ಬೆಂಗಳೂರು: ರಾಜ್ಯದಲ್ಲಿ “ಈಶಾ’ ವತಿಯಿಂದ ಬೃಹತ್ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ ಆರಂಭಿಸಲಾಗಿದೆ.
ಅಭಿಯಾನವು ಆ. 2ರಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ 1,785 ಗ್ರಾಮ ಪಂಚಾಯತ್‌ಗಳಲ್ಲಿ ನಡೆಯಲಿದೆ.
ಸದ್ಗುರುಗಳ ಮಾರ್ಗದರ್ಶನದಲ್ಲಿ ಈಶಾ ಔಟ್ರೀಚ್, ಮುಂದಿನ 8 ವಾರಗಳ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒಗಳ ಸಹಾಯದೊಂದಿಗೆ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಇಲಾಖೆ, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿಯನ್ನು ಮೂಡಿಸಲು 1,800 ಪ್ರಚಾರ ಕಾರ್ಯಕ್ರಮಗಳನ್ನು ಕಾವೇರಿ ಕೊಳ್ಳದ ಜಿಲ್ಲೆಗಳ ಗ್ರಾ. ಪಂ., ಜಿಲ್ಲಾ ಕೇಂದ್ರ ಕಚೇರಿ ಮತ್ತು ತಾಲೂಕು ಕೇಂದ್ರ ಕಚೇರಿಯಲ್ಲಿ ನಡೆಸುತ್ತಿದೆ.
ಈ ಉಪಕ್ರಮದ ಒಂದು ವಿಶೇಷತೆಯೆಂದರೆ, ಅಭಿಯಾನವನ್ನು “ಮರ ಮಿತ್ರ’ರ ಮೂಲಕ ನಡೆಸ ಲಾಗುತ್ತದೆ. 1,785 ಗ್ರಾಮ ಪಂಚಾಯತ್‌ಗಳಲ್ಲಿ, ಕಾವೇರಿ ಕೂಗು ಅಭಿಯಾನದ ತಂಡವು ಸ್ವಯಂಸೇವಕರಾದ “ಮರ ಮಿತ್ರ’ರನ್ನು ನೇಮಿಸುತ್ತದೆ. ಅವರು ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಳ್ಳಲು ಮತ್ತು ರೈತ ಸಮುದಾಯವನ್ನು ಬೆಂಬಲಿಸಲು ಸಮುದಾಯದ ಅನೇಕ ಪಾಲುದಾರರನ್ನು ಒಟ್ಟುಗೂಡಿಸುತ್ತಾರೆ.
ಕೆಲವೆಡಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಮುಖ ಸರಕಾರಿ ಅಧಿಕಾರಿಗಳು ಮತ್ತು ಜಿಲ್ಲೆಗಳ ಚುನಾಯಿತ ಸದಸ್ಯರು ಮತ್ತು ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿ, ದೇವನಹಳ್ಳಿ,ಯತೀಂದ್ರ ಸಿದ್ಧರಾಮಯ್ಯ, ಕೆ. ಎಸ್. ಲಿಂಗೇಶ್, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದು, ಇವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.