ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದವರಿಗೆ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲ? ಹೀಗೊಂದು ಲೆಕ್ಕಾಚಾರ ಕಾಂಗ್ರೆಸ್ ವಲಯ ದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್
ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಲ್ಲಿ ಸ್ಪರ್ಧಿಸಿದ್ದವರಿಗೆ ಈ ಬಾರಿ ಟಿಕೆಟ್ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಜ.13 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮುಂದೆ ವಿಷಯ ಪ್ರಸ್ತಾಪಿಸಿದ್ದಾರೆ. ಜತೆಗೆ ಈ ಬಗ್ಗೆ ಆಲೋಚನೆ ನಡೆಸುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಕಾಶ್ ರಾಠೊಡ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್, ಸಿ. ನಾರಾಯಣಸ್ವಾಮಿ, ಸಲೀಂ ಅಹಮದ್, ಮಂಜುನಾಥ ಭಂಡಾರಿ ಹಾಗೂ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ
ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಬೇಕಾ? ಬೇಡವಾ? ಎನ್ನುವ ಕುರಿತು ಆಲೋಚನೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.
2014ರಲ್ಲಿ ಸ್ಪರ್ಧಿಸಿ ಸೋತವರು 2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಿ. ಇವರ ಬದಲಿಗೆ ಪರ್ಯಾಯ ಅಭ್ಯರ್ಥಿಗಳ ಬಗ್ಗೆ ಆಲೋಚನೆ ಮಾಡಿ ಎಂದು ರಾಹುಲ್ ತಿಳಿಸಿದ್ದಾರೆ. ಕಾಂಗ್ರೆಸ್ ಚುನಾವಣೆಯಷ್ಟೇ ಅಲ್ಲದೇ, 2019ರ ಚುನಾವಣೆಗೂ ಹೆಚ್ಚಿನ ಗಮನ ನೀಡಬೇಕಿರುವುದರಿಂದ ಅವರು, ಆ ಕ್ಷೇತ್ರಗಳಲ್ಲೇ ಸಿದ್ಧತೆ ನಡೆಸಲಿ ಎಂಬುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವಾಗಿದೆ ಎನ್ನಲಾಗುತ್ತಿದೆ.
ಸೋತರೂ ಇಬ್ಬರಿಗೆ ಸಚಿವ ಸ್ಥಾನ: ಪಕ್ಷದ ಆದೇಶ ಪಾಲನೆಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ಎ. ಮಂಜು ಸೋತರೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆಲುವು ಪಡೆದ ಪ್ರಕಾಶ್ ಹುಕ್ಕೇರಿ ಸಚಿವ ಸ್ಥಾನ ಕಳೆದುಕೊಂಡರು. ಸದ್ಯದ ಪರಿಸ್ಥಿತಿಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ಅನುಮಾನ ಎನ್ನುವುದನ್ನು ಅರಿತಿರುವ ಬಹುತೇಕರು, ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಪಡೆದರೆ ಮಂತ್ರಿಯಾಗುವ ವಿಶ್ವಾಸದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಪಕ್ಷದ ಅಭ್ಯರ್ಥಿಗಳಿಗೆ ಅನಗತ್ಯ ಗೊಂದಲ ಸೃಷ್ಠಿಸಿದಂತಾಗುತ್ತದೆ ಎನ್ನುವುದನ್ನು ತಪ್ಪಿಸಲು ರಾಹುಲ್ ಈ ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಕಾಂಕ್ಷಿಗಳು
ಪ್ರಕಾಶ್ ರಾಠೊಡ್ -ನಾಗಠಾಣ-ವಿಜಯಪುರ
ಲಕ್ಷ್ಮೀ ಹೆಬ್ಟಾಳ್ಕರ್-ಬೆಳಗಾವಿ ಗ್ರಾಮೀಣ-ಬೆಳಗಾವಿ
ಸಿ. ನಾರಾಯಣಸ್ವಾಮಿ- ದೊಡ್ಡಬಳ್ಳಾಪುರ- ಬೆಂಗಳೂರು ಉತ್ತರ
ಪ್ರಕಾಶ್‌ಹುಕ್ಕೇರಿ- ಅಥಣಿ-ಚಿಕ್ಕೋಡಿ
ಸಲೀಂ ಅಹಮದ್- ಶಿಗ್ಗಾವಿ-ಹಾವೇರಿ
ಮಂಜುನಾಥ ಭಂಡಾರಿ- ಸೊರಬ-ಶಿವಮೊಗ್ಗ