಿ ಅಹ್ಮದ್ ಮತ್ತು ಸಯ್ಯದ್ ಯಾಸಿನ್ ಹೆಸರನ್ನು ಮಾರ್ಚ್ ತಿಂಗಳಲ್ಲಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲೇ ಉಲ್ಲೇಖೀಸಲಾಗಿತ್ತು. ಅವರ ವಿರುದ್ಧ ಈಗ ಇನ್ನೂ ಕೆಲವು ಆರೋಪಗಳನ್ನು ಹೊರಿಸಲಾಗಿದೆ. ಇವರಿಬ್ಬರೂ ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರೆಹಮಾನ್ ಮತ್ತು ನದೀಮ್ ಅಹ್ಮದ್ ಕೆ.ಎ. ಅವರೊಂದಿಗೆ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇವರೆಲ್ಲರಿಗೂ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯಲು ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಲು ರೊಬೊಟಿಕ್ಸ್ ಕೋರ್ಸ್ ಮಾಡುವಂತೆ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್ ಸೂಚಿಸಿದ್ದ ಎಂದು ಚಾರ್ಜ್‌ಶೀಟ್ ಹೇಳಿದೆ.