ತಿರುವನಂತಪುರ: ಸಿರಿಯಾ ಮತ್ತು ಇರಾಕ್‌ನಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡ ಐಸಿಸ್ ಈಗ ಭಾರತ ಮತ್ತು ಶ್ರೀಲಂಕಾದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿವೆ ಎಂಬ ಆತಂಕಕಾರಿ ಮಾಹಿತಿ ಗುಪ್ತಚರ ದಳ ಬಹಿರಂಗಪಡಿಸಿದೆ.
ಈ ಸಂಬಂಧ ಕೇರಳ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದ್ದು, ಐಸಿಸ್ ಉಗ್ರ ಮುಖಂಡರು ಸಿರಿಯಾ ಮತ್ತು ಇರಾಕ್‌ನಲ್ಲಿ ಇದ್ದುಕೊಂಡೇ ಭಾರತ ಮತ್ತು ಶ್ರೀಲಂಕಾದಲ್ಲಿ ತಮ್ಮ ನೆಲೆ ವರ್ಧಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕೊಚ್ಚಿಯಲ್ಲಿರುವ ಪ್ರಮುಖ ಶಾಪಿಂಗ್ ಮಾಲ್ ಮತ್ತು ವಿಮಾನ ನಿಲ್ದಾಣಗಳಿಗೆ ದಾಳಿ ಭೀತಿಯಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕಳೆದ ಕೆಲವೇ ದಿನಗಳ ಹಿಂದೆ ತಮಿಳುನಾಡಿನಲ್ಲಿ ಏಳು ಕಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳವು ಮೂವರು ಐಸಿಸ್ ಪರ ಒಲವು ಹೊಂದಿದ ವ್ಯಕ್ತಿಗಳನ್ನು ಬಂಧಿಸಿತ್ತು.
ಸೈಬರ್ ಚಟುವಟಿಕೆಗಳೂ ತೀವ್ರ: ಹದಿನೈದು ದಿನಗಳ ಹಿಂದಷ್ಟೇ ಐಸಿಸ್ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿರುವ ಕುರಿತ ಮಾಹಿತಿಯುಳ್ಳ ವರದಿಯನ್ನು ಕೇರಳ ಪೊಲೀಸರಿಗೆ ರವಾನಿ ಸಲಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಇತ್ತೀಚೆಗೆ ಸೈಬರ್ ಚಟುವಟಿಕೆಗಳೂ ತೀವ್ರವಾಗಿದ್ದು, ದಾಳಿ ಭೀತಿ ಹೆಚ್ಚಿಸಿದೆ. ಇತ್ತೀಚಿನ ದಿನಗಳವರೆಗೂ ಟೆಲಿಗ್ರಾಮ್ ಮೆಸೆಂಜರ್ ಅನ್ನು ಉಗ್ರರು ಹೆಚ್ಚು ಬಳಸುತ್ತಿ ದ್ದರಾದರೂ ಇದರಿಂದಲೂ ಗುಪ್ತಚರ ದಳಗಳು ಮಾಹಿತಿ ಪಡೆಯು ತ್ತಿರುವುದರಿಂದಾಗಿ ಈಗ ಚಾಟ್ ಸೆಕ್ಯೂರ್, ಸಿಗ್ನಲ್, ಸೈಲೆಂಟ್ ಟೆಕ್ಸ್ಟ್ನಂತಹ ಇತರ ಅಪ್ಲಿಕೇಶನ್‌ಗಳನ್ನು ಬಳಸು ತ್ತಿದ್ದಾರೆ.
4 ರಾಜ್ಯಗಳಲ್ಲಿ: ಹಿರಿಯ ಗುಪ್ತಚರ ಅಧಿಕಾರಿಗಳ ಪ್ರಕಾರ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕಾಶ್ಮೀರದಲ್ಲಿ ಐಸಿಸ್ ಪ್ರಭಾವ ಬೆಳೆಯುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದೀಚೆಗೆ 100ಕ್ಕೂ ಹೆಚ್ಚು ಜನರು ಕೇರಳದಿಂದ ಐಸಿಸ್ ಸೇರಿದ್ದಾರೆ. ಉಗ್ರರು ಧರ್ಮದ್ವೇಷ ತುಂಬಿದ ಯುವಕರನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವುದಕ್ಕಾಗಿ 21 ಕಡೆ ಆಪ್ತ ಸಲಹೆ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ ಸುಮಾರು 3 ಸಾವಿರ ಜನರಿಗೆ ಈ ಕೇಂದ್ರಗಳಲ್ಲಿ ಆಪ್ತ ಸಲಹೆ ನೀಡಿ ಮುಖ್ಯ ವಾಹಿನಿಗೆ ತರಲಾಗಿದೆ. ಇವರ ಮೇಲೆ ನಿಗಾ ವಹಿಸಲಾಗಿದೆ. 3 ಸಾವಿರ ಜನರ ಪೈಕಿ ಬಹುತೇಕರು ಕೇರಳದ ಉತ್ತರ ಭಾಗ ದವರಾಗಿದ್ದಾರೆ.