ಶಾಸ್ತ್ರೀಯ ಹಾಗೂ ಲಘು ಸಂಗೀತ, ಭರತನಾಟ್ಯ, ಯಕ್ಷಗಾನ, ರಂಗಭೂಮಿ, ಚಿತ್ರಕಲೆ, ಫೋಟೋಗ್ರಾಫಿ ಹಾಗೂ ಸಾಹಿತ್ಯ ಮುಂತಾದವುಗಳಲ್ಲಿ ಅಪಾರ ಜ್ಞಾನ ಹೊಂದಿದ್ದು, ಆ ಕ್ಷೇತ್ರಗಳ ಗರಿಮೆಯನ್ನೂ, ಕಲಾವಿದರ ಏಳಿಗೆಯನ್ನೂ ಆಪ್ತತೆಯಿಂದ ಗೌರವಿಸಿ, ತಮ್ಮ ಲೇಖನ, ಉಪನ್ಯಾಸ, ಸಂಪಾದಕತ್ವ, ಸಂಘಟಕತ್ವಗಳಿಂದ ನಿರಂತರವಾಗಿ ತೊಡಗಿಸಿಕೊಂಡವರು ಎ. ಈಶ್ವರಯ್ಯನವರು. ಈ ಸಜ್ಜನ ಮಹಾಚೇತನವನ್ನು ಸ್ಮರಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಮಣಿಕೃಷ್ಣಸ್ವಾಮಿ ಅಕಾಡೆಮಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ಪ್ರತಿ ವರ್ಷ ಪ್ರಶಸ್ತಿಯನ್ನು ಈಶ್ವರಯ್ಯನವರ ಜನ್ಮದಿನವಾದ ಆ.12ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ನೀಡಲಾಗುವುದು.
ಈ ಸಲ ಪ್ರಶಸ್ತಿಗೆ ಭಾಜನರಾದವರು ಸಂಗೀತ ಉಪಾಸಕ ಡಾ| ವಿದ್ಯಾಭೂಷಣರು. ಹಲವಾರು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಡಿಪಾಯದಲ್ಲಿ ದಾಸವರೇಣ್ಯರ ಸಂಕೀರ್ತನೆಗಳನ್ನು ವಿಶಿಷ್ಟ ಶೈಲಿಯ ಭಕ್ತಿ ಗಾಯನದಿಂದ ಗಿ ಪ್ರಚಾರಗೈಯುತ್ತಾ ದಾಸವರೇಣ್ಯರ ಘನತೆಯನ್ನು ಇಂದಿಗೂ ಪ್ರಚಾರ ಮಾಡುತ್ತಿದ್ದು, ಇದೊಂದು ದಾಖಲಿಸಲ್ಪಟ್ಟ ವಿದ್ಯಮಾನ.
ಸಂಗೀತ ಕಛೇರಿಗಳು, ಭಕ್ತಿಗಾಯನ ಧ್ವನಿತಟ್ಟೆಗಳು, ಮಾತ್ರವಲ್ಲದೆ ಕಳೆದ 22 ವರ್ಷಗಳಿಂದ ಭಕ್ತಿ ಭಾರತಿ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ದಾಸ ಸಾಹಿತ್ಯದ ಪೋಷಣೆ ಮಾಡುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಕೊಡುಗೆಯನ್ನು ಅರ್ಪಿಸುತ್ತಿದ್ದಾರೆ.
ಈ ಬಾರಿ ಈಶ್ವರಯ್ಯನವರ 79ನೇ ಜನ್ಮದಿನವು ಪ್ರಾರ್ಥನಾ ಸಾಯಿನರಸಿಂಹನ್‌ರವರ ಕಛೇರಿ, ಲಕ್ಷ್ಮೀಶ ತೋಳ್ಪಾಡಿಯವರ ವಿದ್ಯಾಭೂಷಣರ ಕೃತಿ ನೆನಪೇ ಸಂಗೀತದ ಬಗ್ಗೆ ಉಪನ್ಯಾಸ ಮುಂತಾದ ಕಾರ್ಯಕ್ರಮಗಳೊಂದಿಗೆ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಸಂಪನ್ನಗೊಳ್ಳಲಿದೆ.
ಪ್ರತಿಭಾ ಎಂ.ಎಲ್. ಸಾಮಗ