Advertisement

ಸುಸ್ತಿ ಸಾಲದಿಂದ ಸುಸ್ತು

11:26 PM May 15, 2017 | Karthik A |

ಬ್ಯಾಂಕಿನ ಸಾಲಗಾರರಲ್ಲಿ, ಸಾಲಗಾರ, ಸುಸ್ತಿ ಸಾಲಗಾರ ಮತ್ತು ಉದ್ದೇಶ ಪೂರ್ವಕ ಸುಸ್ತಿ ಸಾಲಗಾರ ಎನ್ನುವ ಮೂರು ವಿಧದವರು ಇರುತ್ತಾರೆ. ಯಾವುದೇ ರೀತಿಯ ಸಾಲವಿರಲಿ, ಬ್ಯಾಂಕಿನಲ್ಲಿ ಸಾಲ ಪಡೆದವರೆಲ್ಲರೂ ಸಾಲಗಾರರರು. ಸಾಲ ಮಂಜೂರಾಗಿ ಸಾಲದ ಮೊತ್ತ ಗ್ರಾಹಕನ ಖಾತೆಗೆ ಜಮಾ ಆಗುತ್ತಿರುವಂತೆ ಆತನು ಸಾಲಗಾರನಾಗುತ್ತಾನೆ.

Advertisement

ಬ್ಯಾಂಕ್‌ಗಳ ವಿಲೀನ, ಬ್ಯಾಂಕ್‌ ಸಿಬ್ಬಂದಿಗಳ ಮುಷ್ಕರ, ಬ್ಯಾಂಕುಗಳಿಗೆ ಸರ್ಕಾರದಿಂದ ಕ್ಯಾಪಿಟಲ್ ಹೂಡಿಕೆ, ಬಂಡವಾಳ ಹೂಡಿಕೆಯಲ್ಲಿ ಬೇಸಲ್ ನಾರ್ಮ್ಸ್ ಪಾಲಿಸುವುದು… ಹೀಗೆ ಹಲವು ಸರ್ಕಾರಿ ಯೋಜನೆಗಳ ಜಾರಿಗಳಿಗಿಂತ ಹೆಚ್ಚಿನ ಅಧ್ಯತೆಯಲ್ಲಿ ಚರ್ಚೆಯಾಗುವ ವಿಷಯ ಸುಸ್ತಿ ಸಾಲ ಆಗಿರುತ್ತದೆ.

ಬ್ಯಾಂಕುಗಳಲ್ಲಿ ಸುಸ್ತಿ ಸಾಲವು ಸುಮಾರು ಏಳು ಲಕ್ಷ ಕೋಟಿಗೆ ಮುಟ್ಟಿದೆ. ಇದು, ಒಟ್ಟು ಸಾಲದ ಶೇ.14ರಷ್ಟಾಗಬಹುದೆಂದು ಅಂದಾಜಿದೆ. ಹಾಗೆಯೇ ಸಾಲವನ್ನು ಪುನರ್‌ ವಿನ್ಯಾಸ ಮಾಡಿದ, ಅಂದರೆ, ಮರುಪಾವತಿಯನ್ನು ಸ್ವಲ್ಪ ಮುಂದೆ ಹಾಕಿರುವ ಸಾಲ ಸುಮಾರು 9 ಲಕ್ಷ ಕೋಟಿಗಳಿದೆ. ಒಟ್ಟಿಗೆ ಸುಮಾರು 15 ಲಕ್ಷ ಕೋಟಿ ಬ್ಯಾಂಕ್‌ ಸಾಲ ಒತ್ತಡದಲ್ಲಿದೆ. ರಿಸರ್ವ್‌ ಬ್ಯಾಂಕ್‌, ಸರ್ಕಾರ ಮತ್ತು ಆರ್ಥಿಕ- ಬ್ಯಾಂಕಿಂಗ್‌ ತಜ್ಞರ ಪ್ರಕಾರ ದೇಶದ ಒಟ್ಟಾರೆ ಅರ್ಥಿಕ ಸ್ಥಿತಿಗತಿಯ ದೃಷ್ಟಿಯಲ್ಲಿ ಇದೊಂದು ಅಘಾತಕಾರಿ ಬೆಳವಣಿಗೆ ಮತ್ತು ಯುದ್ಧೋಪಾದಿಯಲ್ಲಿ ಟ್ಯಾಕಲ್ ಮಾಡುವ ಅರ್ಜೆನ್ಸಿ ಇದೆ. ಈ ಸುಸ್ತಿ ಸಾಲದ ಮೊತ್ತ ಬ್ಯಾಂಕುಗಳ ನಿದ್ದೆ ಕೆಡಿಸಿದೆ. ಇದು ಇಳಿಯುವ ಯಾವ ಲಕ್ಷಣವೂ ಕಾಣದೇ ಉತ್ತರಮುಖೀಯಾಗಿ ಚಲಿಸುತ್ತಿರುವುದು ಬ್ಯಾಂಕಿಂಗ್‌ ವಲಯವನ್ನು, ಆರ್ಥಿಕ ತಜ್ಞರನ್ನು, ಸರ್ಕಾರವನ್ನು ದಿಗ್ಬ್ರಾಂತಗೊಳಿಸಿದೆ.

ಬ್ಯಾಂಕಿನ ಸಾಲಗಾರರಲ್ಲಿ, ಸಾಲಗಾರ, ಸುಸ್ತಿ ಸಾಲಗಾರ ಮತ್ತು ಉದ್ದೇಶ ಪೂರ್ವಕ ಸುಸ್ತಿ ಸಾಲಗಾರ ಎನ್ನುವ ಮೂರು ವಿಧದವರು ಇರುತ್ತಾರೆ. ಯಾವುದೇ ರೀತಿಯ ಸಾಲವಿರಲಿ, ಬ್ಯಾಂಕಿನಲ್ಲಿ ಸಾಲ ಪಡೆದವರೆಲ್ಲರೂ ಸಾಲಗಾರರರು. ಸಾಲ ಮಂಜೂರಾಗಿ ಸಾಲದ ಮೊತ್ತ ಗ್ರಾಹಕನ ಖಾತೆಗೆ ಜಮಾ ಆಗುತ್ತಿರುವಂತೆ ಆತನು ಸಾಲಗಾರನಾಗುತ್ತಾನೆ. ಇವರು ಬ್ಯಾಂಕಿಗೆ ಆದಾಯ ಗಳಿಸಿಕೊಡುವ ಆಸ್ತಿ. ಕೆಲವು ಸಾಲಗಳಲ್ಲಿ ಸಾಲ ಮರುಪಾವತಿ ಅರಂಭಿಸಲು ಕೆಲವು ಕಾಲಾವಕಾಶ ಕೊಡುತ್ತಾರೆ. ಉದಾಹರಣೆಗೆ, ಗೃಹನಿರ್ಮಾಣ ಸಾಲದಲ್ಲಿ 18 ತಿಂಗಳವರೆಗೂ ಕೆಲವು ನಿಬಂಧನೆಗಳೊಂದಿಗೆ ಅವಕಾಶ ಕೊಡುತ್ತಾರೆ.

ಆದರೆ, ಸಾಮಾನ್ಯವಾಗಿ ಸಾಲ ಬಿಡುಗಡೆಯಾದ ಮಾರನೇ ತಿಂಗಳಿನಿಂದಲೇ ಸಾಲ ಮರುಪಾವತಿ ಆಥವಾ ಕಂತು ಆರಂಭವಾಗುತ್ತದೆ. ಯಾವುದೇ ಸಾಲ ಮೂರು ತಿಂಗಳಿನಿಂದ ಮರುಪಾವತಿಯಾಗದಿದ್ದರೆ ಅಥವಾ ಯಾವುದೇ ಸಾಲದ ಮೂರು ಕಂತುಗಳು ಬಾಕಿ ಇದ್ದರೆ, ಆ ಸಾಲವನ್ನು ಸುಸ್ತಿ ಸಾಲವೆಂದು ಅಥವಾ ಅನುತ್ಪಾದಕ ಅಥವಾ ಕೆಟ್ಟ ಸಾಲ/ಆಸ್ತಿ ಎಂದು ಕರೆಯಲಾಗುವುದು. ಜನಸಾಮಾನ್ಯರ ಭಾಷೆಯಲ್ಲಿ ಹೇಳುವದಾದರೆ ಈ ಸಾಲದಿಂದ ಅಥವಾ ಆಸ್ತಿಯಿಂದ, ಬ್ಯಾಂಕಿಗೆ ಯಾವುದೇ ಉತ್ಪನ್ನ ಬರುತ್ತಿಲ್ಲ. ಈ ಪರಿಸ್ಥಿತಿಯನ್ನು ಕೆಲವರು ಬಂಜೆ ಸ್ಥಿತಿ ಎಂದು ತಮಾಷೆಯಾಗಿ ಬಣ್ಣಿಸುತ್ತಾರೆ. ಅಂತೆಯೇ ಇದನ್ನು ಅನುತ್ಪಾದಕ ಆಸ್ತಿ ಎಂದು ಹೇಳುತ್ತಾರೆ. ಸ್ವಂತ ಬಂಡವಾಳದಿಂದ ಎಲ್ಲರಿಂದಲೂ ಉದ್ಯಮ ವ್ಯವಹಾರ ಮಾಡಲು ಸಾಧ್ಯವಿಲ್ಲ. ಕೆಲವರು ಆ ಶಕ್ತಿ ಇದ್ದರೂ ಬ್ಯಾಂಕಿನಿಂದ ಸಾಲ ತೆಗೆದು ವ್ಯವಹಾರ ಮಾಡುವ ಉದಾಹರಣೆಗಳು ಇವೆ. ಕೆಲವರು ಉದ್ಯಮ ವ್ಯವಹಾರ ಮಾಡಲು ಬ್ಯಾಂಕಿನಿಂದ ಸಹಾಯ ಪಡೆಯಲೇಬೇಕು.

Advertisement

ವ್ಯವಹಾರ ಮತ್ತು ಉದ್ಯಮದಲ್ಲಿ ಎಲ್ಲರೂ ಜಯಿಸುವುದಿಲ್ಲ. ಏಳು- ಬೀಳುಗಳು ಸಹಜ. ಕೆಲವರು ಕಾರಣಾಂತರಗಳಿಂದ ಮತ್ತು ಅನಿವಾರ್ಯ ಕಾರಣಗಳಿಂದ ಎಡವುತ್ತಾರೆ, ವಿಫ‌ಲರಾಗುತ್ತಾರೆ. ಅಂಥವರ ಬ್ಯಾಂಕ್‌ ಸಾಲ ಸುಸ್ತಿ ಆಗುವುದು ಸಹಜ. ಆದರೆ, ಕೆಲವರು ಉದ್ಯಮ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದರೂ, ಕಂಪನಿಯಲ್ಲಿ ಚೆನ್ನಾಗಿ ಹಣದ ಹರಿವು ಇದ್ದರೂ ಮತ್ತು ಸಾಲ ಮರುಪಾವತಿ ಸಾಮರ್ಥ್ಯ ಇದ್ದರೂ ಪಾವತಿ ಮಾಡುತ್ತಿಲ್ಲ. ಕೆಲವರು ಪಡೆದಕೊಂಡ ಸಾಲವನ್ನು, ಸಾಲದ ಉದ್ದೇಶಕ್ಕೆ ಬಳಸದೇ ಬೇರೆ ಯಾವುದೋ ಉದ್ದೇಶಕ್ಕೆ ಬಳಸುತ್ತಾರೆ. ಉದಾಹರಣೆಗೆ, ಉದ್ಯಮಕ್ಕೆ ಎಂದು ಸಾಲ ಪಡೆದು ಐಷಾರಾಮಿ ಕಾರು ಕೊಳ್ಳುವುದು. ಬ್ಯಾಂಕಿಗೆ ಭದ್ರತೆಗೆ ಎಂದು ಕೊಟ್ಟ ಆಸ್ತಿಯನ್ನು ಬ್ಯಾಂಕಿಗೆ ತಿಳಿಯದಂತೆ ಮಾರುವುದು. ಸುಸ್ತಿ ಸಾಲದಲ್ಲಿ ಇಂಥ ನಡೆ ಕಂಡು ಬಂದಾಗ ಅಂಥವರ ಸಾಲವನ್ನು ಉದ್ದೇಶ ಪೂರ್ವಕ ಸುಸ್ತಿ ಸಾಲ ಎನ್ನುತ್ತಾರೆ. ಕಳೆದ ನವೆಂಬರ್‌ 2016 ರ ಹೊತ್ತಿಗೆ ಇಂಥ ಉದ್ದೇಶಪೂರ್ವಕ ಸಾಲದ ಪ್ರಮಾಣ ಒಟ್ಟು ಸುಸ್ತಿ ಸಾಲದ ಶೇ.22ರಷ್ಟು ಏರಿದ್ದು ಸುಮಾರು 8,100 ಸುಸ್ತಿದಾರರರು 76685 ಕೋಟಿ ಸಾಲವನ್ನು ಬಾಕಿ ಇರಿಸಿಕೊಂಡಿದ್ದರು.

ಇದರಿಂದಾಗುವ ಪರಿಣಾಮ ಏನು?
ಉದ್ದೇಶ ಪೂರ್ವ ಸುಸ್ತಿದಾರ ಎಂದು ಘೋಷಿಸಿದ ಮೇಲೆ, ಆ ಸುಸ್ತಿ ಸಾಲಗಾರ ಯಾವುದೇ ಕಂಪನಿಯ ನಿರ್ದೇಶಕನಾಗುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ. ಈಗಾಗಲೇ ಇದ್ದ ಕಂಪೆನಿಗಳ ನಿರ್ದೇಶಕ ಹುದ್ದೆಗಳನ್ನು ಕಳೆದುಕೊಳ್ಳುತ್ತಾನೆ. ಈ ಕಳಂಕ ಸಮೂಹದ ಎಲ್ಲಾ ಕಂಪನಿಗಳಿಗೂ ಅಂಟಿಕೊಳ್ಳುತ್ತದೆ. ಬ್ಯಾಂಕುಗಳಿಂದ, ಸಾರ್ವಜನಿಕರಿಂದ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯುವುದು ಕಷ್ಟ ಸಾಧ್ಯ. ಇವರ ಮೇಲೆ ಬ್ಯಾಂಕ್‌ ಸಾಲದ ದುರುಪಯೋಗದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಬ್ಯಾಂಕಗಳು ಕಂಪನಿಗಳ ಅಡಳಿತವನ್ನು ಬದಲಿಸಬಹುದು. ಇಂಥವರ ಸಾಲವನ್ನು ಇಟ್ಟ Corporate Debt Restructure ಹೆಸರಿನಲ್ಲಿ ಪುನರ್‌ ರಚನೆ ಮಾಡಲು ಸಾಧ್ಯವಿಲ್ಲ. ಒಮ್ಮೆ ಇಂಥ ಕಳಂಕ ಬಂದರೆ, ಇದರಿಂದ ಹೊರಗೆ ಬರುವುದು ತುಂಬಾ ಕಷ್ಟ ಮತ್ತು ಇದಕ್ಕೆ ಅಪಾರ ಸಮಯಬೇಕು. ಇದಕ್ಕೂ ಮೇಲಾಗಿ ಇದು ಸಾಲಗಾರನ ಸಾಮಾಜಿಕ ವರ್ಚಸ್ಸಿಗೆ ಮತ್ತು ಮಾರುಕಟ್ಟೆ ಗೌರವಕ್ಕೆ, ಲಾಗಾಯ್ತಿನಿಂದ ಬೆಳೆಸಿ ಮತ್ತು ಉಳಿಸಿಕೊಂಡ ಬ್ರ್ಯಾಂಡ್‌ ಇಕ್ವಿಟಿಗೆ ದಕ್ಕೆ ಮತ್ತು ಚ್ಯುತಿಯನ್ನುಂಟುಮಾಡುತ್ತದೆ.

ಸಾಲಗಳು ಸುಸ್ತಿಯಾಗಲು ಕಾರಣವೇನು?
ಕೆಲವು ಬ್ಯಾಂಕಿಂಗ್‌ ತಜ್ಞರ ಪ್ರಕಾರ ಕೆಟ್ಟ ಸಾಲ ನೀತಿ (bad lendingpolicy), ಬಿಜಿನೆಸ್‌ ವಿಫ‌ಲತೆ, ಬ್ಯಾಂಕಿನ ಅಂತರಿಕ ನೀತಿ ನಿಯಮಾವಳಿಗಳು, ಕ್ರೆಡಿಟ್ ಪಾಲಿಸಿ ಮತ್ತು ಸಾಲ ನೀಡುವಾಗಿನ ನಿಬಂಧನೆಗಳು ಕಾರಣ. ರಿಸರ್ವ್‌ ಬ್ಯಾಂಕ್‌ನ ನಿವೃತ್ತ ಡೆಪ್ಯುಟಿ ಗವರ್ನರ್‌ ಒಬ್ಬರ ಪ್ರಕಾರ, ಸಾಲದ ಅರ್ಜಿಯ ಪರಿಶೀಲನೆ ಮತ್ತು ವಿಶ್ಲೇಷಣೆಯಲ್ಲಿ ವೃತ್ತಿಪರತೆಯ ಕೊರತೆ, ಸಾಕಷ್ಟು ದಾಖಲೆ, ಕಾಗದ ಪತ್ರಗಳನ್ನು ತೆಗೆದುಕೊಳ್ಳದಿರುವುದು. ಸಾಲದ ಅಂತಿಮ ಬಳಕೆಯ ಮೇಲೆ ನಿಗಾ ಇರಿಸದಿರುವುದು ಮತ್ತು ಸಾಲಗಾರರನ್ನು, ಸಾಲವನ್ನು ನಿರಂತರವಾಗಿ ಫಾಲೋ ಅಫ್ ಮಾಡದಿರುವುದು. ಆದರೆ, ಬ್ಯಾಂಕಿನವರು ಮತ್ತು ಬ್ಯಾಂಕ್‌ ಕಾರ್ಮಿಕ ಸಂಘಗಳು ಇದನ್ನು ಸಾರಾಸಗಟಾಗಿ ಅಲ್ಲಗೆಳೆಯುತ್ತಾರೆ.ಬ್ಯಾಂಕುಗಳಲ್ಲಿ ಸಾಲ ಮಂಜೂರಿ ಮತ್ತು ವಿಲೇವಾರಿ ಕೇವಲ ಒಬ್ಬ ಸಿಬ್ಬಂದಿ ಅಥವಾ ಅಧಿಕಾರಿಯ ವ್ಯಾಪ್ತಿಗೆ ಬರದೇ, ಮೂರು -ನಾಲ್ಕು ಅಧಿಕಾರಿಗಳ ಅಮೂಲಾಗ್ರ ವಿಶ್ಲೇಷಣೆ, ಮೇಲ್ವಿಚಾರಣೆಗೆ ಒಳಪಡುತ್ತದೆ. ಎಲ್ಲರಿಂದಲೂ ಒಮ್ಮತ ಏರ್ಪಟ್ಟಾಗಲೇ ಸಾಲ ವಿಲೇವಾರಿ ಯಾಗುವುದು. ಬ್ಯಾಂಕುಗಳು ಕೇಳುವ ಕಾಗದ ಪತ್ರಗಳು, ದಾಖಲೆಗಳ ಸಂಖ್ಯೆಯ ಬಗೆಗೆ ಸಾಲಗಾರರ ಆಕ್ರೋಶವಿದ್ದರೂ, ಅವುಗಳು ಪರಿಪೂರ್ಣವಾಗಿ ಬ್ಯಾಂಕಿಗೆ ಸಲ್ಲಿಸುವವರೆಗೆ ಸಾಲ ವಿಲೇವಾರಿ ಯಾಗುವುದಿಲ್ಲ. ಕೆಲವು ಅನಿವಾರ್ಯ ಸಂಬಂಧದಲ್ಲಿ ಕೆಲವು ಅಪವಾದಗಳು ಇರಬಹುದಾದರೂ, ಈ ನಿಟ್ಟಿನಲ್ಲಿ ಬ್ಯಾಂಕುಗಳು ದೃಢವಾದ ನಿಲುವು ಹೊಂದಿರುತ್ತವೆ. ಹಾಗೆಯೇ ತಮ್ಮ ಕಾರ್ಯ ಪದ್ಧತಿಯ ಚೌಕಟ್ಟಿನಲ್ಲಿ ಸಾಲದ ಮೊತ್ತದ ಅಂತಿಮ ಬಳಕೆಯನ್ನು ಮಾನಿಟರ್‌ ಮಾಡುತ್ತವೆ. ಆದರೆ, ಎಲ್ಲಾ ಹಂತದಲ್ಲಿಯೂ ಇದು ಅಸಾಧ್ಯದ ಮಾತು. ಇದು ವ್ಯಾವಹಾರಿಕವಾಗಿ ಸಾಧ್ಯವಿಲ್ಲ ಕೂಡಾ. ತಮ್ಮ ಹಣಕಾಸು ವ್ಯವಹಾರದಲ್ಲಿ ಬ್ಯಾಂಕುಗಳ ಅತಿಯಾದ ಹಸ್ತಕ್ಷೇಪವನ್ನು ಸಾಲಗಾರರರು ಲೈಕ್‌ ಮಾಡುವುದಿಲ್ಲ. ಇವರ ಪ್ರಕಾರ ಕೆಲವು ಸಾಲಗಾರರ ಮನೋಸ್ಥಿತಿ ಬದಲಾಗಿದೆ. ಸಾಲ ಮರುಪಾವತಿ ಮಾಡಲೇಬೇಕು ಎನ್ನುವುದು, ಈಗ ಸಾಲ ಮರುಪಾವತಿ ಮಾಡಿದರಾಯಿತು ಎಂದು ಬದಲಾಗಿದೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಕಾರಣ ಸಾಲ ಮನ್ನಾ ಎಂದೂ ದೂಷಿಸುತ್ತಾರೆ.

ಹಾಗೆಯೇ ಸಾಲ ವಸೂಲಾತಿ ನಿಯಮಾವಳಿಗಳು ಮತ್ತು ಕಾನೂನುಗಳು ದುರ್ಬಲ ಮತ್ತು ಅದಕ್ಕೊಂದು ಸಮಯ ಪರಿಮಿತಿ ಇಲ್ಲದಿರುವುದು ವಸೂಲಾತಿ ಪ್ರಕ್ರಿಯೆ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ ಎಂದೂ ಅವರು ಹೇಳುತ್ತಾರೆ. ಅದಕ್ಕೂಮಿಗಿಲಾಗಿ ಸಾಲಕೊಟ್ಟವರನ್ನು ದೂಷಿಸದೇ, ದಾಖಲೆಗಳಲ್ಲಿನ ಕಾಗದ ಪತ್ರಗಳಲ್ಲಿನ ಕೆಲವು ಅನಿವಾರ್ಯ, ಆಕಸ್ಮಿಕ ನ್ಯೂನತೆಗಳನ್ನು ದೊಡ್ಡದು ಮಾಡದೇ, ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡಬೇಕು ಎನ್ನುವ ನೈತಿಕತೆಯ ಬದ್ದತೆಗೆ ಒತ್ತು ನೀಡಬೇಕು ಎಂದು ಅವರು ಹೇಳುತ್ತಾರೆ. ಕಾಗದ ಪತ್ರಗಳಲ್ಲಿ ದೋಷ ಇರಬಹುದು. ಆದರೆ ಸಾಲವನ್ನು ತೆಗೆದುಕೊಂಡ ಸತ್ಯವನ್ನು ಸಾಲಗಾರ ಮರೆಮಾಚಲಾಗದು ಮತ್ತು ಇದು ಅವನ ಬದ್ಧತೆ ಕೂಡಾ. ವ್ಯವಸ್ಥೆಯಲ್ಲಿನ ದೋಷವನ್ನು ಮುಚ್ಚಿಟ್ಟು, ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಅವರು ವಿರೋಧಿಸುತ್ತಾರೆ.

ಇದರಿಂದ ಬ್ಯಾಂಕುಗಳ ಮೇಲೆ ಏನು ಪರಿಣಾಮ?
ಬ್ಯಾಂಕುಗಳ ಲಾಭದ ಬಹುಪಾಲನ್ನು ಸುಸ್ತಿ ಸಾಲವನ್ನು ಕಡಿಮೆಮಾಡುವುದರಿಂದ ಬ್ಯಾಂಕುಗಳ ಲಾಭದ ಮೇಲೆ ಪರಿಣಾಮ ಬೀರುತ್ತಿದ್ದು, ಶೇರುದಾರರಿಗೆ, ಸರ್ಕಾರಕ್ಕೆ ಕಡಿಮೆ ಲಾಭಾಂಶ ದೊರಕುತ್ತದೆ. ಹಾಗೆಯೇ ಠೇವಣಿದಾರರಿಗೆ ದೊರಕುವ ಬಡ್ಡಿಯ ಪ್ರಮಾಣದಲ್ಲಿಯೂ ಕಡಿತವಾಗುತ್ತದೆ. ಸರ್ಕಾರದ ಕ್ಯಾಪಿಟಲ್ ಕಡಿಮೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next