Advertisement
ಸಾಮಾನ್ಯವಾಗಿ ಮನೆ ಎಲ್ಲ ಮುಗಿದ ನಂತರ ನಾವು ಹೊರಗಿನದನ್ನು ಮುಗಿಸಲು ತೊಡಗುತ್ತೇವೆ. ಆಗ ಹೊಸಹೊಸ ತೊಂದರೆಗಳು ನಮ್ಮನ್ನು ಕಾಡಲು ಶುರುಮಾಡಬಹುದು. ಆದುದರಿಂದ ಮನೆಯ ಪ್ಲಾನ್ ಮಾಡುವಾಗಲೇ ರಸ್ತೆಯಿಂದ ಮನೆಗೆ ಸಂಪರ್ಕದ ಹಾದಿ ಹಾಗೂ ಇಡೀ ಮನೆಯ ಹೊರಗಿನ ಮಟ್ಟ, ಮಳೆನೀರು ಹರಿದುಹೋಗುವ ದಾರಿ ಇತ್ಯಾದಿಯನ್ನು ನಿರ್ಧರಿಸಿದರೆ, ನಾವು ಫಿನಿಶಿಂಗ್ ವೇಳೆಯಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.
ಮನೆಯ ನೆಲಮಟ್ಟ ಅಂದರೆ ಫ್ಲೋರ್ ಮಟ್ಟವನ್ನು ನಿವೇಶನದ ಮಧ್ಯಭಾಗ, ರಸ್ತೆಯ ಉಬ್ಬು ಅಂದರೆ ಅದರ ಮಧ್ಯದಿಂದ ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ಇಡಲಾಗುತ್ತದೆ. ಹೀಗೆ ಇಡಲು ಮುಖ್ಯಕಾರಣ ಮನೆಯ ಸ್ಯಾನಿಟರಿ ನೀರು ರಸ್ತೆಯ ಅಡಿಯಲ್ಲಿ ಅಳವಡಿಸಿರುವ ಕೊಳವೆಗೆ ಸರಾಗವಾಗಿ ಹರಿದುಹೋಗಲಿ ಎಂದು. ಮನೆಯನ್ನು ರಸ್ತೆ ಮಟ್ಟದಲ್ಲೇ ಇಟ್ಟರೆ, ಕೊಳಚೆ ನೀರಿನ ಪೈಪ್ ಕಟ್ಟಿಕೊಂಡಾಗ, ಗಲೀಜು ನೀರು ಹಿಂದೆ ಹರಿದು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದುದರಿಂದ ಮನೆಯ ಮಟ್ಟವನ್ನು ಕಡೆಪಕ್ಷ ಒಂದೂವರೆ ಅಡಿಯಷ್ಟಾದರೂ ಎತ್ತರಕ್ಕೆ ಇಡಬೇಕು. ಮನೆಯ ಮುಂಬಾಗಿಲು ಒಂದೆರಡು ಮೆಟ್ಟಿಲು ಹತ್ತಿದರೆ ಸಿಗುವಂತೆ ಇದ್ದರೆ ಉತ್ತಮ. ಸಣ್ಣಪುಟ್ಟ ಹರಿದಾಡುವ ಕೀಟ, ಜರಿ, ಜೇಳು ಇತ್ಯಾದಿ ಮೆಟ್ಟಿಲು ಹತ್ತಿಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಜೊತೆಗೆ ಮನೆಯ ಬಾಗಿಲನ್ನು ತೆರೆದಾಗ ಆಗಂತುಕರು ದಿಢೀರನೆ ಎದುರಾದರೆ, ಅವರು ನಮಗಿಂತ ಕಡಿಮೆ ಎತ್ತರದಲ್ಲಿದ್ದರೆ, ಗೃಹಿಣಿಯರಿಗೆ ಹೆಚ್ಚು ಆತಂಕ ಆಗುವುದಿಲ್ಲ. ಆತ್ಮರಕ್ಷಣೆಯ ದೃಷ್ಟಿಯಿಂದ ಮನೆಯ ಮುಂಬಾಗಿಲು ಹೊರಗಿನ ಮಟ್ಟದಿಂದ ಕಡೇಪಕ್ಷ ಎರಡು ಮೆಟ್ಟಿಲು ಅಂದರೆ ಒಂದು ಅಡಿಯಷ್ಟಾದರೂ ಮೇಲಿರುವುದು ಉತ್ತಮವೇನೋ. ಇಳಿಜಾರಿನ ಲೆಕ್ಕಾಚಾರ
ನಿಮ್ಮ ನಿವೇಶನ ನಲವತ್ತು ಅಡಿ ಉದ್ದ ಇದ್ದರೆ, ಮನೆಯ ಮುಂಬಾಗಿಲು ಸುಮಾರು ಇಪ್ಪತ್ತು ಅಡಿ ಒಳಗಿರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ನೀರು ಸರಾಗವಾಗಿ ಹರಿದುಹೋಗಲು ಐದು ಅಡಿಗೆ ಒಂದು ಇಂಚಿನಷ್ಟು ಇಳಿಜಾರು ಕೊಡಬೇಕಾಗುತ್ತದೆ. ಅಂದರೆ ಕಡೆಪಕ್ಷ ನಾಲ್ಕು ಇಂಚು, ಜೊತೆಗೆ ಮೋರಿ ಕಲ್ಲು ಸೇರಿಸಿದರೆ, ಆರು ಇಂಚು ಆಗುತ್ತದೆ. ಹಾಗಾಗಿ ನಾವು ಒಂದೂವರೆ ಅಡಿ ಮಟ್ಟಕ್ಕೆ ಪ್ಲಿಂತ್ ಹಾಕಿದರೂ ಕಡೆಗೆ ನಮಗೆ ಸಿಗುವುದು ಒಂದು ಅಡಿ ಮಾತ್ರ! ಜೊತೆಗೆ ನಾವು ಮೋರಿಕಲ್ಲಿನ ಹಾಗೂ ರಸ್ತೆ ಮಟ್ಟದ ಲೆಕ್ಕಾಚಾರ ಹಾಕುವಾಗ, ಅದೇನಾದರೂ ಜೆಲ್ಲಿ ರಸ್ತೆ ಆಗಿದ್ದರೆ, ಇಲ್ಲವೇ ಮುಖ್ಯ ರಸ್ತೆ ಆಗಿದ್ದರೆ, ಅದರ ಮೇಲೆ ಕೆಲವೇ ವರ್ಷಗಳಲ್ಲಿ ಆರು ಇಂಚಿನಷ್ಟಾದರೂ ಮತ್ತೂಂದು ಸಾರಿ ಟಾರು ಬೀಳುವ ಸಾಧ್ಯತೆ ಇರುತ್ತದೆ. ಅಂಥ ಸಂದರ್ಭದಲ್ಲಿ ಮನೆಯ ಮಟ್ಟವನ್ನು ಮತ್ತೂಂದು ಆರು ಇಂಚು ಎತ್ತರಕ್ಕೆ ಇಟ್ಟುಕೊಳ್ಳುವುದು ಉತ್ತಮ.
Related Articles
ಹಿತ್ತಿಲನ್ನು ಸಾಮಾನ್ಯವಾಗಿ ಯುಟಿಲಿಟಿಯಂತೆ ಬಳಸುವ ವಾಡಿಕೆಯಲ್ಲಿದ್ದು, ಇಲ್ಲಿ ನೀರು ಹೆಚ್ಚು ಬಳಕೆಯಲ್ಲಿ ಇರುತ್ತದೆ. ಜೊತೆಗೆ ಮಳೆಯ ನೀರು ಮುಂದಕ್ಕೆ ಅಂದರೆ ರಸ್ತೆ ಕಡೆಗೆ ಹರಿದು ಹೋಗಬೇಕು ಎಂದರೆ ಮತ್ತೆ ನಾವು ಮಟ್ಟಗಳನ್ನು ಲೆಕ್ಕ ಮಾಡಬೇಕು. ನಿವೇಶನದ ಉದ್ದ ಅಂದರೆ 40 ಅಡಿಗಳ ಜೊತೆಗೆ ಅದರ ಅಗಲದ ಅರ್ಧದಷ್ಟಾದರೂ ಗಣನೆಗೆ ಬರಬೇಕು. ಅಂದರೆ ಸುಮಾರು 55 ಅಡಿಗೆ ಇಳಿಜಾರು ಅಂದರೆ ಸುಮಾರು ಒಂದು ಅಡಿಯಷ್ಟು ಎತ್ತರದಲ್ಲಿ ಈ ಮಟ್ಟ ಇರಬೇಕು. ನಮ್ಮಮನೆ ರಸ್ತೆ ಇಂದ ಒಂದೂವರೆ ಅಡಿ ಎತ್ತರದಲ್ಲಿದ್ದರೂ, ಮನೆಯ ಹಿತ್ತಲಿನ ಬಾಗಿಲಿನಿಂದ ನಮ್ಮ ಮನೆಗೆ ಕೇವಲ ಒಂದು ಮೆಟ್ಟಿಲು ಎತ್ತರದಲ್ಲಿರುತ್ತದೆ. ಇದನ್ನಾದರೂ ನಾವು ಜತನದಿಂದ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಮನೆಯ ಮುಂಬಾಗಿಲಿನಿಂದ ಬರುವುದನ್ನು ತಡೆದ ಹರಿದಾಡುವ ಕೀಟಗಳೆಲ್ಲ ನಿರಾಯಾಸವಾಗಿ ಹಿತ್ತಲಿನಿಂದ ಮನೆಯನ್ನು ಪ್ರವೇಶಿಸುವಂತಾಗುತ್ತದೆ.
Advertisement
ಮಳೆ ನೀರಿಗೆ ಇಂಗು ಗುಂಡಿಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಡಗರದಿಂದ ಮಳೆ ಕೊಯ್ಲು ಮಾಡುತ್ತಿರುವುದರಿಂದ, ನಿಮಗೆ ಯಾವುದಾದರೂ ಕಾರಣದಿಂದ ಮನೆಯ ಮುಂದಿರುವ ರಸ್ತೆಗೆ ನೀರು ಹರಿದುಬಿಡಲು ಇಷ್ಟವಿಲ್ಲದೆ ಹಿಂದೆ ಹರಿಯಬೇಕು ಎಂದಿದ್ದರೆ, ಆಗ ಮನೆಯ ಮುಂಬಾಗಿಲಿನ ಮೆಟ್ಟಿಲಿನ ಬಳಿಯಿಂದ ಹಿಂದುಗಡೆಗೆ ಇಳಿಜಾರು ಮಾಡಿಕೊಳ್ಳಿ. ಜೊತೆಗೆ ಸೂಕ್ತ ಎನಿಸಿದ ಸ್ಥಳದಲ್ಲಿ ಇಂಗುಗುಂಡಿ ಇಟ್ಟುಕೊಳ್ಳಬಹುದು. ಯಥಾಪ್ರಕಾರ ನೀರು ಸರಾಗವಾಗಿ ಇಂಗುಗುಂಡಿಗೆ ಹರಿದು ಹೋಗಲು ಕಡೆಪಕ್ಷ ಅರವತ್ತಕ್ಕೆ ಒಂದರಂತೆ ಅಂದರೆ ಐದು ಅಡಿಗೆ ಒಂದು ಇಂಚಿನಷ್ಟು ಇಳಿಜಾರನ್ನು ಕೊಟ್ಟು ಮಟ್ಟಗಳ ನಿರ್ವಹಣೆ ಮಾಡಬಹುದು. ಹೇಳಿಕೇಳಿ ಮಟ್ಟಗಳ ನಿರ್ವಹಣೆ ಸ್ವಲ್ಪ ಕಷ್ಟ. ಇದಕ್ಕೆ ಇಳಿಜಾರಿನ ಸೂಕ್ತ ಲೆಕ್ಕಾಚಾರ ಮಾಡಬೇಕಾಗುತ್ತದೆ. ನಮ್ಮ ನಗರಗಳಲ್ಲಿ ರಸ್ತೆಗಳು ಕೆಡಲು ಮುಖ್ಯಕಾರಣ ಸರಿಯಾದ ಇಳಿಜಾರು ನೀಡದೆ, ನೀರುನಿಂತು ಹದಗೆಡುವುದೇ ಆಗಿರುತ್ತದೆ. ಹಾಗಾಗಿ ನಿಮ್ಮ ಮನೆಯ ಸುತ್ತಲಿನ ಓಪನ್ ಸ್ಪೇಸ್‌ನಲ್ಲಿ ನೀರುನಿಲ್ಲದಂತೆ ಹರಿದುಹೋಗಲು ಸರಿಯಾದ ದಾರಿಮಾಡಿದರೆ ಹೊರಾಂಗಣದ ನಿರ್ವಹಣೆ ಸುಲಭವಾಗುತ್ತದೆ. ಪಾರ್ಕಿಂಗ್ ಮಟ್ಟದ ನಿರ್ವಹಣೆ
ನಮಗೆ ವಾಹನಗಳನ್ನು ನಿಲ್ಲಿಸಲು ರಸ್ತೆ ಮಟ್ಟದಲ್ಲಿ ನಿವೇಶನದ ಪಾರ್ಕಿಂಗ್ ಜಾಗ ಇರುವುದು ಅನುಕೂಲ ಎಂದೆನಿಸಿದರೂ ಮಳೆ ಜೋರಾಗಿ ಬಂದಾಗ, ಮೋರಿಗಳು ತುಂಬಿ ಹರಿದಾಗ, ನಮ್ಮ ವಾಹನಗಳನ್ನು ತಾಗಿ, ಬ್ಯಾಟರಿ ಇತ್ಯಾದಿ ಜಖಂ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಡ್ಡಾಯವಾಗಿ ಪಾರ್ಕಿಂಗ್ ಜಾಗ ರಸ್ತೆ ಮಟ್ಟದಿಂದ ಒಂಬತ್ತು ಇಂಚಿನಷ್ಟಾದರೂ ಎತ್ತದಲ್ಲಿದ್ದರೆ ಒಳ್ಳೆಯದು. ನಿವೇಶನಗಳು ಸಣ್ಣದಿದ್ದಾಗ, ಪಾರ್ಕಿಂಗ್ ಜಾಗಕ್ಕೆ ತಲುಪಲು ಒಂದು ಇಳಿಜಾರು, ನಂತರ ಮಟ್ಟಸವಾದ ಸ್ಥಳ ಎಂದೆಲ್ಲ ಲೆಕ್ಕ ಮಾಡಲು ಆಗುವುದಿಲ್ಲ. ಒಟ್ಟಾರೆಯಾಗಿ ನಾವು ನಿರ್ಧರಿಸಿದ ಮಟ್ಟ ತಲುಪಿ, ಇಳಿಜಾರಾಗಿದ್ದರೂ ಪರವಾಗಿಲ್ಲ, ವಾಹನ ನಿಲ್ಲಿಸಲು ತೊಂದರೆ ಆಗದ ರೀತಿಯಲ್ಲಿ ಬಾಗಿದಂತೆ ಕಂಡರೂ ಬೀಳದ ರೀತಿಯಲ್ಲಿ ಪಾರ್ಕಿಂಗ್ ಜಾಗವನ್ನು ವಿನ್ಯಾಸ ಮಾಡಿದರೆ ಸಾಕು. ಪಾರ್ಕಿಂಗ್ ಜಾಗ ರಸ್ತೆಯ ಬದಿಗೇ ಬರುವುದರಿಂದ, ಕೇವಲ ಒಂಬತ್ತು ಇಂಚು ಎತ್ತರ ಇದ್ದರೂ ಕೂಡ ಇದಕ್ಕೆ ಕಡೆಪಕ್ಷ ಐದು ಅಡಿಯಷ್ಟಾದರೂ ಇಳಿಜಾರು ಕೊಡಬೇಕು. ಸಾಧ್ಯವಾದರೆ ಏಳು ಅಡಿ ಇದ್ದರೆ ಉತ್ತಮ. ಇಕ್ಕಟ್ಟಾದ ಕಡೆ, ಮೋರಿಯ ಮೇಲೆ ಹಾಕುವ ಕಲ್ಲು ಇಲ್ಲವೇ ಕಾಂಕ್ರಿಟ್ ಸ್ಲ್ಯಾಬ್ ಅನ್ನು ನಮ್ಮ ಅನುಕೂಲಕ್ಕೆ ಸ್ವಲ್ಪ ಇಳಿಜಾರಾಗಿ ಇಟ್ಟುಕೊಂಡು ನಮ್ಮ ವಾಹನ ನಿಲುಗಡೆಗೆ ಸರಿಹೊಂದುವಂತೆ ಮಾಡಿಕೊಳ್ಳಬಹುದು. – ಆರ್ಕಿಟೆಕ್ಟ್ ಕೆ. ಜಯರಾಮ್
ಹೆಚ್ಚಿನ ಮಾಹಿತಿಗೆ: 9844132826