ಹೊಸದಿಲ್ಲಿ: ನೀವು ಆಧಾರ್ ಕಾರ್ಡ್ ಅನ್ನು ಪಡೆದು ಹತ್ತು ವರ್ಷಗಳಾಗಿದೆಯೇ? ಹಾಗಿದ್ದರೆ ಅದರಲ್ಲಿನ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು. ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಬುಧವಾರ ಮನವಿ ಮಾಡಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಿದೆ,
ಆನ್‌ಲೈನ್ ಮೂಲಕ ಅಥವಾ ಆಧಾರ್ ಕೇಂದ್ರಗಳಲ್ಲಿ ಮಾಹಿತಿಯನ್ನು ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕೇಂದ್ರಕ್ಕೆ ತೆರಳಿ ಮಾಹಿತಿ ಅಪ್‌ಡೇಟ್ ಮಾಡುವುದಿದ್ದರೆ ಸರಕಾರ ನಿಗದಿಪಡಿಸಿದ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
“ಕಳೆದ 10 ವರ್ಷಗಳಿಂದ ಆಧಾರ್ ಸಂಖ್ಯೆಯು ವ್ಯಕ್ತಿಯ ಗುರುತಿನ ದಾಖಲೆ ಯಾಗಿ ಹೊರಹೊಮ್ಮಿದೆ. ಸರಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳ ಉಪಯೋಗ ಪಡೆಯಲು ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ಸರಕಾರಿ ಯೋಜನೆಗಳ ಫಲವನ್ನು ಪಡೆಯಲು ಸಾರ್ವಜನಿಕರು ತಮ್ಮ ಇತ್ತೀಚಿನ ವೈಯಕ್ತಿಕ ಮಾಹಿತಿಗಳೊಂದಿಗೆ ಆಧಾರ್ ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ. ಅಲ್ಲದೆ, ಇದರಿಂದ ಆಧಾರ್ ದೃಢೀಕರಣದಲ್ಲಿ ಅನಾನುಕೂಲತೆ ತಪ್ಪಿಸಬಹುದಾಗಿದೆ,’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ.
“ಈ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದಿದ್ದವರು, ಈವರೆಗೆ ತಮ್ಮ ಮಾಹಿತಿಗಳ ಬಗ್ಗೆ ಅಪ್‌ಡೇಟ್ ಮಾಡದೇ ಇದ್ದರೆ, ಕೂಡಲೇ ತಮ್ಮ ದಾಖಲಾತಿಗಳನ್ನು ಅಪ್ಡೆàಟ್ ಮಾಡಬೇಕು,’ ಎಂದು ಸಚಿವಾಲಯ ವಿನಂತಿಸಿದೆ.
ವ್ಯಕ್ತಿಯ ಗುರುತು, ವಾಸದ ಸ್ಥಳವನ್ನು ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾಹಿತಿ ನವೀಕರಣಕ್ಕೆ ಈ ವೆಬ್‌ಸೈಟ್ ಲಾಗಿನ್ ಮಾಡಬಹುದು.
https://myaadhaar.uidai.gov.in/