Advertisement

ತ್ರಿವಳಿ ತಲಾಕ್‌ ಇಸ್ಲಾಂನಲ್ಲಿ ಮೂಲಭೂತ ಹಕ್ಕೇ ? ಸುಪ್ರೀಂ ಪ್ರಶ್ನೆ

03:31 PM May 11, 2017 | Team Udayavani |

ಹೊಸದಿಲ್ಲಿ : ತ್ರಿವಳಿ ತಲಾಕ್‌ ಇಸ್ಲಾಂ ಧರ್ಮದಲ್ಲಿ ಮೂಲಭೂತ ಹಕ್ಕಾಗಿದೆಯೇ ? ಎಂದು ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರಕಾರಕ್ಕೆ ಪ್ರಶ್ನಿಸಿತು. 

Advertisement

ತ್ರಿವಳಿ ತಲಾಕ್‌ ಕುರಿತ ತನ್ನ ವಾದವನ್ನು ಮಂಡಿಸುತ್ತಾ ಕೇಂದ್ರ ಸರಕಾರ “ತ್ರಿವಳಿ ತಲಾಕ್‌ ಅಸಾಂವಿದಾನಿಕವಾಗಿದೆ’ ಎಂದು ಹೇಳಿತು.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವು ಇಂದು ತ್ರಿವಳಿ ತಲಾಕ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಮುಸ್ಲಿಂ ಮಹಿಳೆಯರ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡಿತು. 

“ನಾವು ತ್ರಿವಳಿ ತಲಾಕ್‌ನ ಸಿಂಧುತ್ವವನ್ನು ನಿರ್ಧರಿಸಲಿದ್ದೇವೆ’ ಎಂದು ಸಾಂವಿಧಾನಿಕ ಪೀಠದ ಮುಖ್ಯಸ್ಥ ಜಗದೀಶ್‌ ಸಿಂಗ್‌ ಖೇಹರ್‌ ಹೇಳಿದರು.  ತ್ರಿವಳಿ ತಲಾಕ್‌ ಇಸ್ಲಾಂ ಧರ್ಮದಲ್ಲಿ  ಮೂಲಭೂತ ಹಕ್ಕಾಗಿ ಇದೆಯೇ ಎಂಬುದಕ್ಕೆ ವಿಶೇಷ ಮಹತ್ವ ನೀಡುವಂತೆ ಅವರು ಸಂಬಂಧಪಟ್ಟವರನ್ನು ಕೇಳಿಕೊಂಡರು. 

ತ್ರಿವಳಿ ತಲಾಕ್‌ ಅನ್ನು ಭಾರತೀಯ ಸಂವಿಧಾನದಡಿ ಮೂಲಭೂತ ಹಕ್ಕನ್ನಾಗಿ ಪ್ರಯೋಗಿಸಲು ಸಾಧ್ಯವೇ ಎಂಬುದನ್ನು ಅರ್ಜಿದಾರರು ಮತ್ತು ಉತ್ತರದಾಯಿಗಳು ಕೋರ್ಟಿಗೆ ಸ್ಪಷ್ಟಪಡಿಸಬೇಕು ಎಂದು ವರಿಷ್ಠ ನ್ಯಾಯಮೂರ್ತಿ ಹೇಳಿದರು. 

Advertisement

ತ್ರಿವಳಿ ತಲಾಕ್‌ನ ಸಿಂಧುತ್ವವನ್ನು ನಿರ್ಧರಿಸುವಾಗ ಕೋರ್ಟ್‌ ನೀಡಬಹುದಾದ ನಿರ್ದೇಶಗಳನ್ನು ವಿಶಾಲ ಮಾನದಂಡದ ಮೇಲೆ ರೂಪಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆ ಅವರು ಕೋರಿದರು. 

ಸಾಂವಿಧಾನಿಕ ನ್ಯಾಯಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳೆಂದರೆ ಜಸ್ಟಿಸ್‌ ಜೋಸೆಫ್, ಜಸ್ಟಿಸ್‌ ರೊಹಿನ್‌ಟನ್‌ ಫಾಲಿ ನಾರಿಮನ್‌, ಜಸ್ಟಿಸ್‌ ಉದಯ್‌ ಉಮೇಶ್‌ ಲಲಿತ್‌ ಮತ್ತು ಜಸ್ಟಿಸ್‌ ಎಸ್‌ ಅಬ್ದುಲ್‌ ನಜೀರ್‌. ಕುತೂಹಲಕರ ಸಂಗತಿ ಎಂದರೆ ಸಾಂವಿಧಾನಿಕ ಪೀಠದ ಸದಸ್ಯರು ಸಿಕ್ಖ್, ಕ್ರೈಸ್ತ, ಪಾರಸೀ, ಹಿಂದು ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ. 

ತ್ರಿವಳಿ ತಲಾಕ್‌ ಸಿಂಧುತ್ವ ನಿರ್ಧರಿಸುವ ತನ್ನ ವಿಚಾರಣೆಯಲ್ಲಿ ತಾನು ಮುಸ್ಲಿಂ ಧರ್ಮದಲ್ಲಿ ಚಾಲ್ತಿಯಲ್ಲಿರುವ ಬಹುಪತ್ನಿತ್ವ ಪದ್ಧತಿಯನ್ನು ಚರ್ಚಿಸುವುದಿಲ್ಲ ಎಂದು ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿತು. 

ತ್ರಿವಳಿ ತಲಾಕ್‌ ಕುರಿತ ನ್ಯಾಯಾಂಗ ಪರಾಮರ್ಶೆ ನಡೆಯುವುದನ್ನು ಅಖೀಲ ಭಾರತ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ (ಎಐಎಂಪಿಎಲ್‌ಬಿ) ವಿರೋಧಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next