ಇಂಟರ್ನೆಟ್‌ನಲ್ಲಿ ಸಿನಿಮಾಗಳು, ರೆಸ್ಟೋರೆಂಟುಗಳು ಮುಂತಾದವಕ್ಕೆಲ್ಲಾ ಜನರು ರೆಕಮೆಂಡ್ ಮಾಡುವುದನ್ನು, ವಿಮರ್ಶೆ ಬರೆಯುವುದನ್ನು ನೋಡಿರಬಹುದು. ಅದು ಟ್ರೆಂಡ್ ಆಗಿ ಮಿಕ್ಕವರು ತಾವೂ ಆಕರ್ಷಿತರಾಗಿ ಅದೇ ಸಿನಿಮಾವನ್ನೋ ಇಲ್ಲಾ ಅದೇ ರೆಸ್ಟೋರೆಂಟಿಗೋ ಭೇಟಿ ಕೊಡುವುದೂ ಉಂಟು. ಎಂದಾದರೂ ಮೊಸರವಲಕ್ಕಿ ಟ್ರೆಂಡ್ ಆದ ಉದಾಹರಣೆ ಕೇಳಿದ್ದೀರಾ?
ತಿಂಗಳ ಹಿಂದೆ, ಶಿಕ್ಷಣ ಸಚಿವ ಸುರೇಶ್‌ಕುಮಾರ್‌ರವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಒಂದು ಹೋಟೆಲ್ ಕುರಿತಾದ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು. ಅಲ್ಲಿ ಸಿಗುವ ಮೊಸರವಲಕ್ಕಿ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಅವರು ಬರೆದುಕೊಂಡಿದ್ದರು. ಶಿರಸಿ ಸಮೀಪದ ಭಟ್ಟರ ಹೋಟೆಲ್ ಅದಾಗಿತ್ತು. ಪ್ರವಾಸಕ್ಕೆ ಬಂದಿದ್ದ ಸಚಿವರು ಶಿರಸಿ- ಹುಬ್ಬಳ್ಳಿ ಮಾರ್ಗದ ಇಸಳೂರಿನಲ್ಲಿ ರಸ್ತೆ ಪಕ್ಕ ಇರುವ ರಾಘವೇಂದ್ರ ಭವನದಲ್ಲಿ ತಿಂಡಿ ಸವಿದ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಯಿತು.
ಗಿರಾಕಿಗಳು ಬಂದರು: ಮರುದಿನದಿಂದಲೇ ಅನೇಕ ಮಂದಿ ಹೋಟೆಲ್ ಹುಡುಕಿಕೊಂಡು ಬಂದರು. ಹುಬ್ಬಳ್ಳಿ, ಹಾವೇರಿ, ಶಿರಸಿ ಪೇಟೆಯಿಂದಲೂ ಜನರು ಬಂದರು. ಬಂದವರೆಲ್ಲರೂ ಮೊಸರವಲಕ್ಕಿಯನ್ನು ಕೇಳಿ ತಿಂದರು. ಇಸಳೂರು ಮೊಸರವಲಕ್ಕಿಯಿಂದಾಗಿ ಭಟ್ಟರ ಹೋಟೆಲ್ ಜನಪ್ರಿಯತೆ ಕೂಡ ಹೆಚ್ಚಿತು. ರಾಘವೇಂದ್ರ ಭವನದ ಮಾಲೀಕ ಬಾಲಕೃಷ್ಣ ಶಂಕರ ಭಟ್ಟ ಅವರ ಹೋಟೆಲ್‌ನಲ್ಲಿ ಕಲಸಿದ ಅವಲಕ್ಕಿಗೆ ಸ್ವಾದಿಷ್ಟದ ಮೊಸರು, ಸಕ್ಕರೆ, ಮೇಲೆ ಉದುರಿಸಿಕೊಡುವ ಖಾರಾಗೆ ಬೇಡಿಕೆ ದ್ವಿಗುಣಗೊಂಡಿತು.
ಬಾಲಕೃಷ್ಣ ಭಟ್ಟ ಹಾಗೂ ಅವರ ಮಗ, ಇನ್ನಿಬ್ಬರು ಹೋಟೆಲ್ ನಡೆಸುತ್ತಾರೆ. ಕಳೆದ ನಾಲ್ಕು ದಶಕಗಳಿಂದ ಹೋಟೆಲ್ ನಡೆಸುತ್ತಿದ್ದಾರೆ. ಅಪ್ಪ ಶಂಕರ ಭಟ್ಟ ಅವರಿಂದ ಮಗ ಕಲಿತ ಉದ್ಯೋಗ ಅವರ ಬದುಕಿಗೆ ಆಸರೆಯಾಗಿದೆ.
ಟೀ- ಕಷಾಯಕ್ಕೂ ಬೇಡಿಕೆ: ಈ ಹೋಟೆಲ್‌ನಲ್ಲಿ ಕೇವಲ ಮೊಸರವಲಕ್ಕಿ ಮಾತ್ರ ಅಲ್ಲ, ಉಪ್ಪಿಟ್ಟು, ಶಿರಾ, ಹೆಸರು ಕಾಳು ಉಸುಲಿ, ಚಿತ್ರಾನ್ನ, ಪುಳಿಯೊಗರೆ, ಬನ್ಸು, ಇಡ್ಲಿ, ಶೇವು ಬಾಜಿ, ಮಿಸಳ ಬಾಜಿ ಕೂಡ ಫೇಮಸ್ಸು. ಟ್ರಕ್ ಡ್ರೆವರ್, ದೂರದ ಪ್ರವಾಸಿಗರ ಸಂಖ್ಯೆ ಇಲ್ಲಿ ಹೆಚ್ಚು, ಟೀ, ಕಾಫಿ, ಕಷಾಯಕ್ಕೂ ಬೇಡಿಕೆ ಇದೆ. “ಬಹಳ ಮಂದಿ ಗಿರಾಕಿಗಳಿದ್ದರೆ ಬಜೆ ಕೂಡ ಮಾಡುತ್ತೇನೆ’ ಎನ್ನುತ್ತಾರೆ ಭಟ್ಟರು.
ದಿನವೊಂದಕ್ಕೆ 3,000 ರೂ.ಗೂ ಅಧಿಕ ವ್ಯಾಪಾರ ನಡೆಸುತ್ತಾರೆ. ಶಂಕರಪೋಳಿ, ಖಾರಾ, ಕರಿದ ಶೇಂಗಾ ಬೀಜಗಳಿಗೆ ಕೂಡ ಇಲ್ಲಿನದೇ ಆದ ರುಚಿಯಿದೆ. ಸ್ಥಳೀಯವಾಗಿ ದಿನಕ್ಕೆ 35 ಲೀ.ಗೂ ಅಧಿಕ ಹಾಲು ಖರೀದಿಸಿ ತಯಾರಿಸಿದ ತಾಜಾ ಮೊಸರಿನಿಂದ ಅವಲಕ್ಕಿ ತಿಂದವರು ಭಟ್ಟರ ಹೊಟ್ಟೆ ಕೂಡ ತಣ್ಣಗಿರಲಿ ಎಂದು ಹರಸುವಷ್ಟು ವೈನಾಗಿದೆ.
ಸ್ಥಳ: ರಾಘವೇಂದ್ರ ಭವನ, ಶಿರಸಿ ಹುಬ್ಬಳ್ಳಿ ಹೆದ್ದಾರಿ ಪಕ್ಕ, ಇಸಳೂರು, ಶಿರಸಿ (ಉ.ಕ)
ಸಮಯ: ಬೆಳಿಗ್ಗೆ 5- ರಾತ್ರಿ 8
ವಾರದ ಎಲ್ಲ ದಿನವೂ ತೆರೆದಿರುತ್ತದೆ.
* ರಾಘವೇಂದ್ರ ಬೆಟ್ಟಕೊಪ್ಪ