Advertisement
ಟಿ.ವಿ ಪರದೆ ತುಂಬೆಲ್ಲಾ ಟೆಕ್ಕಿ ಅಮೃತಾ -ಆಕೆಯ ಪ್ರಿಯಕರನದ್ದೇ ಸುದ್ದಿ. ಘಟನೆಯ ಹಿಂದಿನ ಸತ್ಯಾಸತ್ಯತೆಗಳ ಬಗ್ಗೆ ನಿಜಕ್ಕೂ ಯಾರಿಗೂ ಮಾಹಿತಿ ಇದ್ದಂತಿಲ್ಲ. ಆದರೆ, ಆಕೆ ಪ್ರೀತಿಗಾಗಿ ತನ್ನ ತಾಯಿ ಮತ್ತು ತಮ್ಮನನ್ನು ಕೊನೆಗಾಣಿಸಿ ಹೊರಟಿದ್ದಾಳೆ ಎಂಬ ಮಾಹಿತಿ ನಿರಂತರವಾಗಿ ಬಿತ್ತರವಾಗುತ್ತಿತ್ತು. ಇಲ್ಲಿ ದೊಡ್ಡದಾಗಿ ಉಳಿಯುವ ಪ್ರಶ್ನೆ ” ತಾವು ಬದುಕಲು ಯಾರನ್ನಾದರೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಕೊಲ್ಲಬಹುದೇ? ಹೀಗೆ ಮಾಡಿದರೆ, ಅದು ಮನುಷ್ಯನ ಬದುಕು ಆಗುವುದಾದರೂ ಹೇಗೆ? ಕ್ರೂರ ಮೃಗಗಳಿಂತ ಹೀನಾಯ. ಪ್ರಾಣಿಗಳೇ ಎಷ್ಟೋ ವಾಸಿ, ಆಹಾರಕ್ಕಾಗಿ ಮಾತ್ರ ಭೇಟೆಯಾಡುತ್ತವೆ, ದುರಾಸೆಗಲ್ಲ.
Related Articles
Advertisement
ಈಕೆಯ ಬಗ್ಗೆ ಕೇಳಿದಾಗ, ತುಂಬಾ ಹಿಂದೆ ಓದಿದ ಋಷಿ ಮತ್ತು ಋಷಿ ಪತ್ನಿಯ ಕತೆ ನೆನಪಾಗುತ್ತಿದೆ. ಋಷಿಯೊಬ್ಬನಿಗೆ ರಾಜಕುಮಾರಿಯನ್ನು ಮದುವೆ ಮಾಡಿಕೊಡಲಾಗುತ್ತದೆ. ನಂತರ ಋಷಿ, ಹದಿನಾರು ವರ್ಷಗಳ ಸುದೀರ್ಘ ಕಾಲ ಅಖಂಡ ಕೃತಿಯೊಂದರ ರಚನೆಗೆ ಕೂತುಬಿಡುತ್ತಾನೆ. ಆ ಹದಿನಾರು ವರ್ಷ ಆ ರಾಜಕುಮಾರಿ ಮಾಡಿದ ಸೇವಾನಿಷ್ಠೆಯೇ ಆ ಕೃತಿ ರಚನೆಗೆ ಮಹತ್ತರ ಕೊಡಗುಯಾಗುತ್ತದೆ. ಇಷ್ಟೆಲ್ಲಾ ಮಾಡಿದ ಈಕೆಯನ್ನು ಸ್ವಲ್ಪವೂ ಗಮನಿಸದೇ ಹೋಗಿದ್ದಕ್ಕೆ, ಕೊಂಚವೂ ಆಕೆಯ ಬಗ್ಗೆ ಯೋಚಿಸದೇ ತನ್ನ ತಪಸ್ಸಿನ ಕಡೆ ಮಾತ್ರ ಗಮನ ಹರಿಸಿದಕ್ಕೆ ಋಷಿಗೆ ತೀವ್ರವಾಗಿ ವ್ಯಥೆಯಾಗುತ್ತದೆ. ತನ್ನ ಇಡೀ ತಪದ ರಚನೆಗೆ ಆಕೆಯ ಹೆಸರಿಟ್ಟು, ನಿನ್ನ ಹೆಸರು ಅಜರಾಮರವಾಗುತ್ತದೆ ಎಂದು ಪರಿತಪನೆಯೊಂದಿಗೆ ಹೊರಟುಬಿಡುತ್ತಾನೆ. ಇದು ಚಿಕ್ಕಂದಿನಿಂದಲೂ ಮನದಲ್ಲಿ ಉಳಿದ ಕತೆ.
ಫ್ರಾನ್ಸ್ ನ ಪ್ರಸಿಡೆಂಟ್ ಎಮ್ಯಾನುಯಲ್‌ನ ಅಗಾಧ ಪ್ರೇಮ ಕತೆ ಇಡೀ ಲೋಕ ಒಮ್ಮೆ ತಿರುಗಿ ನೋಡುವಂಥದ್ದು. ತನಗಿಂತ 23 ವರ್ಷ ದೊಡ್ಡವಳಾದ, ಮೂರು ಮಕ್ಕಳಿದ್ದ ತನ್ನ ಟೀಚರ್‌ಅನ್ನು 16 ರ ಹರೆಯದಿಂದಲೇ ಆರಾಧಿಸಿ, ಆಕೆಗಾಗಿ ಪರಿತಪಿಸಿ ಮದುವೆಯಾಗುತ್ತಾನೆ ಎಮ್ಯಾನುಯಲ್. ಆತ ಬಯಸಿದ್ದರೆ ಪ್ರಸಿದ್ಧ ನಟಿಯರು, ಮಾಡೆಲ್‌ಗಳು ಅವನ ಸುತ್ತಾ ನಿಲ್ಲುತ್ತಿದ್ದರು. ಆತ ಪರಿಶುದ್ಧ ಪ್ರೇಮಿಯಾಗಷ್ಟೇ ತನ್ನ ಟೀಚರ್ ಹಿಂದೆ ಬಿದ್ದ. ಹೆಸರು, ಅಂತಸ್ತಿನಿಂದ ಹಿಂದೆಯಲ್ಲ. ಎರಡು ಪರಮಾವಧಿಗಳು ಏಕೆ ಹೀಗಾಗುತ್ತದೆ? ಆ ಉಪನ್ಯಾಸಕ್ಕೆ ಹಾಜರಾದ ನಂತರ ಹಲವು ದಿನ ಹಲವು ಪ್ರಶ್ನೆಗಳು ದಿಕ್ಕುಗೆಡಿಸಿದವು. ವಿವಾಹವೆಂಬ ಸಂಸ್ಥೆ ಒಂದು ಸೆಕ್ಯೂರ್ಡ್ ಫೀಲಿಂಗ್ ಒದಗಿಸಿದ ದಿನವೇ ಇನ್ಯಾರ ಬಗ್ಗೆಯೂ ಯೋಚಿಸುವಂತಿಲ್ಲ ಎನ್ನುವ ಒಂದು ನಿರ್ಬಂಧಕ್ಕೊಳಪಡಿಸಿ ಹೃದಯದ ಹಾಡನ್ನು ಕಸಿಯುತ್ತದೆಯೇ? ಗೊತ್ತಿಲ್ಲ. ವಿವಾಹ ಬಂಧನ ಅದರಲ್ಲಿರುವ ನೆಮ್ಮದಿ ಮತ್ತು ಅ‚ಷ್ಟೇ ಸಮನಾಗಿ ಇರುವ ದೌರ್ಬಲ್ಯಗಳನ್ನೂ ಸ್ವೀಕರಿಸಬೇಕಾಗುತ್ತದೆ. ಅಕಸ್ಮಾತ್ ಯಾವುದಾದರೂ ಸೆಳೆತಕ್ಕೆ ಸಿಕ್ಕರೂ ಅರಳಿ ನಿಂತ ಆ ಪ್ರೇಮದ ತೀವ್ರತೆಯನ್ನು ಹತ್ತಿಕ್ಕಿ ಮದುವೆಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕೇ? ಆದರೆ, ಹೃದಯಕ್ಕೆ ಈ ತರ್ಕಗಳು ಅರ್ಥವಾಗುವುದಾದರೂ ಹೇಗೆ? ಅದರ ಲಯ ನಿತ್ಯ ಹರಿದ್ವರ್ಣ ನದಿಯಂತೆ. ಈ ಬಂಧನವೇ ಇಂಥ ದಾರಿಗಳಿಗೆ ಎಡೆ ಮಾಡಿಕೊಡುತ್ತದೆಯೇ. ಮನುಷ್ಯನ ಮನಸಿನ ಚಂಚಲತೆ ಅಷ್ಟೊಂದು ತೀವ್ರವಾದುದೇ, ಸದಾ ಅದೇ ಯಾಕೆ ಗೆಲ್ಲಬೇಕು? ಯಾಕೆ ಹೀಗಾಗುತ್ತದೆ?
ಆದರೆ ಒಮ್ಮೆ ಆತ್ಮ ಸಮರ್ಪಣೆ- ಸಂಪೂರ್ಣತೆಯ ಭಾವ ಸಾಧ್ಯವಾದಲ್ಲಿ ತಪ್ಪಿಯೂ ಬೇರೊಬ್ಬರ ಬಗ್ಗೆ ಆಲೋಚನೆಗಳು ಮೂಡಲಾರವೇನೋ. ಯಾವ್ಯಾವುದೋ ಲೆಕ್ಕಾಚಾರ, ಅಗತ್ಯಕ್ಕಾಗಿ ಹುಟ್ಟಿದ ಬಂಧಗಳೂ ಅದೇ ದಾರಿಯಲ್ಲಿ ಸಾಗಿ, ಆ ಕ್ಷಣದ ಸತ್ಯವಾಗಿ ಉಳಿಯುತ್ತವೇನೋ. ಆದರೆ, ವ್ಯಕ್ತಿಯ ಸ್ಥಿತಿಗತಿ ಆಧರಿಸಿ ಅರಳುವ ಭಾವನೆಗಳಿಗಿಂತ ಆ ವ್ಯಕ್ತಿಯನ್ನೇ ಆಧರಿಸಿ ಅರಳುವ ಭಾವನೆಗಳು ಆರಾಧನೆಯಂತಾಗುತ್ತದೆ. ಇಂಥದ್ದೊಂದು ಭಾವ ಸಾಧ್ಯವಾದರೆ ಅದರ ಮುಂದೆ ಜಗದ ಉಳಿದೆಲ್ಲವೂ ಕ್ಷುಲ್ಲಕವೇ.
ಇನ್ನೇನು ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಅಮೃತಾ- ಆಕೆಯ ಪ್ರಿಯಯಕರನ ಚಿತ್ರಗಳನ್ನು ಟಿ ವಿ ಪರದೆಯ ತುಂಬೆಲ್ಲಾ ಹರಡಿಕೊಂಡಿದ್ದು ನೋಡಿ, ಮನುಷ್ಯನ ಚಾಂಚಲ್ಯ, ವಾಂಛೆ ಅವನ ರಕ್ತದಲ್ಲಿ ತುಂಬಿರುವ ವಾಮ್ಯೋಹದ ಅಗಾಧತೆಗೆ ಮನಸೇಕೋ ಖನ್ನವಾಯಿತು. ನಾಲ್ಕಾರು ದಿನಗಳ ಮೊದಲಷ್ಟೇ ಓದಿದ್ದ ಯಶೋಧರ ಚರಿತೆಯ ವಿವಿಧ ವಿಮರ್ಶೆಗಳು ಶೂನ್ಯಕ್ಕೆ ದೂಡಿದವು. ಸಂಬಂಧಗಳು ಆಕ್ಷಣದ ಸತ್ಯವಾಗದೇ ಚಿರಂತನವಾಗಬಾರದೇ ಎನ್ನುವ ಅಗಾಧ ಪ್ರಶ್ನೆ ಮಾತ್ರ ಮರುಕಳಿಸುತ್ತಲೇ ಇತ್ತು. ಆಯ್ಕೆ ಇಲ್ಲದ ದಾರಿಯಾಗಿ ಕಂಡಾಗ ಮಾತ್ರ ಪ್ರೀತಿ ಉಳಿಯುತ್ತದೆ ಎನ್ನುತ್ತಾರೆ. ನಿಜಕ್ಕೂ ನಮಗೆ ಉಂಟಾಗಿರುವುದು ಇಂಥದೇ ಪ್ರೀತೀನಾ?
ಉತ್ತರಿಸಿಕೊಳ್ಳಬೇಕಾದವರು ನಾವೇ…….
ಮಂಜುಳಾ ಡಿ.